ಜಾನ್…ಇದು ಸರಿಯಲ್ಲ…ನಾವು ಮಾಡ್ತಿರೋದು ತಪ್ಪು ಅಂತಾ ನಿಂಗೆ ಅನಿಸಲ್ವಾ?

ಇಲ್ಲ..ಡಿಯರ್ ಇದರಲ್ಲಿ ತಪ್ಪೇನಿದೆ?

ಆದ್ರೂ…ನನಗೆ ಭಯ ಆಗ್ತಾ ಇದೆ.

ಕೂಲ್ ಯಾರ್…ಇದೆಲ್ಲಾ ಕಾಮನ್… ಹಾಗಂತಾ ನಾವು ದೊಡ್ಡ ತಪ್ಪೇನು ಮಾಡ್ತಾ ಇಲ್ಲ. ಜೀವನದ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡ್ಬೇಕು. ನಿನ್ನ ಮನಸ್ಸಿಗೆ ಏನು ಬೇಕು ಅದನ್ನು ಗಳಿಸ್ಬೇಕು. ಈ ಪಾಪಪ್ರಜ್ಞೆಯಿಂದ ಹೊರಗೆ ಬಾ….ಚಿಯರ್ ಅಪ್

ಅವನ ಬೆಡ್್ನ ಮೂಲೆಯಲ್ಲಿ ಮುದ್ದೆಯಾಗಿ ಬಿದ್ದಿದ್ದ ನನ್ನ ಉಡುಪುಗಳನ್ನು ತೆಗೆದುಕೊಂಡು ಸೀದಾ ಬಚ್ಚಲು ಮನೆಗೆ ಹೋದೆ. 

ನನಗೇನಾಗಿದೆ? ಛೇ..ಹೇಗೆ ನಾ ಮಾಡ್ಬಾರ್ದಿತ್ತು.

“ಥೂ…ನೀನು ಕೆಟ್ಟವಳು..ನಿಂಗೆ ಸ್ಪಲ್ಪವಾದ್ರೂ ಮಾನ ಮರ್ಯಾದೆ ಇದೆಯಾ…ಕುಲಗೆಡೆಸಿದ ಹೆಣ್ಣು” ಎಂದು ಅಮ್ಮ ಬೈದಂತೆ ನಂಗೆ ಕೇಳಿಸ್ತಿತ್ತು. ಕನ್ನಡಿಯಲ್ಲಿ ನನ್ನನ್ನು ನೋಡಿದಾಗ ನಂಗೇ ಅಸಹ್ಯವಾದಂತಾಯ್ತು. ಹೇಗೋ ಸ್ನಾನ ಮುಗಿಸಿ ಹೊರಬಂದಾಗ ಜಾನ್ ಕೂಡಾ ಶರ್ಟು ತೊಟ್ಟು ರೆಡಿಯಾಗಿ ನಿಂತಿದ್ದ.

 ನಾನು ನನ್ನ ವ್ಯಾನಿಟಿ ಬ್ಯಾಗ್್ನಿಂದ ಆ ‘ಮಾತ್ರೆ’ ತೆಗೆದು ನುಂಗಿದೆ. ಸುಸ್ತಾಗ್ತಿದೆ ಜಾನ್. 10 ನಿಮಿಷದ ನಂತರ ಹೊರಡೋಣವೇ ಎಂದು ಕೇಳಿದೆ.

ಸರಿ ಎಂದ ಅವ.
————————————–

ಜಾನ್…ಜಾನ್ ಮಾಥ್ಯೂಸ್ ನನ್ನ ಗೆಳೆಯ. ಕಳೆದ ವರ್ಷದ ಹಿಂದೆಯಷ್ಟೇ ನಾನು ಊರಿನಿಂದ ಬರಬೇಕಾದರೆ ಟ್ರೈನಲ್ಲಿ ಸಿಕ್ಕಿದ್ದ. ಅಪರಿಚಿತನಲ್ಲಿ ಮಾತನಾಡುವುದು ಸರಿಯಲ್ಲ ಎಂದು ನಾನು ಒಂದು ಪುಸ್ತಕ ಹಿಡಿದುಕೊಂಡು ವಿಂಡೋ ಸೈಡ್್ನಲ್ಲಿ ಕುಳಿತಿದ್ದೆ. ತುಂಬಾ ಹೊತ್ತಾದ ಮೇಲೆ ಅವ ನನ್ನನ್ನು ಮಾತಿಗೆಳೆದ. ಬೆಂಗ್ಳೂರು ಹೋಗ್ತಾ ಇದ್ದೀರಾ? ಅಂತಾ ಕೇಳಿದ. ಹೂಂ ಅಂದೆ.

ನಾನು ಅಲ್ಲಿಗೇ ಹೋಗ್ತಾ ಇದ್ದೇನೆ. ನಾನದಕ್ಕೆ ನಿನ್ನಲ್ಲಿ ಏನೂ ಕೇಳಿಲ್ವಲ್ಲ ಎಂದು ಮನಸ್ಸಿನಲ್ಲೇ ಅಂದುಕೊಂಡೆ.

ಇದ್ಯಾವ ಪುಸ್ತಕ? ವಾವ್! ‘ಮೆನ್ ಆರ್ ಫ್ರಂ ಮಾರ್ಸ್, ವುಮೆನ್  ಆರ್ ಫ್ರಂ ವೀನಸ್.’ ಗುಡ್…

ನೀವು ತುಂಬಾ ಪುಸ್ತಕ ಓದ್ತಿರೀ ಅಂತಾ ಕಾಣುತ್ತೆ.

ಹಾಗೇನಿಲ್ಲ..

ನಾನು ಪುಸ್ತಕ ಓದುವುದು ಕಡಿಮೆ. ಮೂವಿ ಜಾಸ್ತಿ ನೋಡ್ತೇನೆ.

ಅವನ ಜೊತ ಮಾತನಾಡಲು ನಂಗೆ ಇಷ್ಟವಿರಲಿಲ್ಲ. ಮನೆಯಿಂದ ಹೊರಡುವಾಗಲೇ ಅಪ್ಪ ಸಾಕಷ್ಟು ಉಪದೇಶ ಕೊಟ್ಟಿದ್ದಾರೆ. ಬೆಂಗಳೂರು ಎಂಬುದು ಮಾಯಾನಗರಿ ಅಲ್ಲಿನ ಜನರನ್ನು ನಂಬಬೇಡ. ಯಾರು ಯಾವ ತರಹ ಇರ್ತಾರೆ ಎಂದು ಊಹಿಸಲು ಅಸಾಧ್ಯ. ಮೊದಲಬಾರಿಗೆ ನಾನು ಬೆಂಗಳೂರಿಗೆ ಬರಲು ಟ್ರೈನ್ ಹತ್ತಿದಾಗಲೂ ಅಪ್ಪ ಇದೇ ಮಾತನ್ನು ಹೇಳಿದ್ದರು.

 ಅಪ್ಪ ಹೇಳಿದ್ದು ನಿಜ. ಯಾವ ಹುತ್ತದಲ್ಲಿ ಯಾವ ಹಾವಿದೆ ಎಂದು ಹೇಳುವುದಾದರೂ ಹೇಗೆ? ನಂಗೆ ಈವಾಗಲೇ ಈ ಎಲ್ಲಾ ವಿಷ್ಯ ಅನುಭವಕ್ಕೆ ಬಂದಿದೆ. ಬೆಂಗಳೂರಿಗೆ ಬಂದು ಮೂರು ವರ್ಷಗಳು ಸಂದವು. ಸಾಕಷ್ಟು ಜನರನ್ನು ನೋಡಿದ್ದೇನೆ. ಆದ್ರೆ ಅವನು ಈ ತರಹ ಮೋಸ ಮಾಡ್ತಾನೆ ಎಂದು ನಂಗೊತ್ತಿರಲಿಲ್ಲ. ಕಾಲೇಜು ದಿನಗಳಲ್ಲಿ ನನ್ನನ್ನು ಬಿಟ್ಟಿರಲಾರದೆ ಇದ್ದವನು ಇಲ್ಲಿಗೆ ಬಂದಾಕ್ಷಣ ಅದೆಷ್ಟು ಬೇಗ ಬದಲಾಗಿ ಹೋದ? ಹಾಗಾದ್ರೆ ಅವನಿಗೆ ನನ್ನ ಮೇಲೆ ಇದ್ದದ್ದು ನಿಜವಾದ ಪ್ರೀತಿ ಅಲ್ವಾ? ಅದೋ ನಾನು ಅವನ ಪ್ರೀತಿ, ಬೇಕು ಬೇಡಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾದೆನೇ? ಅವನಿಗೆ ನಾನು ಮಾತ್ರ ಬೇಕಾಗಿದ್ದೆ, ನನ್ನ ಪ್ರೀತಿ ಬೇಡವಾಗಿತ್ತಾ? ಕೈ ಕೈ ಹಿಡಿದು ಸುತ್ತಾಡಿದ್ದೇ ಇಲ್ಲಿ ಬಂದ ಮೇಲೆ. ಆದ್ರೆ ಅವನಿಗೆ ನನ್ನ ದೇಹ ಮಾತ್ರ ಬೇಕಾಗಿತ್ತು ಎಂಬ ಸತ್ಯ ಗೊತ್ತಾದಾಗ ನಾನು ಜರ್ಜರಿತಳಾದೆ.

 ನೀನು ನನ್ನನ್ನು ಪ್ರೀತಿಸುತ್ತಿದ್ದಿ ತಾನೇ? ಅಂತದರಲ್ಲಿ ಸೆಕ್ಸ್ ಎಂಜಾಯ್ ಮಾಡುವುದರಲ್ಲಿ ತಪ್ಪೇನು? ಎಂದು ಅವ ನನ್ನ ಕಣ್ಣಲ್ಲಿ ಕಣ್ಣಿಟ್ಟು ಕೇಳಿದಾಗ, ನಾನು ಪ್ರೀತಿಸಿ, ವಿಶ್ವಾಸವಿರಿಸಿದ್ದ ಹುಡುಗ ಇವನೇನಾ?ಅಂತಾ ಸಂಶಯ ನನ್ನನ್ನು ಕಾಡಿತ್ತು.

 ಐ ಆ್ಯಮ್ ಸಾರಿ, ಕಿರಣ್…ಇಂತದೆಲ್ಲಾ ನಂಗೆ ಇಷ್ಟ ಇಲ್ಲ. ಮದ್ವೆ ಮುಂಚೆ ..

ನೀನೊಂದು ಹಳ್ಳಿ ಗುಗ್ಗು. ನಾವಿಬ್ಬರೂ ಎಂಜಾಯ್ ಮಾಡುವುದರಲ್ಲಿ ತಪ್ಪೇನಿದೆ. ಇದರಿಂದ ತೊಂದರೆ ಏನೂ ಇಲ್ಲ. ನಾನು ಪ್ರೀತಿಸುವ (?) ಹುಡುಗಿಯೊಂದಿಗೆ ಇಷ್ಟೊಂದು ಫ್ರೀಡಂ ತೆಗೆದುಕೊಳ್ಳುವುದು ತಪ್ಪೇನಿಲ್ಲ. ನಿನಗಂತೂ ಹಗ್, ಕಿಸ್ಸ್ ಮಾಡಿದ್ರೂ ತಪ್ಪು. ಪ್ರೀತಿ ಅಂದ್ರೆ ಬರೀ ಐ ಲವ್ ಯೂ ಅಂತಾ ಹೇಳಿ ಗಿಫ್ಟ್ ಕೊಡುವುದು, ದಿನಾ ರಾತ್ರಿ ಫೋನ್ ಮಾಡಿ, ಊಟ ಮಾಡಿದ್ದೀಯಾ, ನಿದ್ದೆ ಮಾಡಿದ್ದೀಯಾ, ನೆಗಡಿಯಾದರೆ  ಟ್ಯಾಬ್ಲೆಟ್ ತೆಗೆದುಕೊಂಡಿದ್ದೀಯಾ ಎಂದು ಕೇಳುವುದು ಮಾತ್ರಾನಾ? ನೋಡು ಸುಮೀ…ಗಂಡು ಹೆಣ್ಣಿನ ಪ್ರೇಮದ ನಡುವೆ ಇಂತಹಾ ದೈಹಿಕ ವಾಂಛೆ ಸಹಜ. ಅದನ್ನು ಛೀ…ಥೂ..ಅಂತಾ ಹೇಳುವುದರಲ್ಲಿ ಅರ್ಥವೇನಿದೆ? ಯಾವುದೋ ಮೂಢ ನಂಬಿಕೆಯಲ್ಲಿ ಇನ್ನೂ ಬದುಕು ಸಾಗಿಸ್ತಾ ಇದ್ದಿಯಲ್ಲಾ ಮಾರಾಯ್ತಿ.

 ನನ್ನ ಪ್ರೀತಿ ಪರಿಶುದ್ಧವಾಗಿರಬೇಕು. ನೀನು ಮಾತನಾಡುವುದು ನೋಡಿದ್ರೆ ನಿನಗೆ ನನ್ ಮೇಲೆ ಲವ್ ಅಲ್ಲ ಬರೀ ಲಸ್ಟ್ ಮಾತ್ರ ಇದೆ ಅಂತಾ ಅನಿಸುತ್ತೆ.

ಕಿರಣ್ ಮಾತಾಡಲಿಲ್ಲ.

ನನಗೂ ಸಿಟ್ಟು ಬಂದಿತ್ತು. ಪಾರ್ಕ್್ನಲ್ಲಿದ್ದ ಬೆಂಚಿನಿಂದ ಎದ್ದು ಸೀದಾ ಹಾಸ್ಟೆಲ್್ಗೆ ಹೋದೆ. ಸಿಟ್ಟು ಇಳಿದ ಮೇಲೆ ನಾನೇ ಫೋನ್ ಮಾಡಿ ಸಾರಿ ಹೇಳಿದೆ. ಇಟ್ಸ್ ಓಕೆ ಅಂದ. 

ಈ ಘಟನೆಯ ನಂತರ ನಮ್ಮ ಪ್ರೀತಿಯ ಶ್ರುತಿ ತಪ್ಪಿತು. ಅವ ನನ್ನನ್ನು ಕ್ಯಾರೇ ಅನ್ನುತ್ತಿರಲಿಲ್ಲ. ಚಿಕ್ಕ ಚಿಕ್ಕ ವಿಷ್ಯಕ್ಕೂ ಮುನಿಸು, ಆಮೇಲೆ ಫೋನ್ ಸ್ವಿಚ್ ಆಫ್ ಮಾಡ್ತಿದ್ದ. ಅವನನ್ನು ಬಿಟ್ಟಿರೋಕೆ ನಂಗೆ ಆಗ್ತಾ ಇರ್ಲಿಲ್ಲ. ಕ್ಷಮಿಸಿದೆ…ಇನ್ನು ಮುಂದೆ ನಿನ್ನಲ್ಲಿ ‘ನೋ’ ಅಂತಾ ಹೇಳಲ್ಲ ಎಂದು ನಾನೇ ಅವನ ಮುಂದೆ ಸೋಲೊಪ್ಪಿಕೊಂಡೆ. ಬೇಡ ಬಿಡು. ಇನ್ನು ನಮ್ಮ ಸಂಬಂಧ ಸರಿಹೋಗಲ್ಲ ಅಂದು ಬಿಟ್ಟ.

ಅಂದ್ರೆ?

ನಂಗೆ ನಿನ್ನ ಮೇಲಿನ ಪ್ರೀತಿ ಕಡಿಮೆಯಾಗಿದೆ ಅಂತಾ ನೀನು ಹೇಳ್ತಾ ಇರ್ತಿ ಅಲ್ವಾ. ಅದು ನಿಜಾನೇ. ನಂಗೆ ಈವಾಗ ನಿನ್ನ ಮೇಲೆ ಪ್ರೀತಿ ಇಲ್ಲ. ಐ ಆ್ಯಮ್ ಇರಿಟೇಟೆಡ್. ಇಂತಹಾ ಸಂಬಂಧವೇ ಬೇಡ.

ಅವ ಹೇಳ್ತಾನೇ ಇದ್ದ. ಮರು ಮಾತನಾಡಲು ನನಗೆ ಪದಗಳೇ ಸಿಗಲಿಲ್ಲ. ಅವನ ಮುಂದೆ ಅಳಲು ಮನಸ್ಸಾಗಲಿಲ್ಲ. ಹಾಸ್ಟೆಲ್್ಗೆ ಬಂದು ಬಿಕ್ಕಿ ಬಿಕ್ಕಿ ಅತ್ತೆ. ನನ್ನ ಲವ್ ಮುರಿದು ಬಿದ್ದ ಕರಾಳ ದಿನ ಅದು.

———————————————–
ಬಾಯ್್ಫ್ರೆಂಡ್ …ಅವ ನನ್ನಿಂದ ದೂರವಾಗಿದ್ದಾನೆ. ಅವನಿಗೇ ನಾನು ಬೇಡ ಎಂದಾದ ಮೇಲೆ, ಅವ ನನಗ್ಯಾಕೆ ಬೇಕು? ಮನಸ್ಸಿನಲ್ಲಿ ವಿಪ್ಲವದ ಕಿಡಿ. ನಾನು ಬದಲಾಗಬೇಕು, ಅವನಿಲ್ಲದೆ ನಾನು ಬದುಕುತ್ತೇನೆ. ಒಂದು ದಿನ ಅವನಿಗೆ ನನ್ನ ಪ್ರೀತಿಯ ಅರಿವಾಗಬೇಕು ಎಂದು ನಿರ್ಧರಿಸಿ ಹೊಸ ಜೀವನ ನಡೆಸಲು ಸಿದ್ಧಳಾದೆ. ಅವನ ನೆನಪುಗಳನ್ನು ಮರೆಯಬೇಕೆಂದೇ ಕೆಲಸದಲ್ಲಿ ಬ್ಯುಸಿಯಾದೆ. ಅಲ್ಲಿಯವರೆಗೆ ಮರೆತಿದ್ದ ಹಳೇ ಗೆಳೆಯರೊಂದಿಗೆ ಮತ್ತೆ ಸಂಪರ್ಕವಿರಿಸಿದೆ. ನನ್ನ ಲೈಫ್ ಹೊಸ ದಿಶೆಯಲ್ಲಿ ಸಾಗ ತೊಡಗಿತು. ಅವ ನೆನಪಾಗಲೇ ಇಲ್ಲ. ಅವ ನೆನಪಾದಗೆಲ್ಲಾ ಸಿಟ್ಟು ಬರುತ್ತಿತ್ತು. ಆದ್ರೆ ಹಳೆಯ ನೆನಪುಗಳನ್ನು ಕೆದಕಿ ಮತ್ತೆ ಖಿನ್ನಳಾಗುವುದು ನಂಗಿಷ್ಟವಿಲ್ಲ.

 —————————————-

ಸುಮೀ….

ಯೆಸ್…

ಜಾನ್ ನನ್ನನ್ನು ಹಾಸ್ಟೆಲ್್ಗೆ ಡ್ರಾಪ್ ಮಾಡ್ತಾನೆ.

ಜಾನ್..ಅವನೇ ಈ ಮೊದಲು ಹೇಳಿದ್ದೇ ಅಲ್ವಾ…

ಅವತ್ತು ಟ್ರೈನ್್ನಲ್ಲಿ ಸಿಕ್ಕಿ ಪರಿಚಯವಾದ ಕ್ರಿಷ್ಚಿಯನ್ ಹುಡುಗ. ಈವಾಗ ನನ್ನ ಗುಡ್್ಫ್ರೆಂಡ್. ನನ್ನ ಕಥೆ ಅವನಿಗೆ ಗೊತ್ತು. ಬೇಜಾರಾದಾಗೆಲ್ಲಾ ಅವ ನನ್ನೊಂದಿಗೆ ಇರುತ್ತಾನೆ. ನನ್ನನ್ನು ತುಂಬಾ ಕೇರ್ ಮಾಡ್ತಾನೆ. ಅವನೊಂದಿಗಿನ ಒಡನಾಟದಿಂದಾಗಿ ನನಗೆ ಜೀವನದ ಕಷ್ಟಗಳನ್ನು ಎದುರಿಸುವಷ್ಟು ಧೈರ್ಯ ಬಂದಿದೆ. ಜಾನ್ ಕೂಡಾ ನನ್ನನ್ನು ಇಷ್ಟ ಪಡುತ್ತಿದ್ದಾನೆ ಆದ್ರೆ ನಾನು ಅವನಿಗೆ ಗೆಳತಿ ಮಾತ್ರ. ಐ ಆ್ಯಮ್ ಜಸ್ಟ್ ಫ್ರೆಂಡ್, ನಾಟ್ ಎ ಲವರ್. ಅವ ನನ್ನ ಲವರ್ ಅಲ್ಲ ಎಂಬುದು ನನಗೂ ಗೊತ್ತು.

 ಇವತ್ತು ನಾವಿಬ್ಬರೂ ಮಾಡಿದ್ದಾದರೂ ಏನು? ಕಿರಣ್ ಬಯಸಿದಾಗ ‘ನೋ’ ಅಂದಿದ್ದ ನಾನು ಜಾನ್ ಮುಂದೆ ಯಾಕೆ ಸೋತು ಹೋದೆ? ಕಿರಣ್್ಗೆ ಹೇಳಿದಂತೆ ಜಾನ್್ಗೂ ‘ನೋ’ ಹೇಳ್ತಿದ್ರೆ ಅವ ನನ್ನೊಂದಿಗೆ ಈ ರೀತಿ ಮಾಡ್ತಾ ಇರ್ಲಿಲ್ಲ. ನಾವಿಬ್ಬರೂ ಎಂಜಾಯ್ ಮಾಡಿದ್ವಿ. ಇದರಲ್ಲಿ ತಪ್ಪೇನಿದೆ? ಎಂದು ಕೇಳುವಷ್ಟು ಧೈರ್ಯ ಅದೆಲ್ಲಿಂದ ಬಂತೋ. ಕಾಮನೆಗಳನ್ನು ಅದುಮಿ ಹಿಡಿಯಲಾರದಷ್ಟು ದುರ್ಬಲಳೇ ನಾನು? ಮನಸ್ಸಲ್ಲಿ ಗೊಂದಲ.

 ಏನೇ ಇರಲಿ, ನಾನು ಮಾಡಿದ್ದು ಸರಿಯೇ…ಇದೆಲ್ಲಾ ಕಾಮನ್ ಎಂದು ಹೇಳುವ ಜನರೆಡೆಯಲ್ಲಿ ನನ್ನ ದನಿಯೂ ಈಗ ಸೇರಿಕೊಂಡಿದೆ.

Advertisements