ಅವಸ್ಥೆ

ನಿಮ್ಮ ಟಿಪ್ಪಣಿ ಬರೆಯಿರಿ

ನಮ್ಮ ಮುರುಕಲು ಗುಡಿಸಲ ಒಳಗೆ
ಬುಡ್ಡಿ ದೀಪದ ಸುತ್ತ
ಪಿಸು ಮಾತುಗಳು ಹುಟ್ಟುವುದಿಲ್ಲ
ಸ್ನೇಹ ಮಾತ್ರ ಪಸರಿಸುವ ನಮ್ಮವರ
ಗೋಡೆ, ಬೇಲಿಗಳಲ್ಲಿ ಕಳ್ಳಿ ಗಿಡಗಳೂ ಬೆಳೆಯುವುದಿಲ್ಲ

ಹಗಲಿರುಳು ದುಡಿದ ಕೈ ಕಾಲುಗಳ
ಚಾಚಿ ಮಲಗುವೆನೆಂದರೆ
ಅಷ್ಟೂ ಜಾಗವೂ ಇಲ್ಲಿಲ್ಲ ಬಿಡಿ,
ಹೊಟ್ಟೆ ಹಸಿದಾಗ ಕೆಲವೊಮ್ಮೆ
ಪಾತ್ರೆ ತಳದಲ್ಲಿ ಗಂಜಿ ನೀರೂ ಇರುವುದಿಲ್ಲ

ನಮ್ಮೂರ ಫುಟ್‌ಪಾತ್‌ಗಳಲ್ಲಿ
ಭಿಕ್ಷೆ ಬೇಡುವ ಪುಟ್ಟ ಕೈಗಳಿಗೆ ನಾಲ್ಕಾಣೆ
ಎಸೆಯದ ನಮ್ಮವರು
ಬಾರ್, ಬೀರುಗಳಲ್ಲಿ ತುಂಬಿದ ಮದ್ಯ ಬಾಟಲು
ಬಗ್ಗಿಸಿ ಚಿಯರ್ಸ್ ಅನ್ನುತಿರುವಾಗ
ಇತ್ತ, ನಾಡ ಸಾರಾಯಿಯ ಮತ್ತಿಗೆ ಸತ್ತ
ಶವದ ಮುಂದೆ ಒಡೆದ ಬಳೆಚೂರುಗಳ ಲೆಕ್ಕವೇನು?
ತೊಟ್ಟು ಹನಿಯಿಲ್ಲದೆ ಒಣಗಿದ ಕೆರೆ ಗದ್ದೆಗಳು
ಒಂದೆಡೆ, ರೋಗ ರುಜಿನಗಳ ಸರಮಾಲೆ
ಆದರೂ ಭಾರತ ಪ್ರಕಾಶಿಸುತ್ತಿದೆ!
ಬಡವರ ರಕ್ತ ಹೀರಿದ ರಾಜಕಾರಣಿಗಳ
ಮಹಲುಗಳಲ್ಲಿ, ಡಾನ್ಸ್ ಬಾರ್‌ಗಳಲ್ಲಿ

‘ನಾವು ಬೆಳೆಯುತ್ತಿದ್ದೇವೆ’ ಎನುವರು ಅಧಿಕಾರದ
ಆಸನದಲಿ ಕುಳಿತು ಹಾಯಾಗಿ ‘ಧಣಿ’ಗಳು
ಅವರು ‘ನಮ್ಮ’  ಬಗ್ಗೆ ಹೇಳುತ್ತಿರುವರೆಂದು
ತಪ್ಪು ತಿಳಿದಿರುವಿರಿ ನೀವು…
ದಿಟ್ಟಿಸಿ ನೋಡಿ ಒಮ್ಮೆ, ಅವರು ಹೇಳಿದ್ದು 
ತಮ್ಮ ಉದರದ ಮೇಲೆ ಕೈಯಾಡಿಸುತ್ತಾ  ಅಲ್ಲವೇನೂ!

ಜೀವನದ ಹಗ್ಗ ಜಗ್ಗಾಟದೊಳು
ದಣಿದು ಬೇಸತ್ತ ಜನ ಸಾಮಾನ್ಯರು
ನಾವು, ಗಲ್ಲಿ ಗಲ್ಲಿಗಳಲ್ಲಿ ಹರಿವ
ರಕ್ತದೋಕುಳಿಯ ಹರಿವ ತಡೆಯಲೇನು?

ನಿ(ನ)ಮ್ಮ ಅಧಿಕಾರ ಹಗೆ ಹೊಗೆಯ ಮಬ್ಬಿನಲಿ
ನಮ್ಮೀ  ಗುಡಿಸಲ ಸ್ನೇಹ ಭಿತ್ತಿಯೊಳು
ನಮ್ಮವರೇ ಎದೆ ಸಿಗಿದು, ರಕ್ತ ಚಿತ್ತಾರ ಬಿಡಿಸಿದಾಗ
ರೋದನದ ನಡುವೆಯೂ, ಅಂದೊಮ್ಮೆ ನೀ ಹಾಡಿದ
‘ದೇಸ್ ಮೇರಾ ರಂಗೀಲಾ’ ಹಾಡು ನನ್ನ ಕೆಣಕಿತ್ತು.

Advertisements

ಬನ್ನಿ, ಬಾಲ್ಯಕ್ಕೆ ಮರಳೋಣ…

1 ಟಿಪ್ಪಣಿ

ಬದಲಾಗುತ್ತಿರುವ ಈ ನವಯುಗದ ಜೀವನದಲ್ಲಿ ‘ಮಹತ್ವ’ವಾದುದನ್ನು ಸಾಧಿಸಬೇಕೆನ್ನುವ ಹಂಬಲ. ಎಲ್ಲದರಲ್ಲೂ ಮುಂದೆ ಬರಬೇಕೆಂಬ ತುಡಿತ. ಹಣ, ಗೌರವ, ಪ್ರೀತಿ, ಸೌಂದರ್ಯ ಎಲ್ಲವನ್ನೂ ಒಟ್ಟೊಟ್ಟಿಗೆ ಪಡೆಯಬೇಕೆಂಬ ತೀವ್ರ  ಆಸೆಗಳಲ್ಲಿ ನಮ್ಮನ್ನು ನಾವೇ ಮರೆಯುತ್ತಿದ್ದೇವೆ. ಅಲ್ಲವೇ? ಕೆಲಸದ ಒತ್ತಡದಲ್ಲಿ ‘ನೆಮ್ಮದಿ’ ಎಂಬುದು ಅಪರೂಪದ ಸಂಗತಿಯಾಗಿರುವಾಗ ಬಾಲ್ಯದ ಕೆಲವು ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡಿ, ಮುಖದಲ್ಲಿ ನಗು ಬೀರಲಿರುವ ಒಂದು ಪುಟ್ಟ ಪ್ರಯತ್ನವಿದು.

 ಈ ಕೆಳಗಿನ ಘಟನೆಗಳನ್ನು ಓದುವಾಗ ಬಾಲ್ಯದ ಚಿತ್ರಣವನ್ನು ಮನಸ್ಸಿಗೆ ತಂದು ಕೊಳ್ಳಿ…ಕಳೆದು ಹೋದ ಆ ಬಾಲ್ಯದ ನೆನಪುಗಳು ಎಷ್ಟು ಚೆನ್ನಾಗಿವೆ ಅಲ್ಲವಾ?

1. ಹಬ್ಬಕ್ಕಾಗಿ ಹೊಸ ಉಡುಪು ತಂದಾಗ ಅದನ್ನು ಮತ್ತೆ ಮತ್ತೆ ನೋಡಬೇಕು ಅಂತಾ ಅನಿಸಿದ್ದು. ಅಬ್ಬಾ ಅದರ ಪರಿಮಳ! ಹಬ್ಬಕ್ಕಾಗಿ ದಿನ ಎಣಿಸುತ್ತಾ ಕಾಲ ಕಳೆದದ್ದು.

2. ತರಗತಿಯಲ್ಲಿರುವ ಖಾಲಿ ಬೆಂಚಿನ ಒಂದು ತುದಿಯಲ್ಲಿ ನಾವೊಬ್ಬರೇ ಕುಳಿತು ಕೊಂಡಾಗ ಬೆಂಚು ಮೇಲಕ್ಕೇರಿದನ್ನು ನೆನೆಸಿದರೆ ಎದೆ’ ಝಲ್’ ಎನ್ನಲಿಲ್ಲವಾ?

3.ಮಾವಿನ ಮರಕ್ಕೇರೆ, ಬಾವಲಿಯಂತೆ ಹಣ್ಣನ್ನು ಕೊಯ್ಯದೆಯೇ ಕಚ್ಚಿ ತಿಂದದ್ದು.

4. ಗೇರು ಹಣ್ಣು ತಿಂದು ರಸ ಅಂಗಿಗೆ ಉಜ್ಜುತ್ತಿದ್ದದ್ದು. ಅಂಗಿಯಲ್ಲಿ ಗೇರು ಹಣ್ಣಿನ ಕಲೆ ಎಷ್ಟಿತ್ತು ಅಲ್ಲವಾ?

5.ಶಾಲೆಯಿಂದ ಸಿಕ್ಕಿದ ಬಣ್ಣದ ಕಾಗದವನ್ನು ತುಂಡು ತುಂಡು ಮಾಡಿ ಉಗುರಿಗೆ ಅಂಟಿಸಿ ಬಣ್ಣದ ಉಗುರು ಮಾಡಿದ್ದು. ಕೆಲವೊಮ್ಮೆ ಕಾಗದವನ್ನು ನೀರಲ್ಲಿ ಹಾಕಿ, ಬಾಟಲಿಯಲ್ಲಿ ತುಂಬಿಸಿ ಬಣ್ಣ  ಬಣ್ಣದ ಶರಬತ್ತು ಅಂತಾ ಹೇಳಿ ಅಂಗಡಿ ಆಟವಾಡಿದ್ದು.

6.ಹಿತ್ತಿಲಿನ ಮರಕ್ಕೆ ಹತ್ತಿ ಮಂಗನಾಟವಾಡಿದ್ದು. ಮರದ ತುದಿಯೇರುತ್ತಲೇ ಕೆಂಪಿರುವೆಗಳ ದಂಡನ್ನು ಕಂಡು ಸರ್ರನೆ ಜಾರಿದ್ದು.

7.ಆಟವಾಡುವಾಗ ಬಿದ್ದು ಕಾಲುಗಂಟಿಗೆ ಗಾಯ ಮಾಡಿಕೊಂಡ್ದು, ಗಾಯವನ್ನು ಆಗಾಗ ನೋಡುತ್ತಿದ್ದದ್ದು. ಅದು ಗುಣವಾಗುವ ವರೆಗೆ ಕಾಯದೆ, ಮತ್ತೊಮ್ಮೆ ಇನ್ನೊಂದು ಕಾಲಿಗೆ ಗಾಯ ಮಾಡಿಸಿಕೊಂಡಾಗ ಅಮ್ಮ ಬೈದದ್ದು.

8.ಹೊಸ ಆಟಿಕೆ ತಂದಾಗ ಅದರೊಳಗೇನಿದೆ ಎಂದು ಬಿಚ್ಚಿ ನೋಡುತ್ತಿದ್ದದ್ದು. ಬೊಂಬೆಯನ್ನು ಸ್ನಾನ ಮಾಡಿಸಿದ್ದು, ಅದಕ್ಕೆ ಚೆಂದದ ಅಂಗಿ ಹೊಲಿದು, ಕಣ್ಣಿಗೆ ಕಾಡಿಗೆ ಹಚ್ಚಿ, ಕೂದಲು ಹೆಣೆಯುತ್ತಿದ್ದದ್ದು.

9.ಶಾಲೆಗೆ ಹೋಗಲು ಉದಾಸೀನವಾದಾಗ ಹೊಟ್ಟೆ ನೋವೆಂದು ಅಮ್ಮನಲ್ಲಿ ಸುಳ್ಳು ಹೇಳಿದ್ದು. ಕಹಿ ಕಷಾಯ ಕುಡಿಸುತ್ತೇನೆ ಎಂದಾಗ ಹೊಟ್ಟೆ ನೋವು ಮಾಯವಾದ ದಿನಗಳು.

10.ಚಿಕ್ಕ ಹೊಳೆಯಲ್ಲಿ ಅಮ್ಮ ಬಟ್ಟೆ ಒಗೆಯುವಾಗ, ಅಮ್ಮನ ಸೀರೆಯಲ್ಲಿ ಮೀನು ಹಿಡಿದು,ಅದನ್ನು ಬಾಟಲಿಯಲ್ಲಿ ಹಾಕಿ ದಿನವಿಡೀ ಅದನ್ನು ನೋಡುತ್ತಾ ಕುಳಿತದ್ದು.

11.ಹೂತೋಟದಲ್ಲಿ ಹಾರುವ ಬಣ್ಣದ ಚಿಟ್ಟೆಗಳನ್ನು ಹಿಡಿದು ಬಿಟ್ಟದ್ದು. ಅತ್ತಿಂದಿತ್ತ ಹಾರುವ ದುಂಬಿಗಳನ್ನು ಹಿಡಿಯಲು ಮೆಲ್ಲನೆ ಹೆಜ್ಜೆಯಿಟ್ಟು, ಅದರ ಬಾಲವನ್ನು ಹಿಡಿಯಲು ಹೋಗುವಾಗ ಹಾರಿ ಹೋದ ದುಂಬಿಗೆ ಬಾಲದಲ್ಲಿಯೂ ಕಣ್ಣಿದೆಯಾ? ಅಂತಾ ಯೋಚಿಸಿದ್ದು. (ಯಾವ ದುಂಬಿಯೂ ಸಿಗದೇ ಇದ್ದಾಗ ನಾನು ಪೊರಕೆಯಿಂದ ಹೊಡೆದಾದರೂ ಹಿಡಿಯಲು ನೋಡುತ್ತಿದೆ. ನೀವು?)

12.ನಾಲ್ಕೈದು ಮಣೆ ಅಥವಾ ರಟ್ಟಿನ ಪೆಟ್ಟಿಗೆಯನ್ನು ಕೋಣೆಯಂತೆ ಮಾಡಿ ಬೆಕ್ಕಿನ ಮರಿಗೆ ಮನೆ ನಿರ್ಮಿಸಿ ಕೊಟ್ಟದ್ದು.

13.ನಾಲ್ಕೈದು ಕುರ್ಚಿಗಳನ್ನು ಸಾಲಾಗಿರಿಸಿ, ಮೇಲೆ ಅಮ್ಮನ ಸೀರೆ ಹೊದೆದು ಬಸ್ ಆಟವಾಡಿದ್ದು. ಡ್ರೈವರ್ ಸೀಟಿಗಾಗಿ ಅಣ್ಣನೊಂದಿಗೆ ಜಗಳವಾಡಿದ್ದು. ಹಳೆಯ ಟಿಕೆಟ್ ಸಂಗ್ರಹಿಸಿ ಕಂಡೆಕ್ಟರ್‌ನಂತೆ ಟಿಕೆಟ್ ಕೊಟ್ಟದ್ದು.

14.ಮಳೆ ನೀರಲ್ಲಿ ಮಜಾ ಮಾಡುತ್ತಾ ಆಟವಾಡಿದ್ದು. ಹವಾಯಿ ಚಪ್ಪಲಲ್ಲಿ ನೀರನ್ನು ‘ಟಪ್ ಟಪ್’ ಅಂತ ರಾಚಿಸುತ್ತಾ ಅಂಗಿ ಒದ್ದೆ ಮಾಡುತ್ತಿದ್ದದ್ದು. ಗಾಳಿಗೆ ಕೊಡೆ ಹಿಮ್ಮುಖವಾದಾಗ ಅದರಲ್ಲಿ ನೀರು ತುಂಬಿದ್ದು.

15.ಸೈಕಲ್ ಚಕ್ರವೊಂದನ್ನು ಕೋಲಿನಲ್ಲಿ ಬಡಿಯುತ್ತಾ ರಸ್ತೆಯಲ್ಲಿ ಓಡಿಸಿದ್ದು. ಗೆಳೆಯರೊಂದಿಗೆ ಗೋಲಿಯಾಟವಾಡಿದ್ದು, ಕುಂಟ ಬಿಲ್ಲೆ, ಲಗೋರಿ ಆಟವಾಡಿ ದಣಿದದ್ದು.

16.ಮನೆ ಮುಂದಿನ ಮಾವಿನ ಮರದ ರೆಂಬೆಗೆ ಉಯ್ಯಾಲೆ ಕಟ್ಟಿ ತೂಗಿದ್ದು.

17. ಕೊತ್ತಳಿಗೆ ಬ್ಯಾಟ್‌ನಲ್ಲಿ ಕ್ರಿಕೆಟ್ ಆಡಿದ್ದು. ಔಟಾಗದೇ ಇದ್ದಾಗ ‘ನಾ ಬ್ಯಾಟ್ ಕೊಡಲ್ಲ’ ಅಂತಾ ಹೇಳಿ ಮನೆಯ ಸುತ್ತ ಓಡಿದ್ದು.

18.ಶಾಲೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಹಾಕಿದ ಬಣ್ಣದ ವೇಷದಲ್ಲಿಯೇ ಬಂದು ಅಪ್ಪ ಅಮ್ಮನ ಮುಂದೆ ನಿಂತು ಸಂಭ್ರಮಿಸಿದ್ದು.

19. ಗಿಳಿ ಹಿಂಡುಗಳಿಗೆ ಕವಣೆಯಲ್ಲಿ ಕಲ್ಲು ಹೊಡೆಯುತ್ತಿದ್ದದ್ದು, ಮರದ ಪೊಟರೆಯಲ್ಲಿರುವ ಹಕ್ಕಿ ಗೂಡಿನೊಳಗೆ ಮೊಟ್ಟೆಯಿದೆಯಾ? ಅಂತ ಇಣುಕಿ ನೋಡುತ್ತಿದ್ದದ್ದು.

20.ಜಾತ್ರೆಗೆ ಹೋದಾಗ ಅಪ್ಪ ಕೊಡಿಸಿದ ಪುಗ್ಗೆ, ಅದು ದಿನ ಬೆಳಗಾದಾಗ ಒಡೆದು ಹೋದುದಕ್ಕಾಗಿ ಹೊಸ ಪುಗ್ಗೆ ಕೊಡಿಸೆಂದು ರಚ್ಚೆ ಹಿಡಿದದ್ದು. ಯಕ್ಷಗಾನ ನೋಡಿ ಅಲ್ಲಿರುವ ಪಾತ್ರಗಳನ್ನು ಅನುಕರಿಸುತ್ತಾ ಮನೆಯ ಜಗಲಿಯನ್ನೇ ರಂಗಭೂಮಿಯಾಗಿಸಿದ್ದು.

ಹೀಗೆ  ಹಲವಾರು ಬಾಲ್ಯದ ನೆನಪುಗಳು ಮನಸ್ಸಿನ ಪುಟದಲ್ಲಿ ಹಾದು ಹೋಗುವಾಗ ಆ ಮುಗ್ದ ಸುಂದರ ಬಾಲ್ಯ ಮತ್ತೊಮ್ಮೆ ಮರಳಿ ಬರುವುದೇ ಎಂದು ಮನಸ್ಸು ಹಂಬಲಿಸುತ್ತದೆ. ಹೋದ ಕಾಲ ಮರಳುವುದಿಲ್ಲ ಅಂತ ಗೊತ್ತಿದ್ದರೂ, ಕಳೆದ ಮಧುರ ನೆನಪುಗಳನ್ನು ನೆನೆಯುವಾಗ ಮನಸ್ಸು ನಿರಾಳವಾಗುತ್ತದೆ. “ಬಾಲ್ಯದ ನೆನಪು ಮುಪ್ಪಾದರೂ ಮಾಸದು”ಅಲ್ಲವೇ?

ಮರಣವೇ ನೀನೇಕೆ ಕಾಡುವೆ?

ನಿಮ್ಮ ಟಿಪ್ಪಣಿ ಬರೆಯಿರಿ

ಮರಣವೇ ನೀನೇಕೆ  ಕಾಡುವೆ
ನಿನಗೆ ನೀಡಲು ನನ್ನೊಡಲಲ್ಲಿ
ಏನಿದೆ ಹೇಳು?

ಬರೀ ಮಾಂಸದ ಮುದ್ದೆ
ದೇಹದಲಿ, ರಕ್ತ ಹೀರಲು ಬರುವಿಯಾ ನೀನು
ಅದೂ ಖಾಲಿಯಾಗಿದೆ ಎಂದೋ

ನರವ್ಯೂಹಗಳಲ್ಲಿ ಜಾಲಾಡಿದರೆ
ನಿನಗೆ ದಕ್ಕಬಹುದು ಒಂದಿಷ್ಟು
ಧಮನಿಗಳಲ್ಲೋಡುತಿಹ ಕಿಚ್ಚಿನಾ ಕಿಡಿಗಳು
ಎಚ್ಚರಿಕೆ! ತರಬಹುದು ಇದು ನಿನಗೆ ಆಘಾತ!!

ನಾನಂದು ನಿನ್ನ ಕಾಲ್ತುಳಿತದೊಳು
ರಕ್ತ ಸುರಿಸಿ ದುಡಿದು ಬೆಂಡಾದಾಗ
ನೀರ ಪಾತ್ರೆಯನ್ನು ನನ್ನಿಂದ ಬಚ್ಚಿಟ್ಟಿವ ನೀನು

ಹೋಗಲಿ ಬಿಡು, ನಿನ್ನ ಸ್ವೇಚ್ಛೆಗೆ ಧಿಕ್ಕಾರ!
ಕಣ್ಣೀರು ಕುಡಿದಾದರೂ ನನ್ನ ದಾಹ ನೀಗಿಸುವೆ

ನಿನ್ನ ದೋಷಗಳ ಮರೆಮಾಚಲು
ನನ್ನ ಕಣ್ಣುಗಳ ಕುಕ್ಕಿ ತೆಗೆಯ ಹೊರಟಿರುವಿಯಲ್ಲಾ..
ದುಃಖಾಗ್ನಿ ಹೊಮ್ಮುತಿರುವ ಕಣ್ಣುಗುಡ್ಡೆಗಳಿಂದ
ಹರಿಯಬಹುದು, ರಕ್ತವಲ್ಲ.. ಜ್ವಾಲಾಮುಖಿ
ನಿನ್ನ ಜೀವಕೆ ಮುಳುವಾದೀತು ಜೋಕೆ!

ಮುಳ್ಳುಮಂಚದಲಿ ನನ್ನ ಕಟ್ಟಿಹಾಕಿರುವೆ
ಸತ್ಯ ಹೇಳುತ್ತಿರುವೆನೆಂದು, ನಾಲಗೆಯನೂ
ಕತ್ತರಿಸಿರುವ ರಕ್ಕಸನೆ ನೀನು

ಆದರೂ, ತಲೆಬಾಗುವುದಿಲ್ಲ ನಿನಗೆ
ನನ್ನ ಬೆರಳಕುಂಚದ ಸಾಲುಗಳ
ದಂಡನೆಯೇ ಸಾಕು ನಿನ್ನ
ಹೃದಯಕ್ಕೆ ಬೆಂಕಿಯನು ಹಚ್ಚಲು

ಎಂದೆನಿತು ನಿನ್ನ ಕಾಲಡಿಯ ಧೂಳಾಗಿಸುವ
ಹಂಬಲವೇನೋ ನಿನಗೆ?

ಧೂಳಾಗಿಸಿದರೂ ನಾನೆದ್ದು ಬರುವೆ
ಬೀಸುವ ಗಾಳಿಯಲಿ ನಿನ್ನ ಕಣ್ಣುಗಳ ಕಲುಕಲು
ನೆನಪಿರಲಿ, ನಾ ಸತ್ತರೂ ಮತ್ತೊಮ್ಮೆ ಹುಟ್ಟಿ ಬರುವೆ
ನಿನ್ನ ಹೆಣದ ಮೇಲಿನ ಅಣಬೆಯಾಗಿ.

ಯಾರ ಮುಡಿಗೆ ಸೌಂದರ್ಯ ಕಿರೀಟ…

ನಿಮ್ಮ ಟಿಪ್ಪಣಿ ಬರೆಯಿರಿ

ಒಮ್ಮೆ ಎಲ್ಲಾ ತರಕಾರಿಗಳು ಸಭೆ ಸೇರಿದವು. ತಮ್ಮ ವಾರ್ಷಿಕೋತ್ಸವಕ್ಕೆ ಏನಾದರೂ ಹೊಸ ಕಾರ್ಯಕ್ರಮ ನಡೆಸಬೇಕೆಂದು ಗುಂಪಿನಲ್ಲಿದ್ದ ಹಾಗಲಕಾಯಿ ಸ್ವರವೆತ್ತಿತು. ಅಲ್ಲಿ ನೆರೆದಿದ್ದ ಎಲ್ಲಾ ತರಕಾರಿಗಳು ಮುಖ ಮುಖ ನೋಡಿಕೊಂಡು ವಾರ್ಷಿಕೋತ್ಸವಕ್ಕೆ ಹೊಸ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಚಿಂತಿಸ ತೊಡಗಿದವು. ಏನಾದರೂ ಹೊಸ ಕಾರ್ಯಕ್ರಮ ಮಾಡಬೇಕು, ಅದು ಎಲ್ಲರನ್ನೂ ಆಕರ್ಷಿಸುವಂತಿರಬೇಕು ಎಂದು ನೇರಳೆ ಅಂಗಿ ತೊಟ್ಟು “ಪೋನಿಟೈಲ್” ಜುಟ್ಟು ಬಿಟ್ಟಿದ್ದ ಸುಂದರಾಂಗಿ ಬದನೆ ಹೇಳಿತು.

ಸ್ವಲ್ಪ ಹೊತ್ತು ಎಲ್ಲಾ ತರಕಾರಿಗಳು ಯೋಚನೆಯಲ್ಲಿ ಮುಳುಗಿದವು. ಸಭೆ ಶಾಂತವಾಗಿತ್ತು, ಕೂಡಲೇ ಬಳುಕು ಸೊಂಟದ ವಯ್ಯಾರಿ ಕ್ಯಾರೆಟ್ ” ಸೌಂದರ್ಯ ಸ್ಪರ್ಧೆ” ನಡೆಸಿದರೆ ಒಳ್ಳೆಯದು ಎಂದು ಅಭಿಪ್ರಾಯ ಮುಂದಿಟ್ಟಿತು. ಇದನ್ನು ಕೇಳಿದ ತರಕಾರಿ ರಾಜ ಕುಂಬಳಕಾಯಿಗೆ ಹೊಸ ಐಡಿಯಾ ಸರಿಯೆನಿತು. ಸಭೆಯಲ್ಲಿ ನೆರೆದಿರುವ ಎಲ್ಲಾ ತರಕಾರಿ ಮಹನಿಯರಿಗೆ ಕೇಳುವಂತೆ ಕುಂಬಳ ಕಾಯಿ ಗಟ್ಟಿಯಾಗಿ ಮುಂದಿನ ವಾರ್ಷಿಕೋತ್ಸವಕ್ಕೆ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸುವುದಾಗಿ ಪ್ರಕಟಣೆಯನ್ನು ಹೊರಡಿಸಿತು.

ತರಕಾರಿಗಳೆಲ್ಲವೂ ಸೌಂದರ್ಯ ಸ್ಪರ್ಧೆಗೆ ಅಣಿಯಾಗತೊಡಗಿದವು. ಅಂತೂ ವಾರ್ಷಿಕೋತ್ಸವ ಬಂದೇ ಬಿಟ್ಟಿತು. ವಿಶಾಲವಾದ ವೇದಿಕೆಯನ್ನು ಸೌಂದರ್ಯ ಸ್ಪರ್ಧೆಗಾಗಿ ಅಣಿಗೊಳಿಸಲಾಗಿತ್ತು. ನೆರೆದಿದ್ದ ತರಕಾರಿಗಳೆಲ್ಲಾ ತಾ ಮುಂದು ನಾ ಮುಂದು ಎಂಬಂತೆ ಅಲಂಕಾರ ಮಾಡಿ ಬಂದಿದ್ದವು. ಸೌಂದರ್ಯ ಸ್ಪರ್ಧೆಯ ತೀರ್ಪುಗಾರರಾಗಿ ಅಡ್ಡ ಮರದ ಬೊಡ್ಡನಾದ ಹಲಸಿನ ಹಣ್ಣು, ಉದ್ದ ಮರದ ಸನ್ಯಾಸಿ ಅಡಿಕೆ ಹಾಗೂ ಸುಂದರ ಹಲ್ಲಿನ ದಾಳಿಂಬೆ ವೇದಿಕೆಯ ಮುಂದೆ ಆಸೀನವಾಗಿದ್ದವು. ವೇದಿಕೆಗೆ ಬಂದ ಪಡುವಲ ಕಾಯಿ ಕೈಯಲ್ಲಿ ಮೈಕ್ ಹಿಡಿದುಕೊಂಡು ಸ್ಪರ್ಧಾಳುಗಳ ಹೆಸರನ್ನು ಸರದಿಯಂತೆ ಕೂಗ ತೊಡಗಿತು.

ಮೊದಲನೆಯಾದಾಗಿ ಬಿಂಕದ ವಯ್ಯಾರಿ ಹಸಿರು ನಿಲುವಂಗಿ ತೊಟ್ಟ ಬೆಂಡೆಕಾಯಿ ಸೊಂಟ ಬಳುಕಿಸುತ್ತಾ ವೇದಿಕೆಯ ಮುಂದೆ ಬಂದು ತನ್ನ ಸೌಂದರ್ಯವನ್ನು ಪ್ರದರ್ಶಿಸಿತು. ಸಭಿಕರಾಗಿ ನೆರೆದಿದ್ದ ತರಕಾರಿ ತುಂಟರು ಸಿಳ್ಳೆ ಹಾಕಿ, ಯು ಸೋ ಬ್ಯೂಟಿಫುಲ್.. ಎಂದು ಉದ್ಗರಿಸಿದರು. ನಂತರದ ಸಾಲಿನಲ್ಲಿ ನುಣುಪು ಕೆನ್ನೆಯನ್ನು ತೋರಿಸುತ್ತಾ ನೇರಳೆ ಬಣ್ಣದ ಗುಂಡು ಬದನೆಕಾಯಿ ಮತ್ತು ಉದ್ದದ ಹಸಿರು ಬದನೆಕಾಯಿ ಜೋಡಿಯಾಗಿ ಹೆಜ್ಜೆ ಹಾಕಿದವು.

ಬಣ್ಣ ಬಣ್ಣದ ದೀಪಗಳು ವೇದಿಕೆಯಲ್ಲಿ ಝಗಝಗಿಸುತ್ತಿದ್ದವು. ತರಕಾರಿಗಳ ಸುಂದರಿ ಕ್ಯಾರೆಟ್ ರಾಂಪ್ ಮೇಲೆ ಕಾಲಿಟ್ಟ ಕೂಡಲೇ ಸಭಿಕರ ಕರತಾಡನ ಮುಗಿಲು ಮುಟ್ಟಿತು. ಇದರ ಹಿಂದೆಯೇ ತಾನೇನು ಕ್ಯಾರೆಟ್‌ಗಿಂತ ಕಡಿಮೆಯೇ ಎಂಬ ಭಿನ್ನಾಣದಲ್ಲಿ ಮೂಲಂಗಿಯು ಹಸಿರು ಟೋಪಿ ತೊಟ್ಟು ಕ್ಯಾಟ್ ವಾಕ್ ಮಾಡಿತು. ಸುತ್ತಲೂ ಧ್ವನಿವರ್ಧಕಗಳಲ್ಲಿ ಹಾಡು ಮೊಳಗುತ್ತಿರುವಂತೆಯೇ ಹಣ್ಣುಗಳ ಪ್ರಾಯೋಜಕತ್ವದ ಜಾಹೀರಾತು ಕೇಳಿ ಬರುತ್ತಿತ್ತು.

ವೇದಿಕೆಯಲ್ಲಿ ಇನ್ನು ಮುಂದೆ ಕಾಣಿಸಿಕೊಳ್ಳಲಿರುವವರು ಕಹಿರುಚಿಯ ಹಾಗಲ ಕಾಯಿ ಎಂದು ಮೈಕ್‌ನಲ್ಲಿ ಗಟ್ಟಿಯಾಗಿ ಘೋಷಣೆ. ಕಹಿರುಚಿ ಎಂದು ಹೇಳಿದ್ದಕ್ಕೆ ಹುಸಿ ಮುನಿಸು ಮಾಡಿಕೊಂಡ ಹಾಗಲಕಾಯಿ ತನ್ನ ಜರಿಜರಿ ಹಸಿರಂಗಿಯನ್ನು ತೊಟ್ಟು ಸೌಂದರ್ಯವನ್ನು ಪ್ರದರ್ಶಿಸಿತು. ಇದರ ಹಿಂದೆಯೇ ರಾಂಪಿಗೆ ಬಂದ ಟೋಮೇಟೋ ನನ್ನಕ್ಕಿಂತ ಚಂದ ಇನ್ನಾರು ಎಂಬಂತೆ ತನ್ನ ಅಂಗವನ್ನು ಪ್ರದರ್ಶಿಸಿ, ಕೆಂಪು ಕೆನ್ನೆಯನ್ನುಬ್ಬಿಸಿ ನಗೆಬೀರಿತು.

ಆ ನಂತರ ವೇದಿಕೆಗೆ ಬಂದ ಹಸಿರು ಸೌತೆಕಾಯಿಯು ಬಂಗಾರದ ಬಣ್ಣದ ಸೌತೆಕಾಯಿ ಜೊತೆಗೆ ಬೆಕ್ಕಿನ ನಡಿಗೆಯಿಟ್ಟಾಗ ವೇದಿಕೆಯಲ್ಲಿದ್ದ ಇತರ ಸ್ಪರ್ಧಾಳುಗಳು ಚಕಿತಗೊಂಡರು. ಇದೀಗ ಸೌಂದರ್ಯ ಪ್ರದರ್ಶಿಸಿದವರಲ್ಲಿ ಒಬ್ಬರಿಂದ ಒಬ್ಬರು ಮೇಲು. ಯಾರ ಮುಡಿಗೆ ಸೌಂದರ್ಯ ಕಿರೀಟ ದಕ್ಕುವುದೋ ಎಂಬುದಾಗಿ ಎಲ್ಲರಿಗೂ ಕುತೂಹಲ! ನೆರೆದಿರುವ ಸಭಿಕರು ಇನ್ನೇನೋ ಸ್ಪರ್ಧೆ ಮುಗಿಯಿತು ಅಂದು ಕೊಂಡಿರುವಾಗ ಸಣ್ಣಗಾತ್ರದ ತೊಂಡೆಕಾಯಿ ಚಂದದ ತುಟಿಯಲ್ಲಿ ಅಂದದ ನಗೆ ಬೀರಿ ಎಲ್ಲರನ್ನೂ ಚಕಿತಗೊಳಿಸಿತು.

ಪಡುವಲಕಾಯಿ ತನ್ನ ಕೈಯಲ್ಲಿದ್ದ ಸ್ಪರ್ಧಾಳುಗಳ ಪಟ್ಟಿಯನ್ನೊಮ್ಮೆ ನೋಡಿ ಸಭಿಕರೇ ಈಗಾಗಲೇ ನೀವು ತೆಳು ಶರೀರದ ವಯ್ಯಾರಿಗಳ ಬಳುಕುವ ನಡಿಗೆಯನ್ನು ನೋಡಿದ್ದೀರಿ. ನಿಮ್ಮ ಮುಂದೆ ಇದೀಗ ಹೆಜ್ಜೆಯಿಡಲು ಬರುತ್ತಿದ್ದಾರೆ ತರಕಾರಿಗಳ ರಾಜ ಕುಂಬಳಕಾಯಿ..ಎಂದು ಗಟ್ಟಿಯಾಗಿ ಉದ್ಗೋಷಿಸಿತು. ಎಲ್ಲರ ಕಣ್ಣು ವೇದಿಕೆಯ ಮೇಲೆ ನೆಟ್ಟಿತು. ಅಬ್ಬರದ ಸಂಗೀತದ ನಡುವೆ ಕುಂಬಳಕಾಯಿ ಮುಖ ತುಂಬಾ ಪೌಡರ್ ಮೆತ್ತಿಕೊಂಡು ಬಂದು ನಿಂತಿತ್ತು. ದೊಡ್ಡ ಗಾತ್ರದ ದೇಹವನ್ನು ಬಳುಕಿಸಲಾರದೆ ವೇದಿಕೆಯ ಮೇಲೆ ಹೊರಳಾಡಿತು. ಕೆಲವರು ಈ ಪ್ರದರ್ಶನವನ್ನು ನೋಡಿ ನಕ್ಕರೆ ಕೆಲವರಂತೂ ತರಕಾರಿ ರಾಜನ ಕಸರತ್ತಿಗೆ ಹೋ…ಎಂದು ಪ್ರೋತ್ಸಾಹ ನೀಡಿದರು.

ಅಂತೂ ಒಟ್ಟಿನಲ್ಲಿ ಸೌಂದರ್ಯ ಸ್ಪರ್ಧೆ ಮುಕ್ತಾಯಗೊಂಡಿತು. ಇನ್ನು ಸೌಂದರ್ಯ ರಾಣಿ ಯಾರೆಂದು ಘೋಷಿಸುವುದು ಮಾತ್ರ ಬಾಕಿ ಇತ್ತು. ಸ್ಪರ್ಧಾ ನಂತರ ನಿರ್ಣಾಯಕರು ಪರಸ್ಪರ ಮಾತನಾಡಿಕೊಂಡು ಒಂದು ನಿರ್ಣಯಕ್ಕೆ ಬಂದ ಮೇಲೆ ಪುನಃ ಮೈಕ್ ಕೈಗೆತ್ತಿಕೊಂಡ ಪಡುವಲ ಕಾಯಿ, ಪ್ರಿಯ ತರಕಾರಿ ಬಾಂಧವರೇ..ಇಲ್ಲಿ ನಡೆದ ಅತೀ ಕುತೂಹಲಕರವಾದ ಸೌಂದರ್ಯ ಸ್ಪರ್ಧೆಯ ವಿಜೇತರನ್ನು ಘೋಷಿಸಲು ನಾನು ನಮ್ಮ ವಿಶೇಷ ಅತಿಥಿಯಾದ ಬಟಾಟೆ ಗುಂಡನನ್ನು ವೇದಿಕೆಗೆ ಆಹ್ವಾನಿಸುತ್ತಿದ್ದೇನೆ ಎಂದು ಘೋಷಿಸಿತು.

ಕೈಯಲ್ಲಿ ವಿಜೇತರ ಹೆಸರಿನ ಪಟ್ಟಿಯನ್ನು ಹಿಡಿದು ಬಂದ ಬಟಾಟೆ ಗುಂಡ ಇಂದಿನ ವಿಜಯಿ ಸುಂದರಾಂಗಿ “ಟೊಮೇಟೋ” ಎಂದು ಕೂಗಿದ ಕೂಡಲೇ ಟೊಮೇಟೋ ಬಂಧುಗಳೆಲ್ಲ ವೇದಿಕೆಗೆ ಹಾರಿ ಕುಣಿದು ಕುಪ್ಪಳಿಸ ತೊಡಗಿದರು. ವೇದಿಕೆಯೆಲ್ಲಾ ಟೊಮೇಟೋ ದಾಳಿಗೆ ಅಲ್ಲೋಲಕಲ್ಲೋಲವಾಯಿತು. ಒಂದರ ಮೇಲೊಂದು ಟೊಮೇಟೋಗಳು ವೇದಿಕೆಗೆ ಜಿಗಿದು ನರ್ತನವಾಡ ತೊಡಗಿದಾಗ ವೇದಿಕೆಯಲ್ಲಿದ್ದ ಮಹನಿಯರೆಲ್ಲಾ ಹೆದರಿ ಓಡತೊಡಗಿದರು. ಟೊಮೇಟೋಗಳಿಂದ ತುಂಬಿದ ವೇದಿಕೆಯಲ್ಲಿ ಕೊನೆಗೆ ಯಾರೂ ಉಳಿಯದೇ ಇದ್ದುದರಿಂದ ತರಕಾರಿ ಸೌಂದರ್ಯ ಸ್ಪರ್ಧೆಯು ಅಲ್ಲಿಗೆ ಮುಕ್ತಾಯಗೊಂಡಿತು.

ಅಮ್ಮನ ಒಲವಿನ ಓಲೆ…..

1 ಟಿಪ್ಪಣಿ

ಯಾಕೋ ಮನಸ್ಸು ನಿರಾಳವಾಗುತ್ತಿದೆ. ಬಿಸಿಲಿನಿಂದ ಇಷ್ಟು ದಿನ ಸುಡುತ್ತಿದ್ದ ಭೂಮಿ ತಂಪಾಗಿದೆ. ಮಳೆ ಇನ್ನೂ ಹನಿ ಬಿಟ್ಟಿಲ್ಲ. ಏನೋ ಮನೆಯ ನೆನಪು ತುಂಬಾ ಕಾಡುತ್ತಿದೆ, ಯಾವುದಾದರೂ ಪುಸ್ತಕ ಕೈಗೆತ್ತಿಕೊಳ್ಳೋಣ ಅಂತಾ ಇದ್ದೆ. ಭಾನುವಾರ ಆದ ಕಾರಣ ಹಾಸ್ಟೆಲ್‌ನಲ್ಲಿಯೇ ಇರಬೇಕಾದ ಪರಿಸ್ಥಿತಿ. ವಾರದಲ್ಲಿ ಸಿಗುವ ಒಂದೇ ಒಂದು ದಿನ ರಜಾದಿನ ಹಾಸ್ಟೆಲ್‌ನ ರೂಮಿನಲ್ಲಿ ಕಳೆಯುವಾಗ ಯಾಕೋ “ಏಕಾಂಗಿತನ” ನನ್ನನ್ನು ಆವರಿಸುತ್ತದೆ. ಸಾಧಾರಣ ಹುಡುಗಿಯರಂತೆ ಶಾಪಿಂಗ್, ಔಟಿಂಗ್ ಇಷ್ಟವಿಲ್ಲದ ನನಗೆ ನಾಲ್ಕು ಗೋಡೆಗಳ ಮಧ್ಯದಲ್ಲಿ, ಅನ್ಯಭಾಷೀಯರ ಪರಿಸರದಲ್ಲಿ ಪುಸ್ತಕಗಳೇ ಉತ್ತಮ ಸಂಗಾತಿಯಾಗಿವೆ.

ಹಾಸ್ಟೆಲ್‌ನ ಕಿಟಿಕಿಯಿಂದ ಹೊರಗಿಣುಕಿದರೆ ತುಂತುರು ಮಳೆಹನಿಗಳು ಮರದೆಲೆಯಿಂದ ಜಾರುತ್ತಿತ್ತು. ಕೈಗೆತ್ತಿದ ಪುಸ್ತಕವೂ ಓದಬೇಕೆಂಬ ಮೂಡ್ ಇರಲಿಲ್ಲ. ಆದಾಗಲೇ ನನ್ನ ಕಣ್ಣಿಗೆ ಬಿದ್ದದ್ದು ಕಂದು ಬಣ್ಣದ ಕವರ್. ಅದು ತುಂಬಾ ಅಮೂಲ್ಯವಾದದ್ದು. ಯಾಕೆ ಗೊತ್ತಾ? ಅದರಲ್ಲಿ ತುಂಬಾ ಸಿಹಿಮುತ್ತುಗಳಿವೆ, ವಾತ್ಸಲ್ಯವಿದೆ. ಸ್ನೇಹ, ಸಲಹೆ, ಮಮತೆ, ಕಾಳಜಿ ತುಂಬಿದ ಪತ್ರ ಅದು. ಈ ಚುಮುಚುಮು ಚಳಿಯಲ್ಲಿ ಕಂದು ಬಣ್ಣದ ಕವರ್‌ನೊಳಗೆ ನನ್ನ “ಅಮ್ಮನ ಪತ್ರ” ಬೆಚ್ಚನೆ ಕುಳಿತುಕೊಂಡಿದೆ. ಅದು ಕೈಗೆತ್ತಿಕೊಂಡ ಕೂಡಲೇ ಯಾಕೋ ಮನಸ್ಸು ನಿರಾಳವಾಗುತ್ತಿದೆ. ಭಗವಾನ್ ಶ್ರೀಕೃಷ್ಣ ಯುದ್ದ ಭೂಮಿಯಲ್ಲಿ ಕುಸಿದು ಕುಳಿತ ಅರ್ಜುನನಿಗೆ ಗೀತೋಪದೇಶ ನೀಡಿ ಹುರುಪು ಹುಟ್ಟಿಸಿದಂತೆ ಅಮ್ಮನ ಪತ್ರ ನನ್ನ ಕೈಗೆ ಸಿಕ್ಕಿದಾಗ ಚೈತನ್ಯ ನೀಡುವ ಅಸ್ತ್ರದಂತೆ ಭಾಸವಾಗುತ್ತದೆ.

ಚೆನ್ನೈ ಎಂಬ ಮಹಾನಗರಕ್ಕೆ ಬಂದು ವರುಷಗಳಾಗುತ್ತಾ ಬಂತು. ಅದರಲ್ಲಿ ಎಷ್ಟು ಏಳು ಬೀಳುಗಳು ಸಂಭವಿಸಿವೆಯೋ ಅಷ್ಟು ಬಾರಿ ಅಮ್ಮನ ಪತ್ರ ನನ್ನ ಕೈ ಸೇರಿದೆ. ನಿಜ ಹೇಳಬೇಕೇ? ಮೊಬೈಲ್ ಫೋನ್‌ನಲ್ಲಿ ಆಗಾಗ ಮಾತನಾಡುತ್ತಾ ಕಷ್ಟ ಸುಖ ಹೇಳುತ್ತಿದ್ದರೂ ಅಮ್ಮನ ಪತ್ರದಲ್ಲಿ ಸಿಗುವಂತಹ ತೃಪ್ತಿ ಎಲ್ಲಿಯೂ ಸಿಕ್ಕಿಲ್ಲ. ಆ ಪತ್ರ ಅಂತದ್ದು. ತನ್ನ ಮಕ್ಕಳು ಎಲ್ಲಿಯೇ ಇರಲಿ ಮನಸ್ಸಲ್ಲಿ ಮಕ್ಕಳದ್ದೇ ಚಿಂತೆ. ಮಾತೃ ಹೃದಯವಲ್ಲವೇ? ಮಕ್ಕಳ ಒಂದೊಂದು ಉಚ್ವಾಸ ನಿಶ್ವಾಸವೂ ಆ ಅಮ್ಮನಿಗೆ ತಿಳಿಯುವ ಶಕ್ತಿ ಇದೆ. ಅದಕ್ಕಾಗಿಯೇ ಬಲ್ಲವರು ಅಮ್ಮ ದೇವರ ರೂಪ ಅಂದದ್ದು?

ಇನ್ನು, ಹೆಣ್ಣು ಮಕ್ಕಳೆಂದರೆ ಅಮ್ಮನಿಗೆ ಕಾಳಜಿ ಇಲ್ಲದೆ ಇರುತ್ತದಾ?. ನೋಡು ಪುಟ್ಟಿ, ಅದು ಹಾಗೆ, ಇದು ಹೀಗೆ, ಜಾಗರೂಕತೆಯಿಂದಿರು ಎಂಬ ಉಪದೇಶಗಳೊಂದಿಗೆ ತುಂಬಾ ಮಮತೆ, ತಪ್ಪು ಮಾಡಿದಲ್ಲಿ ಅಷ್ಟೇ ಕಟುವಾದ ಟೀಕೆ ಎಲ್ಲವೂ ತುಂಬಿರುವ ಅದೆಷ್ಟೋ ಪತ್ರಗಳು ನನ್ನಲ್ಲಿ ಭದ್ರವಾಗಿವೆ. ಅವು ನೀಡುವಂತಹ ಮಾರ್ಗದರ್ಶನ, ಒಲವು, ಸಾಂತ್ವನ.. ನಾನು ಧೃತಿಗೆಟ್ಟಾಗ “ಏಕಾಂಗಿಯಲ್ಲ” ಎಂಬ ಅರಿವು ಮೂಡಿಸಿ ಯಾವುದೇ ಕಷ್ಟ ಬಂದರೂ ಸೆಟೆದು ನಿಲ್ಲುವ ತಾಕತ್ತನ್ನು ನೀಡಿದೆ.

ಪತ್ರದ ಬಗ್ಗೆ ಹೇಳುವಾಗ ತಕ್ಷಣ ನೆನಪಿಗೆ ಬರುವುದೇ ನೀಲಿ ಬಣ್ಣದ ಇನ್‌ಲ್ಯಾಂಡ್ ಲೆಟರ್. ಈಗ ಅದು ಕಾಣಲಿಕ್ಕೇ ಅಪರೂಪ. ನಿಜ, ಕಾಲಬದಲಾಗಿದೆ. ತಾಂತ್ರಿಕತೆ ವರ್ಧಿಸುತ್ತಾ ಬಂದಂತೆ ಪತ್ರಗಳ ಸ್ಥಾನವನ್ನು ಮೊಬೈಲ್ ಎಸ್‌ಎಂಎಸ್‌ಗಳು ಇಮೇಲ್ ಕಸಿದುಕೊಂಡಿವೆ. ಏನೇ ಇರಲಿ ತಮ್ಮ ಕೈಯಕ್ಷರಗಳಲ್ಲಿ ಬರೆದ ಪತ್ರದಲ್ಲಿ “ನನ್ನೂರಿನ” ಮಣ್ಣಿನ ಸುಗಂಧವಿದೆ, ವಿವರವಾಗಿ ಬರೆದ ಮುದ್ದಾದ ಅಕ್ಷರಗಳಲ್ಲಿ ಮಮತೆಯ ಕೊಂಡಿಯಿದೆ. ಪ್ರೀತಿಯ…ಎಂದು ಆರಂಭವಾಗುವ ಪತ್ರಗಳಿಂದ ಇತೀ ನಿನ್ನ.. ಎಂದು ಕೊನೆಗೊಳ್ಳುವ ಈ ಪತ್ರಗಳು ಹೊತ್ತು ತರುವ ಅದೆಷ್ಟು ಸುದ್ದಿಗಳು, ಭಾವನೆಗಳು! ಎಲ್ಲವನ್ನೂ ಓದಿ ಮುಗಿಸುವಾಗ ಕಣ್ಣು ತೇವಗೊಂಡಿರುತ್ತದೆ.

ನೆನಪುಗಳು  ಮನಸ್ಸಿನ ಕದ ತಟ್ಟಿ ಒಮ್ಮೆ ನಗು ಮತ್ತೊಮ್ಮೆ ಅಳು ತರಿಸಿದರೂ ಪತ್ರದಲ್ಲಿನ ಅಕ್ಷರಗಳು ಮತ್ತಷ್ಟು ಮುದ್ದಾಗಿ ಕಾಣಿಸುತ್ತವೆ. ಓದಿದ ಪತ್ರವನ್ನು ಮತ್ತೆ ಮತ್ತೆ ಓದುವಾಗ ಹೊಸ ಉತ್ಸಾಹ, ಅಮ್ಮನ ನೆನಪು ಕಾಡುತ್ತದೆ. ಮರೆಯದೆ ಪತ್ರ ಬರಿ ಎಂದು ಕೊನೆಯ ಸಾಲಿನಲ್ಲಿ ಅಮ್ಮ ಬರೆದದ್ದು ನೋಡಿದಾಗ ನೆನಪಾದದ್ದು, ಅದೆಷ್ಟೋ ನನ್ನ ಉತ್ತರಗಳು ಅಮ್ಮನ ಕೈ ಸೇರಿವೆ ಎಂದು. ಸದ್ಯ, ನಾನು ನನ್ನವರನ್ನು ಮಿಸ್ ಮಾಡುವಾಗ ಪತ್ರವನ್ನು ಕೈಗೆತ್ತಿಕೊಂಡು ನೋವು ಮರೆಯುವಂತೆ, ಅವರೂ ಹಾಗೆ ಮಾಡುತ್ತಿರುತ್ತಾರಲ್ಲಾ..ಅದಕ್ಕೇ ಪತ್ರ ಬರೆಯುವುದನ್ನು ಮುಂದುವರಿಸುತ್ತಾ ಬಂದಿದ್ದೇನೆ. ಅದರಲ್ಲಿ ಏನೋ ಒಂಥಾರ ತೃಪ್ತಿಯಿದೆ, ಮನದಾಳದ ಮಾತನ್ನು ಹೇಳುವ ತಾಕತ್ತಿದೆ. ಸ್ನೇಹದ ಅಕ್ಷರಗಳು ಓಲೆ ರೂಪದಲ್ಲಿ ಕೈ ಸೇರುವಾಗ ಮನಸ್ಸಿನ ಮೂಲೆಯಲ್ಲಿರುವ ಪ್ರೀತಿಯ ಸೆಳೆತವು ಮುಂದಿನ ಪತ್ರವನ್ನು ನಿರೀಕ್ಷಿಸುತ್ತಿರುತ್ತದೆ..

ಹರತಾಳಗಳ ‘ತಾಳ’ಕ್ಕೆ ಕುಣಿಯುತ್ತಿರುವ ಕೇರಳ!

ನಿಮ್ಮ ಟಿಪ್ಪಣಿ ಬರೆಯಿರಿ

ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳ ಇಂದು ಹರತಾಳಗಳ ನಾಡಾಗಿ ಬದಲಾಗುತ್ತಿದೆ. ದಿನದಿಂದ ದಿನಕ್ಕೆ ಇಲ್ಲಿನ ರಾಜಕೀಯ ಪಕ್ಷಗಳು ಘೋಷಿಸುವ ಹರತಾಳದ ತಾಳಕ್ಕೆ ಕುಣಿದು ಕುಣಿದು ಜನರು ಸುಸ್ತಾಗಿದ್ದಾರೆ. ಸಾಮಾನ್ಯ ಹಬ್ಬಗಳನ್ನು ಆಚರಿಸುವ ಹಾಗೆ ಇಲ್ಲಿ ಹರತಾಳವೂ ಒಂದು ಆಚರಣೆ. ಶಾಲೆ ಕಾಲೇಜು, ಕಚೇರಿಗಳಿಗೆ ರಜೆ ಆದ ಕಾರಣ ಮನೆಯಲ್ಲಿ ಹಬ್ಬದ ವಾತಾವರಣ. ಮನೆಮಂದಿಯೆಲ್ಲಾ ಹೊರಗಿಳಿಯದೆ ಮನೆಯಲ್ಲಿ ಒಟ್ಟು ಸೇರಿರುವಾಗ ‘ಹರತಾಳ’ ಎಂಬುದು ಹಬ್ಬದ ಕಳೆಯನ್ನು ತರುತ್ತದೆ. ಈ ಮೊದಲು ಬಂದ್‌ಗಳಿಂದ ಜನರು ಕಂಗಾಲಾಗಿದ್ದಾಗ ನ್ಯಾಯಾಲಯವು ಬಂದ್‌ಗೆ ನಿಷೇಧ ಹೇರಿತ್ತು. ಆದರೆ ಕ್ರಮೇಣ ಬಂದ್ ಹರತಾಳವಾಗಿ ಲಗ್ಗೆಯಿಡತೊಡಗಿತು.

ಹರತಾಳ ಎಂದ ಕೂಡಲೇ ಹಳ್ಳಿ ನಗರವೆಂಬ ಭೇದವಿಲ್ಲದೆ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚುತ್ತಾರೆ. ವಾಹನಗಳನ್ನು ರಸ್ತೆಗಿಳಿಸುವ ಭಯದಿಂದ ವಾಹನ ಮಾಲೀಕರು ಕೈ ಕಟ್ಟಿ ಕುಳಿತುಕೊಳ್ಳುತ್ತಾರೆ. ಒಂದು ವೇಳೆ ಸಾಹಸದಿಂದ ವಾಹನಗಳು ರಸ್ತೆಗಿಳಿಸಿದರೆ ಕಲ್ಲು ತೂರಾಟ ತಪ್ಪಿದ್ದಲ್ಲ. ಹರತಾಳದ ವೇಳೆ ಹೊರಗಿಳಿಯಲು ಹೆದರುವ ಜನ..ಯಾವಾಗ ಯಾರ “ಮಂಡೆ”ಗೆ ಕಲ್ಲು ಬೀಳುತ್ತದೋ ಎಂದು ಹೆದರಿ ಬಾಗಿಲು ಮುಚ್ಚಿ ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ!

ಅದೇ ವೇಳೆ ಕೇವಲ ಸಣ್ಣಪುಟ್ಟ ಕಾರಣಗಳಿಗೂ ಹರತಾಳ ಘೋಷಣೆ ನಡೆಸುವ ರಾಜಕೀಯ ಪಕ್ಷಗಳಿಂದ ಲಾಭವಾದರೂ ಏನು? ಶಾಲೆ, ಕಚೇರಿಗಳಿಗೆ ಅಘೋಷಿತ ರಜೆ, ಒಂದು (ಕೆಲಸ) ದಿನ ನಷ್ಟ ಇದು ಮಾತ್ರವೇ ಹರತಾಳದಿಂದಾಗುವ ಪ್ರಯೋಜನ!
ಇನ್ನು, ಹರತಾಳದ ದಿನವು ಆಕ್ರಮಣ ಪ್ರತ್ಯಾಕ್ರಮಣಗಳ ಬಗ್ಗೆ ಹೇಳುವುದೇ ಬೇಡ. ಕೇಸರಿ, ಕೆಂಪು, ಹಸುರು ಪಕ್ಷಗಳು ಒಂದಕ್ಕೊಂದು ಏಟು ಪ್ರತಿಯೇಟು ನೀಡುತ್ತಿರುವಾಗ ಮಾಲೆ ಪಟಾಕಿಗೆ ಬೆಂಕಿ ಕೊಟ್ಟಂತೆ ಪ್ರತೀ ಪಕ್ಷಗಳ ಹರತಾಳಗಳು ಸಿಡಿಯುತ್ತಿರುತ್ತವೆ.

ಪ್ರಸ್ತುತ ಕಳೆದ ಜೂನ್ ತಿಂಗಳಲ್ಲಿ ಮಾತ್ರ ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಐದು ಹರತಾಳಗಳನ್ನು ಇದೀಗ ಕೇರಳದಲ್ಲಿ ಆಚರಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವುಗಳು ಸಣ್ಣ ಪುಟ್ಟ ಕಾರಣಗಳಿಗಾಗಿ ನಡೆದವುಗಳು ಎಂಬುದು ಗಮನಿಸಬೇಕಾದ ಸಂಗತಿ.

ಜೂನ್ 4: ಕಟ್ಟಪ್ಪನ ಎಂಬಲ್ಲಿ ಕಾರ್ಯಕರ್ತರ ಮೇಲೆ ಆಕ್ರಮಣ ನಡೆಸಿದುದಕ್ಕಾಗಿ ಇಡುಕ್ಕಿ ಜಿಲ್ಲೆಯಲ್ಲಿ ಯುಡಿಎಫ್ ಹರತಾಳ

ಜೂನ್ 5: ತೈಲ ಬೆಲೆ ಏರಿಕೆಯನ್ನು ಪ್ರತಿಭಟಿಸಿ ಎಡರಂಗ ಹಾಗೂ ಬಿಜೆಪಿ ಆಹ್ವಾನಿತ ಹರತಾಳ

ಜೂನ್ 20: ಕೆಎಸ್‌ಯು ಕಾರ್ಯಕರ್ತರನ್ನು ಹಾಗೂ ಟಿ.ಎನ್ ಪ್ರತಾಪನ್ ಎಂಎಲ್ಎ ಅವರ ಮೇಲೆ ಪೊಲೀಸರು ಪ್ರಹಾರ ನಡೆಸಿದ ಕಾರಣಕ್ಕಾಗಿ ತ್ರಿಶ್ಶೂರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಹರತಾಳ

ಜೂನ್ 27: ಡಿವೈಎಫ್‌ಐ  ಆಕ್ರಮಣ ಹಾಗೂ ಪೊಲೀಸರ ನೀತಿಯನ್ನು ಪ್ರತಿಭಟಿಸಿ ತಿರುವನಂತಪುರಂ ಜಿಲ್ಲೆಯಲ್ಲಿ ಬಿಜೆಪಿ ವತಿಯಿಂದ 12 ಗಂಟೆಗಳ ಕಾಲ ಹರತಾಳ

ಜೂನ್ 30: ಇಡುಕ್ಕಿ- ಕಟ್ಟಪ್ಪನ ಸರ್ವೀಸ್ ಸಹಕಾರಿ ಬ್ಯಾಂಕ್ ಚುನಾವಣೆಯ ಸಂದರ್ಭದಲ್ಲಿ ಸಿಪಿಎಂ ಆಕ್ರಮಣದಲ್ಲಿ ಯುಡಿಎಫ್ ಕಾರ್ಯಕರ್ತರು ಗಾಯಗೊಂಡ ಹಿನ್ನೆಲೆಯಲ್ಲಿ ಯುಡಿಎಫ್ ಹರತಾಳ

ಇದು ಮಾತ್ರವಲ್ಲದೆ ಜೂನ್ ತಿಂಗಳಲ್ಲಿ ತಾಲೂಕು ಮಟ್ಟದಲ್ಲಿ ಹಾಗೂ ಪಂಚಾಯತು ಮಟ್ಟದಲ್ಲಿಯೂ ಅನೇಕ ಹರತಾಳಗಳು ತಾಂಡವವಾಡಿವೆ.

ಪ್ರಸಕ್ತ ಜುಲೈ ತಿಂಗಳು ಕಾಲಿಟ್ಟ ಕ್ಷಣದಲ್ಲಿಯೇ ಮತ್ತೆ ಬಂದಿದೆ ಹರತಾಳ ರಜಾ ದಿನಗಳು!
 
ಜುಲೈ 2: ಎಐವೈಎಫ್ ರಾಜ್ಯ ಕಾರ್ಯದರ್ಶಿ ಪಿಎಸ್ ಸುಪಾಲ್ ಎಂಬವರ ಬಂಧನವನ್ನು ಪ್ರತಿಭಟಿಸಿ ಪತ್ತನಾಪುರದಲ್ಲಿ ಸಿಪಿಐ ಹಾಗೂ ಪುನಲೂರಿನಲ್ಲಿ ಕಾಂಗ್ರೆಸ್ ಹರತಾಳ

ಜುಲೈ 3: ಅಮರ್ ನಾಥ ವಿವಾದದಲ್ಲಿ ಬಿಜೆಪಿ ದೇಶೀಯ ಸಮಿತಿ ಆಹ್ವಾನಿಸಿದ ಹರತಾಳಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಕೇರಳದಾದ್ಯಂತ ಬಿಜೆಪಿ ಹರತಾಳ. ಅದೇ ವೇಳೆ ಕೊಡಂಗಲ್ಲೂರಿನಲ್ಲಿ ಡಿವೈಎಫ್‌ಐ ನೇತಾರ ಬಿಜು ಎಂಬವರು ತಲೆಗೆ ಗಾಯಗಳಾಗಿ ಮರಣಹೊಂದಿದ ಹಿನ್ನಲೆಯಲ್ಲಿ ಡಿವೈಎಫ್ಐ ನೇತೃತ್ವದ ಹರತಾಳ

ಹರತಾಳಗಳೆಂದೂ ಇಲ್ಲಿ ಶಾಂತ ರೀತಿಯಲ್ಲಿರುವುದಿಲ್ಲ. ಕೊಲೆ, ಆಕ್ರಮಣ ಪ್ರತ್ಯಾಕ್ರಮಣಗಳು ನಡೆದೇ ನಡೆಯುತ್ತವೆ. ಅಂಗಡಿ, ಮನೆ ಮಹಲು ಧ್ವಂಸದೊಂದಿಗೆ ಯುವತಿಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ ಘಟನೆಯೂ ಕೊಡಂಗಲ್ಲೂರಿನಿಂದ ವರದಿಯಾಗಿದೆ. ವಾಹನಗಳ ಮೇಲೆ ಕಲ್ಲೆಸತ, ಹೆಚ್ಚಾಗಿ ಕೆಎಸ್‍ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತದೆ. ಸರಕಾರಿ ವಾಹನ, ಪೊಲೀಸ್ ವಾಹನಗಳು ಭಸ್ಮವಾಗುತ್ತವೆ. ಪತ್ರಿಕಾ ಕಛೇರಿಗಳ ಮೇಲೆಯೂ ಆಕ್ರಮಣ ನಡೆಸುವುದು ಎಲ್ಲಾ ಸರ್ವೇ ಸಾಮಾನ್ಯವೆಂದೇ ಹೇಳಬಹುದು.

ಇಷ್ಟಾದರೂ ಕೇರಳದ ಜನರು ಹಬ್ಬಗಳಂತೆ ಹರತಾಳವನ್ನೂ ಪ್ರೀತಿಸುತ್ತಾರೆ. ಶಾಲೆ ಕಾಲೇಜು ಕಚೇರಿಗಳಿಗೆ ರಜೆ ಎಂದು ಗಡದ್ದಾಗಿ ನಿದ್ದೆ ಹೊಡೆಯುವವರು ಒಂದೆಡೆಯಾದರೆ, ಹರತಾಳದಂದು ಇತರರಿಗೆ ಉಪದ್ರವ ನೀಡಲೆಂದೇ ಸಜ್ಜಾದ ಉಪದ್ರವಿ ಜೀವಿಗಳೂ ಇಲ್ಲಿದ್ದಾರೆ.

ಏನೇ ಇರಲಿ ಹರತಾಳ ಎಂದು ಘೋಷಣೆಯಾದ ಕೂಡಲೇ ಅಗತ್ಯ ಸಾಮಾನುಗಳ ಪೂರೈಕೆ ಮತ್ತು ಸಂಗ್ರಹಕ್ಕೆ ಜನ ಅಣಿಯಾಗುತ್ತಾರೆ. ರಜಾ ದಿನವಾದುದುದರಿಂದ ಚಿಕನ್, ಮಟನ್ ಮಾರುಕಟ್ಟೆಗಳಲ್ಲಿ ಹರತಾಳದ ಮುಂದಿನ ದಿನ ಎಂದಿಗಿಂತ ಜನ ಹೆಚ್ಚಿರುತ್ತಾರೆ. ಇದು ಮಾತ್ರವಲ್ಲದೆ ಹರತಾಳ ಎಂದ ಕೂಡಲೇ ರಾಜ್ಯದ ಮದ್ಯದಂಗಡಿಯ ಮುಂದೆ ದೊಡ್ಡ ಕ್ಯೂ ಕಂಡುಬರುತ್ತದೆ. ಅಂತೂ ಒಟ್ಟಿನಲ್ಲಿ ಹರತಾಳವನ್ನು ಕ್ಯಾಲೆಂಡರ್‌ಗಳಲ್ಲಿ ಸೇರಿಸಿ ಕೆಂಪುಗುರುತು ಮಾಡಿ ಬಿಟ್ಟರೆ ಉತ್ತಮ ಅನಿಸುತ್ತಿದೆ.ಬೇಕಾದರೆ ಹರತಾಳಕ್ಕಾಗಿ “Wish u a very Happy Hartaal” ಎಂದು ಗ್ರೀಟಿಂಗ್ಸ್ ಕಳುಹಿಸಬಹುದು!