ಚೆನ್ನೈನಲ್ಲಿ ಒಂದು ವರ್ಷ ದುಡಿದು ಇದೀಗ ಬೆಂಗಳೂರಿಗೆ ಬಂದಿದ್ದೇನೆ. ಅಲ್ಲಿನ ಉರಿಬಿಸಿಲಿಗೆ ಬೆವರು ಸುರಿಸಿ, ಸದ್ಯ ಬೆಂಗಳೂರಿನ ಚುಮು ಚುಮು ಚಳಿಗೆ ಮನಸಂತೂ ಪುಳಕಿತಗೊಂಡಿದೆ. ಆದ್ರೆ ಈ ಟ್ರಾಫಿಕ್ ಜಾಮ್ ನಲ್ಲಂತೂ ಮನಸ್ಸು ಬೇಜಾರಾಗಿ ಬಿಟ್ಟಿದೆ ಮಾರಾಯ್ರೆ. ಏನು ಮಾಡಲಿ? ಅದನ್ನಂತೂ ಯಾರಿಗೂ ತಪ್ಪಿಸಲು ಸಾಧ್ಯವಿಲ್ಲವಲ್ಲಾ …

ಈ ಟ್ರಾಫಿಕ್ ಜಾಮ್ ನಲ್ಲಿ ಒದ್ದಾಡುತ್ತಾ ಇರುವಾಗ ಚೆನ್ನೈ ಮೆಟ್ರೋ ರೈಲಿನ ಯಾತ್ರೆ ಮನಸ್ಸಲ್ಲಿ ಮೂಡಿಬರುತ್ತದೆ. ಅಲ್ಲಿ ಒಂದು ವರ್ಷ ಕಳೆದಿದ್ದರೂ ಮೆಟ್ರೋ ರೈಲಿನಲ್ಲೇ ನಾನು ಅನೇಕ ಬಾರಿ ಯಾತ್ರೆ ಮಾಡಿದ್ದು. ಅಲ್ಲಿನ ಬಸ್ ಯಾತ್ರೆ ನಂಗೆ ಇಷ್ಟವಿರಲ್ಲಿಲ್ಲ. ಯಾಕೆಂದ್ರೆ ಕಂಡಕ್ಟರ್ ಬಳಿಗೆ ನಾವೇ ಹೋಗಿ ಟಿಕೆಟ್ ಕೊಡ ಬೇಕು, ಆಮೇಲೆ ಭಾಷಾ ಸಮಸ್ಯೆ ಬೇರೆ. ಬಸ್ ನಂಬರ್ ನೋಡಿಕೊಂಡು ಹತ್ತಬೇಕು. ತಮಿಳಿನಲ್ಲಿ ಬರೆದ ಬಸ್ ಬೋರ್ಡ್ ಓದಲಿಕ್ಕಾಗುವುದಿಲ್ಲ. ಏನೆಲ್ಲಾ ಕಿರಿಕಿರಿ?. ಆದ್ರೆ ಟ್ರೈನಲ್ಲಿ  ಅದರ ರಗಳೆಯೇ ಇಲ್ಲ. ಅದಕ್ಕೆ ಮೆಟ್ರೋ ಟ್ರೈನ್ ಅಂದ್ರೆ ಅಚ್ಚುಮೆಚ್ಚು.
ಆದ್ರೆ ಒಂದು ಮಾತು..ಟ್ರೈನ್ ಓಡಾಡದೇ ಇರುವ ಸ್ಥಳಕ್ಕೆ ಬಸ್ಸಲ್ಲೇ ಹೋಗಿದ್ದೆ .(ಅದು ಏನೋ ಸಾಹಸ ಮಾಡಿದಂಥ ಅನುಭವವನ್ನು ನೀಡುತ್ತಿತ್ತು). ಅದಲ್ಲಿರಲಿ, ಸದ್ಯ ನಾನು ಹೇಳ ಹೊರಟಿರುವುದು ಮೆಟ್ರೋ ಟ್ರೈನ್ ಅನುಭವದ ಬಗ್ಗೆ. ಅಲ್ಲಿನ ಮೆಟ್ರೋ ಟ್ರೈನ್ ಯಾವಾಗಲೂ ಜನರಿಂದ ತುಂಬಿ ತುಳುಕ್ಕುತ್ತಿರುತ್ತದೆ. ಐದು  ನಿಮಿಷ ಅಥವಾ ಹತ್ತು ನಿಮಿಷಕ್ಕೊಮ್ಮೆ ಟ್ರೈನ್ ಇದ್ದರೂ ಜನರ ಗೌಜಿ ಇದ್ದೇ ಇರುತ್ತದೆ. ಬೆಳಗ್ಗಿನ ಹೊತ್ತು ಮತ್ತು ಸಂಜೆಯ ಸಮಯ ಜನ ಜಂಗುಳಿ ಹೇಳತೀರದು .

ಬೆಳಗ್ಗಿನ ಹೊತ್ತಲ್ಲಿ ಕೆಲಸಕ್ಕೆ ಹೋಗುವ ಜನರಾದರೆ, ಸಂಜೆಯ ಹೊತ್ತು ಮನೆ ತಲುಪುವ ಅವಸರ. ಅದರೆಡೆಯಲ್ಲಿ ಟ್ರೈನ್ ಒಳಗಡೆ ಎಳ್ಳುಂಡೆ, ಚಕ್ಕುಲಿ, ಕರ್ಚೀಫ್ ,ಹೂ, ಹಣ್ಣು ಮಾರುವ ಮಾರಾಟಗಾರರು. ಹಾಡು ಹಾಡುತ್ತಾ , ತಾಳ ಹಾಕುವ ಕುರುಡರು, ಭಿಕ್ಷೆ ಬೇಡುವ ಅಂಗವಿಕಲರು ಒಂದೆಡೆಯಾದರೆ ಕಿವಿಗೆ FM ಹಾಕಿ ತನ್ನದೇ ಲೋಕದಲ್ಲಿ ಮುಳುಗುವ ಜನರು ಇನ್ನೊಂದೆಡೆ.

ಬೆಳಿಗ್ಗಿನ ಹೊತ್ತು ಎಂದಿನಂತೆ ಟ್ರೈನ್ ಬರುವ ಸಮಯ. ಫ್ಲೈ ಓವರ್ ಮೇಲೆ ಜನರ ತಿಕ್ಕಾಟ. ಟಿಕೆಟ್ ಕೌಂಟರ್ ಮುಂದೆ ದೊಡ್ಡದಾದ ಕ್ಯೂ. ಟ್ರೈನ್ ಬಂದೇ ಬಿಟ್ಟಿತು ಅಂದಾಗ ಓಡೋಡಿ ಹತ್ತುವ ಸಾಹಸಿಗ ಯಾತ್ರಿಕರು. ಅಂತು ಇಂತೂ ಟ್ರೈನ್ ಒಳಗೆ ಹತ್ತಿ ಸೀಟ್ ಸಿಕ್ಕಿದರೆ ಬಚಾವ್. ಕೆಲವೊಮ್ಮೆ ಫುಟ್ ಬೋರ್ಡ್ನಲ್ಲಿ ನಿಂತು ಪ್ರಯಾಣ ಮಾಡಿದಂತಹ ಪರಿಸ್ಥಿತಿಯೂ ಬಂದದ್ದು ಇದೆ.

ಲೇಡಿಸ್ ಕಂಪಾರ್ಟ್ಮೆಂಟ್ ಹತ್ತಿದರೆ ಅಲ್ಲಿ ನಾನಾ ವಿಷಯಗಳು ಕೇಳಲ್ಲಿಕ್ಕೆ ಸಿಗುತ್ತದೆ. ಟಿವಿ ಸೀರಿಯಲ್ನಿಂದ ಹಿಡಿದು ಕುಟುಂಬ ಪುರಾಣದವರೆಗೆ, ಪ್ರೀತಿ ಹುಟ್ಟುವ ಕಥೆಗಳಿಂದ ವಿರಸದ ವರೆಗೆ ಎಲ್ಲವು ಇಲ್ಲಿ ಚರ್ಚಾ ವಿಷಯಗಳೇ..
ಕೆಲಸಕ್ಕೆ ಹೋಗುವ ತುರಾತುರಿಯಿಂದ ಬೆಳಗ್ಗಿನ ತಿಂಡಿ, ಡಬ್ಬದಲ್ಲಿ ಕಟ್ಟಿಕೊಂಡು ಬಂದು ಟ್ರೈನಿನ ಒಳಗೆ ತಿನ್ನುವವರು, ಉಟ್ಟ ಸೀರೆ ಸರಿ ಮಾಡಿ  ಕೊಳ್ಳುವವರು…”ಅಮ್ಮಾ ಪನೀರ್ ರೋಜ್, ಮಲ್ಲಿ ಪೂ ಮೊಳ ಅನ್ಜ್ ರುವಾ ಮಾ”  ಎಂದು ಹೂ ಕಟ್ಟುತ್ತಾ ಕೂಗುವ  ಹೂಗಾರ್ತಿಯರು. ಒಮ್ಮೆ ಎಲ್ಲರೂ ನೋಡುವಂತೆ ಮಾಡುವ  ಹಿಜಿಡಾಗಳು. ತುಂಬಾ ರಶ್ ಇರುವಾಗ ಜಗಳವಾಡುವ ಜಗಳಗಂಟಿಯರು :) ತಮ್ಮ ವಸ್ತು ಕಳೆದು ಕೊಂಡಾಗ ಗೋಳಿಡುವ ಮಂದಿ… ಹೀಗೆ ಎಷ್ಟೋ ಜನರು ನಮಗೆ ಕಾಣಸಿಗುತ್ತಾರೆ.

ಜನರಲ್ ಕಂಪಾರ್ಟ್ಮೆಂಟ್ ನಲ್ಲಿ ಹತ್ತಿದಾಗ ಇರಿಸು ಮುರಿಸು ಅನುಭವಿಸಿ ಒಂದು ಮೂಲೆಯಲ್ಲಿ ನಿಂತು ಕೊಂಡದ್ದು ಎಲ್ಲವೂ ಅನುಭವದ ತುಣುಕುಗಳು.
ಸಂಜೆ ಹೊತ್ತಿನಲ್ಲಿ ಸುಸ್ತಾದ ಮುಖಗಳು. ಮನೆ ಸೇರುವ ತವಕದಲ್ಲಿ ಟ್ರೈನ್ ಹತ್ತಿಬಿಟ್ಟು ಸೀಟ್ ಸಿಕ್ಕಿದರೆ ‘ಉಸ್ಸಪ್ಪ’ ಅಂಥ ಹೇಳಿಕೊಳ್ಳುವುದು ಇದೆಲ್ಲಾ ಮಾಮೂಲಿ…

ಕೆಲವೊಮ್ಮೆ  ಟ್ರೈನ್ ಬರುವಾಗ ‘ರಶ್ ‘ಇದೆ ಅಂಥ ಅದನ್ನು ಹತ್ತುವುದ ಬಿಟ್ಟು ಮುಂದಿನ ಟ್ರೈನ್ಗೆ ಕಾಯುತ್ತಾ ರೈಲ್ವೆ ಸ್ಟೇಷನ್ ಬೆಂಚಿನಲ್ಲಿ ಕುಳಿತು ನೆಲಕಡಲೆ ಜಗಿಯುತ್ತಾ ಕುಳಿತಿರುವಾಗ ಕೈ ಕೈ ಹಿಡಿದು ಸುತ್ತಾಡುತ್ತಾ ಬರುವ ಯುವಜೋಡಿಯಂತೂ ನಿಮ್ಮ ಕಣ್ಣಿಗೆ ಬಿದ್ದೇ ಬಿಡುತ್ತಾರೆ..

ಅದೇ ವೇಳೆ, ಟ್ರೈನಲ್ಲಿ ಆರಾಮವಾಗಿ ಕುಳಿತುಕೊಂಡರೆ ಹೆಂಗಸರಂತೂ ಸುಮ್ಮನಿರುವುದ್ದಿಲ್ಲ. ಹೆಣೆಯದ ಮಲ್ಲಿಗೆ ಹೂಗಳನ್ನು ತೆಗೆದು ಕೊಂಡು ಮಾತಾಡುತ್ತಾ ಹಾರ ಹೆಣೆಯುತ್ತಾರೆ. ಅಡುಗೆಗಾಗಿ ಬಸಳೆ ಸೊಪ್ಪು, ನುಗ್ಗೆ ಸೊಪ್ಪು , ಬೀನ್ಸ್ ತೆಗೆದು ಕೊಂಡಿದ್ದಾದರೆ,  ಅಲ್ಲಿಯೇ ಚಿವುಟಿ ಅಡುಗೆಗೆ ಸಿದ್ದತೆ ನಡೆಸುತ್ತಿರುತ್ತಾರೆ. ಅಂತೂ ಅವರು ಸಮಯವನ್ನು ಸದುಪಯೋಗ ಪಡಿಸುತ್ತಿರುವುದನ್ನು ಕಂಡರೆ ಖುಷಿಯಾಗುತ್ತದೆ.

ಇನ್ನೊಂದು ಅನುಭವ ಹೇಳಲೇ ಬೇಕೆಂದೆನಿಸುತ್ತದೆ. ನಾನು ನನ್ನ ಅಣ್ಣನ ಜೊತೆ ಪಾರ್ಕ್ ಸ್ಟೇಷನ್ ಹೋಗಿದ್ದೆ. ಮುಸ್ಸಂಜೆಯಾಗಿತ್ತು. ಇನ್ನೇನೋ ಹಾಸ್ಟೆಲ್ ತಲುಪಬೇಕೆಂಬ ಅವಸರ..ಟ್ರೈನ್ ಬಂದೆ ಬಿಟ್ಟಿತು .ಟಿಕೆಟ್ ತೆಗೆದುಕೊಳ್ಳದೇ ಟ್ರೈನ್ ಹತ್ತಿದ್ದೆವು. ಟ್ರೈನಲ್ಲಿ ಕುಳಿತ್ತಿದ್ದರೂ ಅಂಜಿಕೆ  ಆಗುತ್ತಿತ್ತು. ಎಲ್ಲಿ ಟಿಕೆಟ್ ಪರಿಶೀಲಕ ಬಂದು ಬೈದು, ದಂಡ ಕಟ್ಟಿಸುತ್ತಾನೇನೋ ಎಂಬ ಭಯನನ್ನನ್ನಾವರಿಸಿತ್ತು . ನಮ್ಮ ಅಜ್ಜಿ ಪುಣ್ಯ! ಅಂದು ಚೆಕಿಂಗ್ ಇರಲಿಲ್ಲ..ನಮ್ಮ ಸ್ಟಾಪ್ ತಲುಪುವ ವರೆಗೆ ಉಸಿರು ಬಿಗಿ ಹಿಡಿದು ಕುಳಿತ್ತಿದ್ದೆವು..ಟಿಕೆಟ್ ಇಲ್ಲದ ಆ  ಯಾತ್ರೆ ಜೀವನದಲ್ಲಿ ಮರೆಯಲಾಗದ ಘಟನೆಯೇ ಹೌದು.

ಬೆಂಗಳೂರಿಗೆ ಬಂದು ಈ ಟ್ರಾಫಿಕ್ ಜಾಮ್ ಸಮಸ್ಯೆ ಅನುಭವಿಸುತ್ತಿರುವಾಗ ಅದೇಕೋ ಚೆನ್ನೈ ಮೆಟ್ರೋ ಟ್ರೈನ್ ಯಾತ್ರೆಯ ನೆನಪು ಮರುಕಳಿಸುತ್ತದೆ. ಒಟ್ಟಿನಲ್ಲಿ ಚೆನ್ನೈ ಮೆಟ್ರೋ ನಗರದ ಮೆಟ್ರೋ ಟ್ರೈನ್ ನಲ್ಲಿನ ಯಾತ್ರೆ ಅನುಭವಿಸಿಯೇ ಅರಿಯಬೇಕು.

Advertisements