ನಿನ್ನನ್ನು ನೋಡಿದಾಗ…ಹುಂ ಏನು ಹೇಳ್ಬೇಕು ಅಂತಾ ತಿಳಿತಾ ಅಲ್ಲ. ಸಂಥಿಂಗ್ ಲೈಕ್ ನನ್ನ ಮನಸ್ಸಲ್ಲಿ…. ಕುಛ್ ಕುಛ್ ಹೋತಾ ಹೈ. ನಾವಿಬ್ಬರೂ ಈವರೆಗೆ ಮಾತನಾಡಿಲ್ಲ. ಆದರೂ ನೀನು ಯಾವಾಗಲೂ ನನ್ನತ್ತ ನೋಡಿ ಚಿಕ್ಕದೊಂದು ಸ್ಮೈಲ್ ಕೊಟ್ಟಾಗ ನನಗೇನೋ ಪುಳಕ. ಆಫೀಸಿನಲ್ಲಿ ನೀನು ಏನೋ ನೆಪ ಮಾಡಿಕೊಂಡು ನನ್ನ ಕ್ಯಾಬಿನ್ ಪಕ್ಕ ಬರುವಾಗ ಇವ ಇಂದು ನನ್ನಲ್ಲಿ ಮಾತಾಡಿಯೇ ಮಾತಾಡುತ್ತಾನೆ ಎಂದು ನಾನು ಅಂದುಕೊಳ್ಳುತ್ತೇನೆ. ಆದ್ರೆ ನೀನು…ಅದೇ ಮುಗುಳ್ನಗು ಕೊಟ್ಟು ಮತ್ತೆ ಮತ್ತೆ ನನ್ನನ್ನು ಚಡಪಡಿಸುವಂತೆ ಮಾಡ್ತಿಯಾ…

ನಿಜ ಹೇಳಲಾ? ನಿನ್ನ ಆ ನಗುವಿನಲ್ಲಿ ಅದೇನು ಜಾದೂ ಇದೆಯಂತ ನಂಗೊತ್ತಿಲ್ಲ ಕಣೋ. ನಿನ್ನ ನಗುವಿನ ಮುಂದೆ ನಾನಂತೂ ಕ್ಲೀನ್ ಬೌಲ್ಡ್ … 

ಹೇ..ಹುಡುಗ…ನಿನ್ನ ಹೆಸರು ಏನೂಂತ ನಂಗೆ ಗೊತ್ತಿಲ್ಲ. ನಿನ್ನ ಊರು ಯಾವುದು, ಭಾಷೆ ಯಾವುದು ಎಂಬುದು ಸಹ ನನಗೆ ತಿಳಿದಿಲ್ಲ. ಆದರೆ ನಿನ್ನ ಆ ಕ್ಯೂಟ್ ಸ್ಮೈಲ್ ಇದೆಯಲ್ಲಾ ಅದು ವರ್ಣನೆಗೆ ಅತೀತವಾದದ್ದು. 

ನನ್ನ ಮೊದಲ ಲವ್ ಬ್ರೇಕ್ ಅಪ್ ಆದಾಗ ಇನ್ನು ಮುಂದೆ ಲವ್ ಮಾಡುವುದಿಲ್ಲ ಅಂತಾನೇ ನಿರ್ಧಾರ ತೆಗೆದುಕೊಂಡವಳು ನಾನು. ಜೀವನದಲ್ಲಿ ಇನ್ಯಾವ ಹುಡುಗನನ್ನು ನನಗೆ ಪ್ರೀತಿಸಲು ಸಾಧ್ಯವಿಲ್ಲ ಅಂತಾ ಅಂದ್ಕೊಡ್ಡಿದ್ದೆ. ಆದರೆ ನೀನು… ನಿನ್ನ ನಗೆಯಲ್ಲಿಯೇ ನನ್ನನ್ನು ಮಂತ್ರಮುಗ್ದಳನ್ನಾಗಿಸಿದೆ. ನಿನ್ನ ಮನಸ್ಸಲ್ಲಿ ನನ್ನ ಬಗ್ಗೆ ಯಾವ ಭಾವನೆಯಿದೆಯೋ ಎಂದು ನನಗೆ ತಿಳಿದಿಲ್ಲ. ಆದರೆ ನೀನು ನನ್ನನ್ನು ಇಷ್ಟ ಪಡುತ್ತಿ ಅಂತಾ ನಂಗೊತ್ತು. ಯಾಕೆಂದರೆ ನೀನು ಚುಪ್ ಚುಪ್ಕೇ ನನ್ನನ್ನು ನೋಡ್ತಾ ಇರ್ತೀಯಾ. ನನ್ನ ಪ್ರತಿಯೊಂದು ಚಲನವಲನಗಳನ್ನು ಗಮನಿಸುತ್ತಾ ಇರುತ್ತಿಯಾ. ಆಮೇಲೆ ನಾನೆಲ್ಲಾದರೂ ನಿನ್ನತ್ತ ನೋಡಿದ್ರೆ, ಏನೂ ಗೊತ್ತಿಲ್ಲ ಅನ್ನುವಂತೆ ಬೇರೆಲ್ಲೋ ದೃಷ್ಟಿ ನೆಟ್ಟಿರುತ್ತಿಯಾ…ನೀನು ತುಂಬಾ ನಾಚಿಕೆ ಸ್ವಭಾವದವನು ಅಂತಾ ನಂಗೊತ್ತು. ಆದ್ರೆ ಒಂದೇ ಒಂದು ಬಾರಿ ನನ್ನಲ್ಲಿ ಮಾತನಾಡಿಸಲಾರೆಯಾ ಪ್ಲೀಸ್? 

ಮನೆಗೆ ಹೋದರೆ ನಿನ್ನ ಆ ಮುಗುಳ್ನಗು ನನ್ನ ನೆನಪಲ್ಲಿ ಸುಳಿಯುತ್ತಿರುತ್ತದೆ. ನೀನು ಪ್ರತಿ ಬಾರಿ ನನ್ನನ್ನು  ನೋಡಿದಾಗ ನೀಡುವ ಆ ಸ್ಮೈಲ್ ನೆನೆದುಕೊಂಡೇ ನಾನು ಸುಮ್ ಸುಮ್ನೆ ನಗ್ತೇನೆ. ನಿನ್ನದೇ ಯೋಚನೆ ಮನದಲ್ಲಿ…ಯಾಕೆ ಈ ತಳಮಳ? ಏನೇ ಬರೆಯಲು ಕುಳಿತರೂ ನೀನೆ ನೆನಪಾಗ್ತಾ ಇದ್ದೀಯಾ. ಅದಕ್ಕೆ ಆ ಮೊದಲ ಪ್ರೇಮದಲ್ಲಿ ಸೋತು ಕಂಗಾಲಾಗಿದ್ದ ನಾನು ಇದೀಗ ಮತ್ತೆ ಪ್ರೇಮದಲ್ಲಿ ಬೀಳುತ್ತಿದ್ದೇನಾ ಅಂತಾ ಒಂದು ಸಂಶಯ ನನ್ನ ಮನದ ಮೂಲೆಯಲ್ಲಿ. ಏನಿದ್ದರೂ ನಿನ್ನನ್ನು ನೋಡಿದ ನಂತರ ಪ್ರೇಮದ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ನಾನು ಸಜ್ಜಾಗಿದ್ದೇನೆ. ನಿನಗೆ ನಾನು ಇಷ್ಟವಾಗಿದ್ದರೆ ಹೇಳು….ಐ ಆ್ಯಮ್ ವೈಟಿಂಗ್…

Advertisements