ಘಟನೆ 1 : ನನ್ನ ಗೆಳತಿಯೊಬ್ಬಳು ಕಾಲೇಜಿನಲ್ಲಿರುವಾಗ ನೆರೆ ಮನೆಯ ಹುಡುಗನೊಬ್ಬನನ್ನು ಪ್ರೀತಿಸಿದಳು. ವಿಷಯ ಮನೆಗೆ ತಿಳಿಸಿದಾಗ ಮನೆಯವರೂ ಒಪ್ಪಿಕೊಂಡು ವಿವಾಹದ ಸಿದ್ಧತೆಯೂ ನಡೆಯಿತು. ಇನ್ನೇನು ನಿಶ್ಚಿತಾರ್ಥ ನಡೆಯಲು ಎರಡು ದಿನಗಳಿರುವಾಗ ಹುಡುಗ ಆಕೆಗೆ ಫೋನ್ ಮಾಡಿ ತನ್ನನ್ನು ಭೇಟಿಯಾಗಬೇಕೆಂದು ಹೇಳಿದ. “ಆಯ್ತು” ಎಂದು ಈಕೆ ಒಪ್ಪಿಕೊಂಡಳು. ಭೇಟಿಯಾದಾಗ ಆತ ಹೇಳಿದ “ಬಾ..ನಾವು ಹಾಸ್ಪಿಟಲ್್ಗೆ ಹೋಗೋಣ”. “ಯಾಕೆ?” ಎಂಬ ಆಕೆಯ ಪ್ರಶ್ನೆಗೆ ಅವ ನೀಡಿದ ಉತ್ತರ.”ನೀನು ವರ್ಜಿನ್ ಹೌದಾ? ಅಲ್ವಾ ಅಂತಾ ತಿಳಿಬೇಕು”. ಹಾಂ! ಇಷ್ಟೊಂದು ಕಾಲ ತನ್ನೊಂದಿಗೆ ಸುತ್ತಾಡಿ ಪ್ರೀತಿಸಿದ ಹುಡುಗ ಇದೀಗ ತನ್ನ ಶೀಲದ ಬಗ್ಗೆ ಶಂಕೆ ಮಾಡುತ್ತಿದ್ದಾನೆ ಎಂದರೆ ಯಾವ ಹುಡುಗಿ ತಾನೇ ಸಹಿಸಿಯಾಳು? ಮತ್ತೆ ಒಂದಿಷ್ಟು ಜಗಳ. ತನ್ನ ಬಗ್ಗೆ ಇಷ್ಟೊಂದು ಶಂಕೆ ಪಡುವ ವ್ಯಕ್ತಿ ತನಗೆ ಬೇಡವೇ ಎಂದು ಈಕೆ ಹೇಳಿಯೇ ಬಿಟ್ಟಳು. ಮದುವೆ ರದ್ದಾಯಿತು.

 

ಘಟನೆ 2: ಮನೆಯವರು ನಿಶ್ಚಯಿಸಿದ ಮದುವೆ. ಹುಡುಗ ಹುಡುಗಿ ಪರಸ್ಪರ ನೋಡಿ ಮೆಚ್ಚುಗೆಯಾಗಿದೆ. ನಿಶ್ಚಿತಾರ್ಥಕ್ಕೆ ಕೆಲವು ದಿನಗಳಷ್ಟೇ ಬಾಕಿಯಿರುವಾಗ ಫೋನ್್ನಲ್ಲಿ ಭಾರೀ ಸಂಭಾಷಣೆ ನಡೆಸುತ್ತಿದ್ದರು ಈ ಜೋಡಿ. ಹೀಗೆ ಬಿಂದಾಸ್ ಆಗಿ ಮಾತಾನಾಡುತ್ತಿದ್ದಾಗ ಮಾತು ಮಾತಲ್ಲಿ ಆ ಹುಡುಗಿ ತನ್ನ ಭಾವೀ ಪತಿಯಲ್ಲಿ ‘Are you virgin?’ ಎಂದು ಕೇಳಿ ಬಿಟ್ಟಳು. ‘What you mean ?’ಅಂತಾ ಹುಡುಗನ ಪ್ರಶ್ನೆ. ನೀನು ವಿದೇಶದಲ್ಲಿ ಕೆಲಸ ಮಾಡಿದವನು. ಅಲ್ಲಿಯವರಿಗೆ ಇಂಥದೆಲ್ಲಾ ಸಿಲ್ಲಿ ವಿಷಯ. ಅದಕ್ಕೆ ಕೇಳಿದೆ ಎಂದು ಹುಡುಗಿ ಹೇಳಿದರೂ, ಹುಡುಗನಿಗೆ ಅವಳ ಈ ಪ್ರಶ್ನೆ ಎಳ್ಳಷ್ಟೂ ಹಿಡಿಸಿಲ್ಲ. ಅಬ್ಬಾ! ಇವಳಿಗೆಷ್ಟು ಕೊಬ್ಬು ಅಂದು ಕೊಂಡು ತನಗೆ ಈ ಮದುವೆ ಇಷ್ಟವಿಲ್ಲ ಎಂದು ಹೇಳಿ ಆ ಹುಡುಗ ಮದುವೆಯಿಂದ ಹಿಂದೆ ಸರಿದ.

ಮೇಲಿನ ಎರಡು ಘಟನೆಯನ್ನು ಗಮನಿಸಿ ನೋಡಿ. ಇಲ್ಲಿ ಹುಡುಗನಿಗೆ ಏನು ಬೇಕಾದರೂ ಮಾಡಬಹುದು, ಏನು ಬೇಕಾದರೂ ಆಡಬಹುದು. ಆದರೆ ಹುಡುಗಿ? ವರ್ಜಿನಿಟಿ ಎನ್ನುವುದೇ ಇಲ್ಲಿನ ಸಮಸ್ಯೆಯ ಹುಟ್ಟಿಗೆ ಕಾರಣ. ಏತನ್ಮಧ್ಯೆ ವರ್ಜಿನಿಟಿ ಎಂದರೆ ? ಹೆಣ್ಣು ಅಥವಾ ಗಂಡು ಈ ಮೊದಲು ಯಾರೊಂದಿಗೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳದಿದ್ದರೆ ಅಂತವರು ವರ್ಜಿನ್ ಎಂದು ಕರೆಯಲ್ಪಡುತ್ತಾರೆ ಎಂಬುದು ವರ್ಜಿನಿಟಿಗಿರುವ ವ್ಯಾಖ್ಯಾನ. ಏನಿದ್ದರೂ ಗಂಡು ವರ್ಜಿನ್ ಹೌದೋ ಅಲ್ಲವೋ ಎಂಬುದನ್ನು ತಿಳಿಯುವುದಂತೂ ಅಸಾಧ್ಯ ಸಂಗತಿ. ಆದರೆ ಹೆಣ್ಣು ಹಾಗಲ್ಲ. Its the big issue of small tissue ಎಂದು ಹೆಣ್ಣಿನ ವರ್ಜಿನಿಟಿಗೆ ಆಧುನಿಕ ವ್ಯಾಖ್ಯಾನವನ್ನು ನೀಡಬಹುದು. ಅಂದ ಹಾಗೆ ಪ್ರತಿಯೊಬ್ಬ ಪುರುಷನೂ ತನ್ನೊಂದಿಗೆ ದೇಹ ಹಂಚುವ ಹೆಣ್ಣಿನ ಬಗ್ಗೆ ತುಂಬಾ ಪೊಸೆಸ್ಸಿವ್ ಆಗಿರುತ್ತಾನೆ. ಅಂದರೆ ಪ್ರತಿಯೊಬ್ಬ ಹುಡುಗನಿಗೂ ತಾನು ಮದುವೆಯಾಗುವ ಹುಡುಗಿ ವರ್ಜಿನ್ ಆಗಿರಬೇಕೆಂಬ ಬಯಕೆ ಇದ್ದೇ ಇರುತ್ತದೆ ಎಂಬುದು ನಿಜ.

ಕೆಲವೊಮ್ಮೆ ಇತರರೊಂದಿಗೆ ಹಾಸಿಗೆ ಹಂಚದಿದ್ದರೂ ಆಕಸ್ಮಿಕವಾಗಿ ವರ್ಜಿನಿಟಿ ಕಳೆದುಕೊಳ್ಳುವ ಪ್ರಸಂಗವೂ ಹುಡುಗಿಗೆ ಬಂದೊದಗುತ್ತದೆ. ಆದರೆ ಕೆಲವೊಂದು ಗಂಡಸರು ಇದನ್ನು ತಪ್ಪಾಗಿ ಗ್ರಹಿಸಿ ಇವಳು ಮೊದಲು ಇನ್ನೊಬ್ಬನ ಜೊತೆ ಮಲಗಿದ್ದಾಳೆ ಎಂದು ಸಂಶಯ ಪಡುವುದು ಎಷ್ಟು ಸರಿ? ಅಂತೂ ಏನೇ ಹೇಳಿದರೂ ಸಮಾಜದಲ್ಲಿ ಇಂದಿಗೂ ಗಂಡಸರ ಪ್ರಾಬಲ್ಯ ಇದ್ದೇ ಇದೆಯಲ್ಲವಾ?. ನಗರದ ಹೆಣ್ಣು, ಗಂಡು ಎಲ್ಲವನ್ನೂ ಕೂಲ್ ಆಗಿ ತೆಗೆದುಕೊಂಡು ಹೇಗೋ ಸಂಸಾರ ಸಾಗಿಸಬಹುದು. ಆದರೆ ಹಳ್ಳಿ ಹುಡುಗಿಯರ ಕತೆಯೇನು? ತನ್ನ ಕೈಹಿಡಿಯುವ ಗಂಡು ವಿವಾಹದ ಮೊದಲು ಲೈಂಗಿಕ ಕ್ರಿಯೆಯಲ್ಲಿ ತೊಡಗಿರಬಹುದು. ಇದನ್ನು ಯಾವುದೇ ಹುಡುಗಿಯು ಪ್ರಶ್ನಿಸುವುದಿಲ್ಲ. ಒಂದು ವೇಳೆ ಮುಕ್ತವಾಗಿ ಅದನ್ನು ಕೇಳಿದರೆ ಗಂಡಸರ್ಯಾಕೆ ಸಿಡುಕುತ್ತಾರೆ? ಭಾರತೀಯ ಸಂಪ್ರದಾಯ ಪ್ರಕಾರ ವಿವಾಹಪೂರ್ವ ಲೈಂಗಿಕ ಸಂಬಂಧ ತಪ್ಪು ಎನ್ನುವ ಭಾವನೆ ಎಲ್ಲಿಯೂ ಮನೆ ಮಾಡಿದೆ. ಆದರೆ ಈಗೀಗ ಪಾಶ್ಚಾತ್ಯ ಸಂಪ್ರದಾಯಕ್ಕೆ ಮಾರುಹೋಗುತ್ತಿರುವ ಭಾರತೀಯರು ಇದನ್ನೆಲ್ಲಾ ಡೋಂಟ್ ಕೇರ್ ಮಾಡುತ್ತಾರೆಂಬುದೂ ನಿಜ. ಆದರೂ ಹೆಣ್ಣಿನ ವಿಷಯಕ್ಕೆ ಬಂದಾಗ ಎಲ್ಲಾ ಗಂಡಸರೂ ಪಕ್ಕಾ ಸಂಪ್ರದಾಯಿಗಳೇ…ತಾನು ಎಷ್ಟೇ ಹುಡುಗಿಯರ ಜೊತೆ ದೇಹ ಹಂಚಿರಲಿ ತನ್ನ ಹುಡುಗಿ ಮಾತ್ರ ಕನ್ನಿಕೆಯಾಗಿರಬೇಕು ಎಂಬ ಬಯಕೆ ಅವರದ್ದು. ಮದುವೆಯ ಮೊದಲು ಹುಡುಗಿ ಯಾರನ್ನಾದರೂ ಪ್ರೀತಿಸಿದ್ದಾಳೆ ಎಂದು ತಿಳಿದರೆ ಸಾಕು ಮದುವೆಯಾಗುವ ಹುಡುಗ ಆಕೆಗೆ ತಾಳಿ ಕಟ್ಟಲು ಹಿಂದೆ ಮುಂದೆ ನೋಡುತ್ತಾನೆ. ಪ್ರೀತಿಸಿದ್ದಾದರೆ ದೈಹಿಕ ಸಂಪರ್ಕವನ್ನೂ ಮಾಡಿರಬಹುದೇ? ಎಂಬ ಸಂಶಯವೂ ಅವನಲ್ಲಿರುತ್ತದೆ. ಪ್ರೀತಿ ಮಾಡಿದ ಮಾತ್ರಕ್ಕೆ ದೇಹವನ್ನು ಹಂಚಿಕೊಳ್ಳಬೇಕೆಂದೇನೂ ಇಲ್ಲವಲ್ಲಾ? ಆದಾಗ್ಯೂ, ಕೆಲವೊಂದು ಬಾರಿ ಇಂತಹಾ ಸಂದೇಹಗಳು ಅದೆಷ್ಟೋ ಮದುವೆ ಸಂಬಂಧಗಳು ಮುರಿದು ಬೀಳಲು ಕಾರಣವಾಗುತ್ತದೆ.

ಆದರೆ ಇದೀಗ ಗಂಡಸರ ಯೋಚನಾ ಲಹರಿ ಬದಲಾಗಿದೆ ಅಂತಾನೇ ಹೇಳಬಹುದು. ಹಳ್ಳಿಯಲ್ಲಾದರೆ ಹುಡುಗಿಯರು ಪ್ರೀತಿಸುವುದೇ ತಪ್ಪು ಎಂಬ ಅಭಿಪ್ರಾಯ ಇದ್ದೇ ಇರುತ್ತದೆ. ಹುಡುಗಿ ಯಾವುದೋ ಹುಡುಗನನ್ನು ಇಷ್ಟ ಪಡುತ್ತಾಳೆ ಎಂದು ಮನೆಯವರಿಗೆ ತಿಳಿದರೆ ಸಾಕು ಎರಡೇ ದಿನದಲ್ಲಿ ಆಕೆಯನ್ನು ಮದುವೆ ಮಾಡಿಸಿ ಬಿಡುತ್ತಾರೆ. ಆದರೆ ನಗರದಲ್ಲಿ ಪರಿಸ್ಥಿತಿ ಭಿನ್ನವಾಗಿರುತ್ತವೆ. ಈಗಿನ ಗಂಡಸರಂತೂ ತನ್ನ ಹುಡುಗಿ ಕಾಲೇಜು ಲೈಫ್್ನಲ್ಲಿ ಅಥವಾ ಮದುವೆಗೆ ಮುನ್ನ ಯಾವನೋ ಒಬ್ಬನನ್ನು ಪ್ರೀತಿಸಿದ್ದರೆ ಏನಂತೆ? ಮದುವೆಯಾದ ಮೇಲೆ ಅವಳು ನನ್ನವಳು ಮಾತ್ರ ಆಗಿರಬೇಕು ಎಂಬ ನಿಲುವುಳ್ಳವರಾಗಿರುವ ಕಾರಣ ಇಲ್ಲಿ ಅಷ್ಟೊಂದು ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು. ಇಂತಹಾ ಸಮಸ್ಯೆಗಳನ್ನೆಲ್ಲಾ ಗಂಭೀರವಾಗಿ ಅಥವಾ ಕೂಲ್ ಆಗಿ ತೆಗೆದುಕೊಳ್ಳಬೇಕೇ ಎನ್ನುವುದು ಅವರವರಿಗೆ ಬಿಟ್ಟ ವಿಚಾರ. ಆದರೆ ಬೆಡ್್ರೂಂ ವಿಷಯಕ್ಕೆ ಬಂದಾಗ Men are all the same! ಗಂಡಸರಿಗೆ ಹೇಗೆಯೋ ಅದೇ ರೀತಿ ಹೆಣ್ಣಿಗೂ ಬಯಕೆಗಳಿರುತ್ತವೆ. ತನ್ನ ಗಂಡ ಕೂಡಾ ವರ್ಜಿನ್ ಆಗಿರಬೇಕೆಂದು ಪ್ರತಿಯೊಂದು ಹೆಣ್ಣು ಬಯಸುತ್ತಾಳೆ. ಇದು ಅವಳ ಅಂತರಾಳದ ಆಗ್ರಹ. ಈ ಬಗ್ಗೆ ಆಕೆ ಮುಕ್ತವಾಗಿ ಕೇಳಿದರೆ ತಪ್ಪೇನಿದೆ ಹೇಳಿ?

Advertisements