ಪ್ರೀತಿಯ ಅಮ್ಮ…,

ಹೇಗಿದ್ದೀಯಾ? ಎಂದು ಕೇಳಲ್ಲ…ಯಾಕೆಂದ್ರೆ ದಿನಾ ಎರಡು ಹೊತ್ತು ಫೋನಿನಲ್ಲಿ ಹರಟುವವರು ನಾವು. ಫೋನ್ ರಿಸೀವ್ ಮಾಡಿದ ಕೂಡಲೇ ನೀನು ಕೇಳುವ ಮೊದಲ ಪ್ರಶ್ನೆ ತಿಂಡಿ ತಿಂದ್ಯಾ? ಬಹುಷಃ ಎಲ್ಲ ಅಮ್ಮಂದಿರು ತಮ್ಮ ಮಕ್ಕಳಲ್ಲಿ ಇದೇ ಪ್ರಶ್ನೆಯ ಮೂಲಕ ಸಂಭಾಷಣೆಗೆ ಮುನ್ನುಡಿ ಹಾಕ್ತಾರೆ ಅಲ್ವಾ?

ನಿನಗೆ ಗೊತ್ತಿದ್ದಂಗೆ ನಾನು ನಿನ್ನಲ್ಲಿ ಮುಚ್ಚಿಟ್ಟ ವಿಷಯವೇ ಇರಲಿಕ್ಕಿಲ್ಲ. ಯಾಕೆಂದರೆ ಆಫೀಸು, ಪಿಜಿ, ಬಿಎಂಟಿಸಿ ಬಸ್ಸು, ನನ್ನ ಗೆಳೆಯರು, ಫೇಸ್್ಬುಕ್ ಕಾಮೆಂಟ್್ಗಳು, ಬ್ಲಾಗು..ಎಲ್ಲದರ ಬಗ್ಗೆಯೂ ಈಗಾಗಲೇ ಹೇಳಿಯಾಗಿದೆ. ಆಫೀಸಿನಿಂದ ಪಿಜಿಗೆ ಬಂದು  ಫೋನ್ ಕೈಗೆತ್ತಿಕೊಂಡಾಗೆಲ್ಲಾ, ನನ್ನ ರೂಮ್್ಮೇಟ್ಸ್್ಗಳು…” ಇವತ್ತಿನ ವಿಷಯ ಎಲ್ಲ ಬೇಗ ಅಪ್್ಡೇಟ್ ಮಾಡು” ಎಂದು ತಮಾಷೆಯಾಗಿ ಹೇಳಿದರೆ, ಇನ್ನು ಕೆಲವೊಮ್ಮೆ, ನಾವು ಹೇಳಿದ್ದನ್ನೆಲ್ಲಾ ಅಮ್ಮನಲ್ಲಿ ಊದ್ಬೇಡ …ಎಂಬ ಎಚ್ಚರಿಕೆ ನೀಡುವುದೂ ಉಂಟು. ಅವರು ಹೀಗೆ ಹೇಳುವುದಕ್ಕೆ ಕಾರಣವೂ ಇದೆ.

ಇದೀಗ ನಾನು ಮತ್ತು ನೀನು ಬೆಸ್ಟ್್ಫ್ರೆಂಡ್ಸ್!. ಹೌದು, ‘ಇದೀಗ’ ಅಂತ ಇಲ್ಲಿ ಹೇಳಲೇ ಬೇಕಾಗಿದೆ. ಯಾಕೆಂದ್ರೆ ಅಮ್ಮ..ನಾನು ನೀನು ತುಂಬಾ ಹತ್ತಿರವಾಗಿದ್ದು ನಾನು ಹೈಸ್ಕೂಲ್ ಮೆಟ್ಟಿಲು ಹತ್ತಿದಾಗಲೇ. ಅಲ್ಲಿಯವರೆಗೆ ಎಲ್ಲವನ್ನೂ ಪಪ್ಪನಲ್ಲೇ ಹೇಳುತ್ತಿದ್ದ ನಾನು, ದೊಡ್ಡವಳಾಗುತ್ತಿದ್ದಂತೆ ನಿನ್ನತ್ತ ವಾಲ ತೊಡಗಿದೆ. ನಿಜ ಹೇಳಲಾ ಅಮ್ಮ… ಚಿಕ್ಕಂದಿನಲ್ಲಿ ತಮ್ಮನನ್ನೇ ನೀನು ಜಾಸ್ತಿ ಮುದ್ದು ಮಾಡುತ್ತಿದ್ದರೆ, ನನಗೆ ಹೊಟ್ಟೆ ಉರಿ ಆಗ್ತಿತ್ತು. ನಿನಗೆ ನನ್ನ ಮೇಲೆ ಪ್ರೀತಿನೇ ಇಲ್ಲ ಎಂದೇ ಅಂದ್ಕೊಂಡಿದ್ದೆ. ಆದರೆ ನೀನು ನನ್ನದೇ ಕಲರು, ನೀನೇ ನನಗೆ ಹೆಚ್ಚು ಪ್ರೀತಿ ಎಂದು ಮುತ್ತಿಡುತ್ತಾ ಮುದ್ದಿಸುತ್ತಿದ್ದುದು, ಸ್ನಾನ ಮಾಡಿಸಿದ್ದು, ಎದೆಗವುಚಿ ಮಲಗಿದ್ದು ಎಲ್ಲವೂ ಪಪ್ಪನೇ. ಅದಕ್ಕೇ ನನಗೆ ಪಪ್ಪನ ಮೇಲೆ ತುಂಬಾ ಪ್ರೀತಿ. ನೀನು ಅಣ್ಣನಿಗೆ ಬೈಯ್ಯುವಾಗ, ತಮ್ಮನಿಗೆ ಎರಡು ಬಾರಿಸುವಾಗೆಲ್ಲಾ ನಿನ್ನ ಮೇಲಿನ ಭಯ ಇನ್ನೂ ಹೆಚ್ಚಾಗುತ್ತಿತ್ತು. ನಿಂಗೊತ್ತಾ, ಅಕ್ಕ ಹಾಸ್ಟೆಲ್್ನಲ್ಲಿದ್ದಾಳೆಂದು ಅವಳು ರಜೆಯಲ್ಲಿ ಮನೆಗೆ ಬಂದಾಗೆಲ್ಲಾ ಅವಳನ್ನು ತುಂಬಾ ಮುದ್ದಿಸುತ್ತಿದ್ದೆ. ಆವಾಗೆಲ್ಲಾ ನನಗೂ ಹಾಸ್ಟೆಲ್್ಗೆ ಹೋಗಬೇಕು ಎಂದು ಅನಿಸ್ತಾ ಇತ್ತು. ಹಾಸ್ಟೆಲ್ ಜೀವನ ನನಗಿಷ್ಟ ಎಂದಲ್ಲ…ನೀನು ನನ್ನನ್ನು ಮುದ್ದು ಮಾಡಬೇಕಿತ್ತು ಅಷ್ಟೇ. ಆದ್ರೆ ಪಪ್ಪನಿಂದ ದೂರ ಇರುವ ಶಕ್ತಿಯೂ ಇರಲಿಲ್ಲ. ಶಾಲೆಯಲ್ಲಿ ನನ್ನ ಗೆಳತಿಯರೆಲ್ಲರೂ ನನ್ ಅಪ್ಪನಿಗೆ ತುಂಬಾ ಕೋಪ ಜಾಸ್ತಿ, ಅಪ್ಪ ಬೈತಾರೆ ಆದ್ರೆ ಅಮ್ಮ ಏನು ಹೇಳಲ್ಲ ಎಂದು ಅವರಮ್ಮನ ಬಗ್ಗೆ ಹೇಳಿದಾಗೆಲ್ಲಾ ನನಗೆ ಬೇಜಾರಾಗುತ್ತಿತ್ತು. ಆದರೇನು ನನ್ನ ಪಪ್ಪ ನಿಮ್ಮಪ್ಪನಂತೆ ಅಲ್ಲ… ನನ್ ಪಪ್ಪನಲ್ಲಿ ಏನು ಬೇಕಾದರೂ ಹೇಳಬಹುದು, ನನ್ನಪ್ಪ ಬೈದಿಲ್ಲ…ಈವರೆಗೆ ಒಂದೇ ಒಂದು ಏಟು ಕೊಟ್ಟಿಲ್ಲ ಎಂದು ಹೇಳುತ್ತಾ ‘ನಾನು ಪಪ್ಪನ ಮಗಳಾಗಿ’ ಬಿಡುತ್ತಿದೆ.

ಇನ್ನು, ಶಾಲಾ ದಿನಗಳಲ್ಲಿ ರಜೆ ಸಿಕ್ಕಿದರೆ ಸಾಕು, ನೀನು ನನಗೆ ಆ ಕೆಲ್ಸ ಮಾಡು, ಈ ಕೆಲ್ಸ ಮಾಡು ಎಂದು ಯಾವತ್ತೂ ಆಜ್ಞಾಪಿಸಿಲ್ಲ. ಆದರೂ ನಾನೇ ಮನೆಗೆಲಸ ಮಾಡುತ್ತಿದ್ದೆ ಯಾಕೆ ಗೊತ್ತಾ? ಚೆನ್ನಾಗಿ ಕೆಲ್ಸ ಮಾಡಿದರೆ ನೀನು ನನ್ನನ್ನು ಹೊಗಳುತ್ತಿದ್ದೆ. ತುಂಬಾ ಚುರುಕಾಗಿ ಕೆಲ್ಸ ಮಾಡ್ತಾಳೆ ಮಗಳು…ಅವಳಗಿಂತ (ಅಕ್ಕನಿಗಿಂತ) ಇವಳೇ ಸ್ಮಾರ್ಟು, ನನ್ ತರಾನೇ ಎಂದು ನೀನು ಪಪ್ಪನಿಗೆ ಹೇಳುವಾಗೆಲ್ಲಾ ನಾನೆಷ್ಟು ಖುಷಿ ಪಟ್ಟಿದ್ದೆ ಗೊತ್ತಾ? ನಿನ್ನಂತೆಯೇ ಸೊಂಟದಲ್ಲಿ ಕೊಡಪಾನ ಇಟ್ಟು ಬೇಗ ಬೇಗ ನಡೆಯಬೇಕು, ಹತ್ತೇ ನಿಮಿಷದಲ್ಲಿ ಅಂಗಳ ಗುಡಿಸ್ಬೇಕು, ನೀಟಾಗಿ ನೆಲ ಉಜ್ಜಬೇಕು, ಎಲ್ಲವನ್ನೂ ಫಟಾಫಟ್ ಮಾಡಿ ಮುಗಿಸಬೇಕು….ಹೀಗೆ ಎಲ್ಲವನ್ನೂ ಬೇಗನೆ ಕಲಿತದ್ದು ನಿನ್ನ ಮೆಚ್ಚುಗೆಯ ಮಾತು ಕೇಳಲು ಮಾತ್ರ!.

ಇಷ್ಟು ಮಾತ್ರವಲ್ಲ, ಬರವಣಿಗೆಯ ವಿಷ್ಯದಲ್ಲೂ ಅಷ್ಟೇ. ನನಗಿಂತ ಹೆಚ್ಚು ಪುಸ್ತಕಗಳನ್ನೋದಿದವಳು ನೀನು. ಆದ್ದರಿಂದಲೇ ಚೆನ್ನಾಗಿ ಬರೀಬೇಕು ಅಂದ್ರೆ ಕನ್ನಡ ಪುಸ್ತಕ ಓದು, ಕನ್ನಡ ಸಾಹಿತ್ಯ ಅರಿತುಕೋ ಎಂದು ಸಲಹೆ ನೀಡುತ್ತಿದ್ದೆ. ಇತ್ತ, ನೀನು ಬರೆದ ಕವಿತೆಗಳನ್ನು ಮಾತ್ರ ಅಡಗಿಸಿಟ್ಟಿರುತ್ತಿದ್ದೆ. ನಿನ್ನ ಕವಿತೆಗಳನ್ನೋದಿದರೆ ಅದರಲ್ಲಿ ವಿಷಾದ ಭಾವ….ಮುಚ್ಚಿಟ್ಟಿದ್ದ ನೋವಿನ ಅನುಭವ…ಏನೋ ಹಂಬಲಿಕೆ ಎದ್ದು ಕಾಣುತ್ತಿತ್ತು. ಇದೇನು? ಎಂದು ಕೇಳಿದರೆ…ಹೀಗೆ ಸುಮ್ಮನೆ ಬರೆದೆ ಎಂದು ನಕ್ಕು ಅಡುಗೆ ಮನೆಗೆ ನಡೆಯುತ್ತಿದ್ದೆ.

ಅಮ್ಮಾ…ನಂಗೊತ್ತು. ನೀನು ಕೂಡಾ ಜೀವನದಲ್ಲಿ ಸಾಧನೆ ಮಾಡಬೇಕೆಂದು ತುಂಬಾ ಆಸೆ ಪಟ್ಟಿದ್ದೆ ಅಲ್ವಾ. ನೀನೇ ಹೇಳಿದ್ದೆ, ನನಗೆ ನರ್ಸ್ ಆಗ್ಬೇಕು ಎಂಬ ಕನಸು ಇತ್ತು ಅಂತಾ. ನಿನ್ನ ಕನಸು ಕೈಗೂಡಲೇ ಇಲ್ಲ. ಹೋಗಲಿ ಬಿಡು, ನಾವಿಬ್ಬರು (ಅಕ್ಕ ಮತ್ತು ನಾನು) ಡಾಕ್ಟರ್ ಆಗ್ಬೇಕು ಎಂದು ಬಯಸಿದ್ದೆ. ಅವಳು ನನಗೆ ಸಯನ್ಸೇ ಬೇಡ ಎಂದು ಕಾಮರ್ಸ್ ಆಯ್ದು ಕೊಂಡಾಗ, ನೀನೆ ಹೇಳಿದ್ದೆ, ನೀನಾದರೂ ಸಯನ್ಸ್ ಆಯ್ಕೆ ಮಾಡು ಎಂದು. ನನಗೂ ಸಯನ್ಸ್ ಇಷ್ಟ ಇತ್ತು, ಆಯ್ಕೆ ಮಾಡಿದೆ. ನಂತರ ಪ್ರವೇಶ ಪರೀಕ್ಷೆ ಬರೆದು ಫಲಿತಾಂಶವೂ ಬಂತು. ಡಾಕ್ಟರ್ ಆಗೋಕೆ ಸಾಧ್ಯವಿಲ್ಲ, ರ್ಯಾಂಕ್ ಜಾಸ್ತಿ ಇದೆ ಎಂದು ಅಕ್ಕ ರಿಸಲ್ಟ್ ಹೇಳಿದಾಗ ನಿನ್ನ ಮುಖ ಬಾಡಿತ್ತು. ಹೇಗೋ ಇಂಜಿನಿಯರಿಂಗ್ ಸೀಟು ಸಿಕ್ಕಾಗ, 4 ವರ್ಷದಲ್ಲಿ ನಾನು ಇಂಜಿನಿಯರ್ ಆಗ್ತೀನಿ ಎಂದು ನೀನು ಕನಸು ಕಂಡಿದ್ದೆ. ಆವಾಗಲೇ ನನ್ನ ಮನಸ್ಸು ಪತ್ರಿಕೋದ್ಯಮದತ್ತ ವಾಲಿತ್ತು. ನಾನು ಆಶಿಸಿದಂತೆ ಅದೇ ಕ್ಷೇತ್ರಕ್ಕೆ ನಾನು ಕಾಲಿಟ್ಟೆ. ನನ್ನ ಈ ಆಯ್ಕೆಯಿಂದ ನಿನಗೆ ಬೇಜಾರಾಗಿರಬಹುದು. ಆದರೆ ನೀನು, ನಿನಗೆ ಖುಷಿ ಯಾವುದರಲ್ಲಿದೆಯೋ, ಅದೇ ಕೆಲ್ಸ ಮಾಡು ಎಂದು ಬೆನ್ನು ತಟ್ಟಿದೆ. ನಾನು ಬಿದ್ದಾಗೆಲ್ಲಾ…ನೀನು ಸೋತು ಹಿಂದೆ ಬರ್ಬೇಡ. ಜೀವನ ಅಂದ್ರೆ ಇದೆಲ್ಲಾ ಮಾಮೂಲಿ. ದೇವ್ರು ಇದ್ದಾನೆ. ಅವ್ನು ಕೈ ಬಿಡಲ್ಲ ಎಂದು ಹೇಳ್ತಿದ್ದೆ. ನನಗೆ ಬೇಜಾರಾದಾಗೆಲ್ಲಾ ನಿನ್ನಲ್ಲಿ ಹೇಳ್ತೀನಿ, ಆದ್ರೆ ನೀನು….ನನ್ನ ಬೇಸರವನ್ನು ನಿನ್ನಲ್ಲಿ ಹೇಳಿ ನಿನ್ನನ್ನು ಬೇಜಾರು ಮಾಡೋಕೆ ಇಷ್ಟವಿಲ್ಲ ಪುಟ್ಟಾ ಎಂದು ಹೇಳ್ತೀಯಾ.

ಅಮ್ಮ, ಕಾಲ ಬದಲಾಗುತ್ತಾ ಹೋದಂತೆ ನೀನು ನಾನು ಇಬ್ಬರೂ ಬದಲಾಗಿದ್ದೀವಿ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸವಾಲುಗಳನ್ನು ಎದುರಿಸುವಷ್ಟು ಪಕ್ವತೆ ನನಗೂ ಬಂದಿದೆ. ಇದೆಲ್ಲಾ ಸಾಧ್ಯವಾದುದು ನಿನ್ನಿಂದಲೇ. ನಾನು ಸೋತು ಕಣ್ಣೀರಿಟ್ಟಾಗ, ನೀನು ಸಾಗಬೇಕಾದ ದಾರಿ ಇನ್ನೂ ಇದೆ, ಮತ್ತೆ ಮತ್ತೆ ಪ್ರಯತ್ನಿಸು ಎಂದು ಹೇಳಿ ಧೈರ್ಯ ತುಂಬಿದ್ದಿ ಅಲ್ವಾ…ನಿನ್ನಂತ ಅಮ್ಮ ನನ್ನ ಜತೆ ಇದ್ದರೆ ಇನ್ನೇನು ಬೇಕು ಹೇಳು?

ಈ ಪತ್ರ ಓದಿದ ನಂತರ ನೀನು ಇಮೋಷನಲ್ ಆಗ್ತಿ ಅಂತ ಗೊತ್ತಿತ್ತು…ಆದ್ರೆ ಪ್ಲೀಸ್…ಕಣ್ಣೀರು ಹಾಕ್ಬೇಡ…

ನಿನಗೊತ್ತಲ್ವಾ ನನಗೆ ಮಳೆ ಎಂದರೆ ಪಂಚಪ್ರಾಣ ಅಂತ. ಚಿಕ್ಕವಳಿದ್ದಾಗ ನನಗೆ ಮಳೆಯಲ್ಲಿ ಆಟವಾಡುವಾಸೆ. ಆವಾಗ ನೀನು..ಮಳೆ ನೆನೆದರೆ ಜ್ವರ ಬರುತ್ತೆ…ಮತ್ತೆ ಶಾಲೆಗೆ ರಜೆ ಹಾಕ್ಬೇಕು. ನೀನು ಕಲಿತು ಒಳ್ಳೆಯ ಕೆಲ್ಸ ಸಿಕ್ಕಿದ ನಂತರ ಮಳೆಯಲ್ಲಿ ನೆನೆದರೆ ನಾನು ಏನೂ ಹೇಳಲ್ಲ ಅಂತಿದ್ದೆ…

ಹಾಗಾದರೆ ನಾನೀಗ ಮಳೆಯಲ್ಲಿ ನೆನೆಯಬಹುದು ಅಲ್ವಾ….

ಗಾಬರಿ ಆಗ್ಬೇಡಮ್ಮಾ…ನಿನ್ನ ಮೂಡ್ ಚೇಂಜ್ ಮಾಡುವುದಕ್ಕೋಸ್ಕರ ಹೇಳಿದೆ ಅಷ್ಟೇ…

ನಾನು ಮಳೆಯಲ್ಲಿ ನೆನೆಯೋಲ್ಲಪ್ಪಾ….ಪ್ರಾಮಿಸ್….

ಅಮ್ಮಾ…ಕೊನೆಯದ್ದಾಗಿ ಒಂದು ಮಾತು..

ಈ ಮೊದಲು ನಿನ್ನನ್ನು ಅರ್ಥ ಮಾಡಿಕೊಳ್ಳದೇ ನನ್ನಮ್ಮ ತುಂಬಾ ‘ಜೋರು’ ಎಂದು ಮನಸ್ಸಲ್ಲೇ ಅಂದ್ಕೊಂಡಿದ್ದಕ್ಕೆ ಕ್ಷಮೆ ಇರಲಿ…

ಲವ್ ಯು ಅಮ್ಮಾ…

ಇತೀ,

ನಿನ್ನ ಅಮ್ಮಿ

Advertisements