love

ಇನ್ನೇನೂ ಹೇಳಲು ಉಳಿದಿಲ್ಲ. ಮರಣದ ಕೋಣೆಯ ಬಾಗಿಲು ತಟ್ಟದೆಯೇ ಒಳಗೆ ನುಗ್ಗಬೇಕೆಂದಿರುವೆ.

ಈ ಮೌನದ ದಾರಿಗಳಲ್ಲಿ ಮಾತುಗಳು ಉಸಿರು ಬಿಡಲಾಗದೆ ಬಿಕ್ಕಳಿಸುತ್ತಿವೆ. ಸರಿ ತಪ್ಪುಗಳನ್ನು ಯೋಚಿಸುವ ಹೊತ್ತು ಇದಲ್ಲ. ಇದು ನನ್ನ ಮತ್ತು ಅವಳ ಕೊನೇ ಭೇಟಿ.

ಅವಳ ಮುಂದೆ ಬಂದವನೇ ಅವಳನ್ನು ಬಾಚಿ ತಬ್ಬಿಕೊಂಡ. ಇದು ಕೊನೆಯ ಅಪ್ಪುಗೆ ಈ ಮಹಾ ಮೌನದ ನಡುವೆ ಅವಳ ಬಿಸಿಯುಸಿರ ಸ್ಪರ್ಶ. ಆ ಸ್ಪರ್ಶದಲ್ಲಿ ತಾನು ಮಗುವಂತಾಗುತ್ತಿದ್ದೇನೆ. ನಿಷ್ಕಂಳಕವಾದ ಈ ಪ್ರೀತಿ ಇನ್ನಷ್ಟು ಸುಂದರವಾಗಿ ಕಾಣುತ್ತಿದೆ. ನನ್ನ ನಿರ್ಧಾರ ಸರಿಯಾಗಿದೆ. ಈಗ ಸುಂದರವಾಗಿ ಕಾಣುವುದೆಲ್ಲ ಇನ್ನೊಂದು ಗಳಿಗೆಯಲ್ಲಿ…

ಸತ್ತ ಮೇಲೆ ಆಕಾಶದಲ್ಲಿ ನಕ್ಷತ್ರಗಳಾಗುತ್ತೇವೆಯಂತೆ ದೊಡ್ಡ ಸುಳ್ಳು..!!

ಚಿಕ್ಕಂದಿನಿಂದ ನಾವು ನಂಬಿಕೊಂಡು ಬಂದ ಸುಳ್ಳುಗಳಲ್ಲಿ ಇದೂ ಒಂದು…

ನಾನು ಹೋಗುತ್ತೇನೆ…

ನಿನ್ನ ಕವನಗಳು?

ಈ ಒಂದೇ ಒಂದು ವಾಕ್ಯ ನನ್ನ ಚಿತ್ತ ಚಂಚಲವಾಗುವಂತೆ ಮಾಡಿತು.

ಅವಳು ಬರ ಸೆಳೆದು ಕೊಂಡಳು.. ಇವತ್ತು ನನಗಾಗಿ ಕವನ ಬರೆದಿಲ್ಲವೇನೋ…

ಮುಂದಿನ ಪ್ರತೀ ನಿಮಿಷವೂ ನಾನು ಮಗುವಿನಂತೆ ಮುಗ್ಧತೆಯ ಮೂರ್ತಿಯಾಗಿ ನಲಿದಾಡಿದೆ..

ನಿಷ್ಕಳಂಕ ಪ್ರೀತಿ ತುಂಬಿ ತುಳುಕುವ ಅವಳ ಕಣ್ಣುಗಳು..

ಆ ಕಣ್ಣುಗಳು ನನ್ನನ್ನು ಹಿಂಬಾಲಿಸುತ್ತವೆ, ಆಸೆಯಿಂದ ನೋಡುತ್ತವೆ…

ಬಣ್ಣದ ಕಾಗದಗಳಿಂದ ಸುತ್ತಿದ್ದ ಪೊಟ್ಟಣವನ್ನು ನನ್ನ ಕೈಯಿಂದ ಕಿತ್ತುಕೊಂಡಿದ್ದಾಳೆ.

ಅವಳ ಆ ನೋಟ ನನ್ನನ್ನು ಕೊಲ್ಲುತ್ತಿದೆ ಅಲ್ಲ…ಮರುಜೀವ ಕೊಡುತ್ತಿದೆ.

ಕವನಗಳ ಸಾಲು ಎಲ್ಲಿ?

ಹಾಂ…ಅದು ಹುಟ್ಟುತ್ತಿದೆ…

ಈಗೇನು ಮಾಡುತ್ತಿ? ಇಲ್ಲ, ನಿನಗಾಗಿ ಹುಟ್ಟುತ್ತಿರುವ ಸಾಲುಗಳನ್ನು ನಾನು ಅನಾಥ ಮಾಡಲ್ಲ …

ಹೀಗಿರುವಾಗಲೂ ನೀ?

ಇಲ್ಲ, ನನ್ನೆದೆಯ ಸಾಲುಗಳು ನಿನ್ನನ್ನೇ ಬಂದು ಸೇರುವುವು. ಹಾಗಾದರೆ ಆ ಸಾಲುಗಳನ್ನೆಲ್ಲಾ ಪೋಣಿಸಿ ಕವನ ಬರೆದು ಕೊಡು

ಕವನ?

ಹಾಂ…ಕವನ!!

ಅವಳು ತನ್ಮಯಳಾಗಿ ಕುಳಿತಳು ನಾನು ಅವಳ ಕಿವಿಯಲ್ಲಿ ಮೆಲ್ಲನೆ ಉಸುರಿದೆ

ನೀನು..

ನಾನು?

ಹೌದು

ನೀನೆ ನನ್ನ ಕವನ.