ಆಷಾಢ ಮಾಸದ ಮಳೆ

ಯಂತೆ ಎಡೆಬಿಡದೆ

ಸುರಿದ ಕಷ್ಟಗಳು

ಮೈ ಮನವನ್ನು ಹರಿದು

ಚಿಂದಿಯಾಗಿ ಬಿಸಾಡಿದಾಗ

ಜನ ಕಣ್ಣು ಮುಚ್ಚಿ ನಕ್ಕಿದ್ದರು!

 

ಇರುಳಲ್ಲಿಯೂ, ಮರೆಯಲ್ಲಿಯೂ

ನನ್ನ ದೇಹ ಸುಖ ಅನುಭವಿಸ

ಬಂದವರು

ಹಗಲಲ್ಲಿ ಕಂಡಾಗ ಕಲ್ಲೆಸೆದರು

ದಿನಕೂಲಿ ಆಳುಗಳು

ಮಹಲಲ್ಲಿ ಕುಳಿತ ಮಹನೀಯರು

ನನ್ನ ದೇಹಕ್ಕೆ ಬೆಲೆ ಕಟ್ಟುತ್ತಾ

ಚೌಕಾಶಿ ಮಾಡಿದರು

 

ವ್ಯಾಪಾರವಲ್ಲವೇ?

ಮಾರುವವನಿಗೂ ಕೊಳ್ಳುವವನಿಗೂ

ಲಾಭವೇ ಬೇಕಿತ್ತು

ಬಿಗಿಯಾಗಿದ್ದ ನನ್ನ ರವಿಕೆಯ

ಕೊಂಡಿಗಳು ಅವರೆದುರು

ಕಳಚಿದರೆ

ಮಾತ್ರ ನನ್ನ ಕಂದಮ್ಮನಿಗೆ

ಕೈ ತುತ್ತು…

 

ಪಾಪವೋ ಪುಣ್ಯವೋ ನಾ ಕಾಣೆ

ಅವರ ಕಾಮದ ಹಸಿವಿಗೆ

ನಾ ಬೆಂದರೇನಂತೆ?

ಪಾಪುವಿನ ಹಸಿವು

ದೂರವಾಗಿತ್ತು.

 

ಸುಖ ಅನುಭವಿಸಿದವರ

ದೃಷ್ಟಿ ನನ್ನ ಕಂದಮ್ಮನ ಮೇಲೂ

ಬಿದ್ದಾಗ,

ನಡುಗಿದೆ

 

ನನ್ನ ಕೂಸು…

ವಯಸ್ಸು ಆರೇಳು

ಬಿಟ್ಟು ಬಿಡಿ ಎಂದು ಗೋಗರೆದೆ

ಉಹೂಂ…ರಕ್ಕಸರ ನರ್ತನ

ಕೈಗೆ ಸಿಕ್ಕಿದವಳು

ಅವಳು ಶವವಾದಳು

ನಾನು ಹುಚ್ಚಿಯಾದೆ…

 

ಅಲೆಮಾರಿಯಾದ ನನ್ನ

ಕಂಡ ಕಂಡವರೆಲ್ಲಾ ಸುಖಿಸಿದರು

ಬಿಟ್ಟಿಯಾಗಿ!

ಕತ್ತಲಿನ ಲೋಕದಲಿ

ನಾನೀಗ ಏಕಾಂಗಿ

 

ಕಣ್ತೆರೆದು ನೋಡಿದೆ

ಬೆಳಕು ಬಿದ್ದಿತ್ತು ಮುಖಕ್ಕೆ

ಕ್ಯಾಮೆರಾ, ಮೈಕ್ ಹಿಡಿದು

ನಿಂತಿದ್ದ ಆ ಜನರು

ಕರೆದೊಯ್ದರು

ನೇರ ಸ್ಟುಡಿಯೋಗೆ…

 

 

ಅವರ ವಾಹಿನಿಯಲ್ಲಿ

ಕ(ವ್ಯ)ಥೆ ಪ್ರಸಾರವಾಯ್ತು

ಸಾಂತ್ವನದ ಕರೆಗಳು

ಸಹಾಯದ ಹಸ್ತಗಳು

ಬಾಚಿ ತಬ್ಬಿದಾಗ

ಕಣ್ಮುಚ್ಚಿ ಕುಳಿತೆ

 

ಮೇಡಂ, ನಿಮಗೇನು ಅನಿಸುತ್ತಿದೆ?

ನಿರೂಪಕಿಯ ಪ್ರಶ್ನೆಗೆ ನಾನು

ಬೆಚ್ಚಿ, ಕಣ್ತೆರೆದೆ

 

ಟೀವಿ ಟಿಆರ್‌ಪಿ ಏರುತ್ತಲಿತ್ತು

ನಾನು ಕುಗ್ಗುತ್ತಾ ಹೋದೆ…

 

 

 

 

 

 

Advertisements