ನಮ್ಮ ಮುರುಕಲು ಗುಡಿಸಲ ಒಳಗೆ
ಬುಡ್ಡಿ ದೀಪದ ಸುತ್ತ
ಪಿಸು ಮಾತುಗಳು ಹುಟ್ಟುವುದಿಲ್ಲ
ಸ್ನೇಹ ಮಾತ್ರ ಪಸರಿಸುವ ನಮ್ಮವರ
ಗೋಡೆ, ಬೇಲಿಗಳಲ್ಲಿ ಕಳ್ಳಿ ಗಿಡಗಳೂ ಬೆಳೆಯುವುದಿಲ್ಲ

ಹಗಲಿರುಳು ದುಡಿದ ಕೈ ಕಾಲುಗಳ
ಚಾಚಿ ಮಲಗುವೆನೆಂದರೆ
ಅಷ್ಟೂ ಜಾಗವೂ ಇಲ್ಲಿಲ್ಲ ಬಿಡಿ,
ಹೊಟ್ಟೆ ಹಸಿದಾಗ ಕೆಲವೊಮ್ಮೆ
ಪಾತ್ರೆ ತಳದಲ್ಲಿ ಗಂಜಿ ನೀರೂ ಇರುವುದಿಲ್ಲ

ನಮ್ಮೂರ ಫುಟ್‌ಪಾತ್‌ಗಳಲ್ಲಿ
ಭಿಕ್ಷೆ ಬೇಡುವ ಪುಟ್ಟ ಕೈಗಳಿಗೆ ನಾಲ್ಕಾಣೆ
ಎಸೆಯದ ನಮ್ಮವರು
ಬಾರ್, ಬೀರುಗಳಲ್ಲಿ ತುಂಬಿದ ಮದ್ಯ ಬಾಟಲು
ಬಗ್ಗಿಸಿ ಚಿಯರ್ಸ್ ಅನ್ನುತಿರುವಾಗ
ಇತ್ತ, ನಾಡ ಸಾರಾಯಿಯ ಮತ್ತಿಗೆ ಸತ್ತ
ಶವದ ಮುಂದೆ ಒಡೆದ ಬಳೆಚೂರುಗಳ ಲೆಕ್ಕವೇನು?
ತೊಟ್ಟು ಹನಿಯಿಲ್ಲದೆ ಒಣಗಿದ ಕೆರೆ ಗದ್ದೆಗಳು
ಒಂದೆಡೆ, ರೋಗ ರುಜಿನಗಳ ಸರಮಾಲೆ
ಆದರೂ ಭಾರತ ಪ್ರಕಾಶಿಸುತ್ತಿದೆ!
ಬಡವರ ರಕ್ತ ಹೀರಿದ ರಾಜಕಾರಣಿಗಳ
ಮಹಲುಗಳಲ್ಲಿ, ಡಾನ್ಸ್ ಬಾರ್‌ಗಳಲ್ಲಿ

‘ನಾವು ಬೆಳೆಯುತ್ತಿದ್ದೇವೆ’ ಎನುವರು ಅಧಿಕಾರದ
ಆಸನದಲಿ ಕುಳಿತು ಹಾಯಾಗಿ ‘ಧಣಿ’ಗಳು
ಅವರು ‘ನಮ್ಮ’  ಬಗ್ಗೆ ಹೇಳುತ್ತಿರುವರೆಂದು
ತಪ್ಪು ತಿಳಿದಿರುವಿರಿ ನೀವು…
ದಿಟ್ಟಿಸಿ ನೋಡಿ ಒಮ್ಮೆ, ಅವರು ಹೇಳಿದ್ದು 
ತಮ್ಮ ಉದರದ ಮೇಲೆ ಕೈಯಾಡಿಸುತ್ತಾ  ಅಲ್ಲವೇನೂ!

ಜೀವನದ ಹಗ್ಗ ಜಗ್ಗಾಟದೊಳು
ದಣಿದು ಬೇಸತ್ತ ಜನ ಸಾಮಾನ್ಯರು
ನಾವು, ಗಲ್ಲಿ ಗಲ್ಲಿಗಳಲ್ಲಿ ಹರಿವ
ರಕ್ತದೋಕುಳಿಯ ಹರಿವ ತಡೆಯಲೇನು?

ನಿ(ನ)ಮ್ಮ ಅಧಿಕಾರ ಹಗೆ ಹೊಗೆಯ ಮಬ್ಬಿನಲಿ
ನಮ್ಮೀ  ಗುಡಿಸಲ ಸ್ನೇಹ ಭಿತ್ತಿಯೊಳು
ನಮ್ಮವರೇ ಎದೆ ಸಿಗಿದು, ರಕ್ತ ಚಿತ್ತಾರ ಬಿಡಿಸಿದಾಗ
ರೋದನದ ನಡುವೆಯೂ, ಅಂದೊಮ್ಮೆ ನೀ ಹಾಡಿದ
‘ದೇಸ್ ಮೇರಾ ರಂಗೀಲಾ’ ಹಾಡು ನನ್ನ ಕೆಣಕಿತ್ತು.

Advertisements