ಹೋಗುವ ಮುನ್ನ ಹೇಳಬೇಕೆಂದಿದ್ದು…

ನಿಮ್ಮ ಟಿಪ್ಪಣಿ ಬರೆಯಿರಿ

love

ಇನ್ನೇನೂ ಹೇಳಲು ಉಳಿದಿಲ್ಲ. ಮರಣದ ಕೋಣೆಯ ಬಾಗಿಲು ತಟ್ಟದೆಯೇ ಒಳಗೆ ನುಗ್ಗಬೇಕೆಂದಿರುವೆ.

ಈ ಮೌನದ ದಾರಿಗಳಲ್ಲಿ ಮಾತುಗಳು ಉಸಿರು ಬಿಡಲಾಗದೆ ಬಿಕ್ಕಳಿಸುತ್ತಿವೆ. ಸರಿ ತಪ್ಪುಗಳನ್ನು ಯೋಚಿಸುವ ಹೊತ್ತು ಇದಲ್ಲ. ಇದು ನನ್ನ ಮತ್ತು ಅವಳ ಕೊನೇ ಭೇಟಿ.

ಅವಳ ಮುಂದೆ ಬಂದವನೇ ಅವಳನ್ನು ಬಾಚಿ ತಬ್ಬಿಕೊಂಡ. ಇದು ಕೊನೆಯ ಅಪ್ಪುಗೆ ಈ ಮಹಾ ಮೌನದ ನಡುವೆ ಅವಳ ಬಿಸಿಯುಸಿರ ಸ್ಪರ್ಶ. ಆ ಸ್ಪರ್ಶದಲ್ಲಿ ತಾನು ಮಗುವಂತಾಗುತ್ತಿದ್ದೇನೆ. ನಿಷ್ಕಂಳಕವಾದ ಈ ಪ್ರೀತಿ ಇನ್ನಷ್ಟು ಸುಂದರವಾಗಿ ಕಾಣುತ್ತಿದೆ. ನನ್ನ ನಿರ್ಧಾರ ಸರಿಯಾಗಿದೆ. ಈಗ ಸುಂದರವಾಗಿ ಕಾಣುವುದೆಲ್ಲ ಇನ್ನೊಂದು ಗಳಿಗೆಯಲ್ಲಿ…

ಸತ್ತ ಮೇಲೆ ಆಕಾಶದಲ್ಲಿ ನಕ್ಷತ್ರಗಳಾಗುತ್ತೇವೆಯಂತೆ ದೊಡ್ಡ ಸುಳ್ಳು..!!

ಚಿಕ್ಕಂದಿನಿಂದ ನಾವು ನಂಬಿಕೊಂಡು ಬಂದ ಸುಳ್ಳುಗಳಲ್ಲಿ ಇದೂ ಒಂದು…

ನಾನು ಹೋಗುತ್ತೇನೆ…

ನಿನ್ನ ಕವನಗಳು?

ಈ ಒಂದೇ ಒಂದು ವಾಕ್ಯ ನನ್ನ ಚಿತ್ತ ಚಂಚಲವಾಗುವಂತೆ ಮಾಡಿತು.

ಅವಳು ಬರ ಸೆಳೆದು ಕೊಂಡಳು.. ಇವತ್ತು ನನಗಾಗಿ ಕವನ ಬರೆದಿಲ್ಲವೇನೋ…

ಮುಂದಿನ ಪ್ರತೀ ನಿಮಿಷವೂ ನಾನು ಮಗುವಿನಂತೆ ಮುಗ್ಧತೆಯ ಮೂರ್ತಿಯಾಗಿ ನಲಿದಾಡಿದೆ..

ನಿಷ್ಕಳಂಕ ಪ್ರೀತಿ ತುಂಬಿ ತುಳುಕುವ ಅವಳ ಕಣ್ಣುಗಳು..

ಆ ಕಣ್ಣುಗಳು ನನ್ನನ್ನು ಹಿಂಬಾಲಿಸುತ್ತವೆ, ಆಸೆಯಿಂದ ನೋಡುತ್ತವೆ…

ಬಣ್ಣದ ಕಾಗದಗಳಿಂದ ಸುತ್ತಿದ್ದ ಪೊಟ್ಟಣವನ್ನು ನನ್ನ ಕೈಯಿಂದ ಕಿತ್ತುಕೊಂಡಿದ್ದಾಳೆ.

ಅವಳ ಆ ನೋಟ ನನ್ನನ್ನು ಕೊಲ್ಲುತ್ತಿದೆ ಅಲ್ಲ…ಮರುಜೀವ ಕೊಡುತ್ತಿದೆ.

ಕವನಗಳ ಸಾಲು ಎಲ್ಲಿ?

ಹಾಂ…ಅದು ಹುಟ್ಟುತ್ತಿದೆ…

ಈಗೇನು ಮಾಡುತ್ತಿ? ಇಲ್ಲ, ನಿನಗಾಗಿ ಹುಟ್ಟುತ್ತಿರುವ ಸಾಲುಗಳನ್ನು ನಾನು ಅನಾಥ ಮಾಡಲ್ಲ …

ಹೀಗಿರುವಾಗಲೂ ನೀ?

ಇಲ್ಲ, ನನ್ನೆದೆಯ ಸಾಲುಗಳು ನಿನ್ನನ್ನೇ ಬಂದು ಸೇರುವುವು. ಹಾಗಾದರೆ ಆ ಸಾಲುಗಳನ್ನೆಲ್ಲಾ ಪೋಣಿಸಿ ಕವನ ಬರೆದು ಕೊಡು

ಕವನ?

ಹಾಂ…ಕವನ!!

ಅವಳು ತನ್ಮಯಳಾಗಿ ಕುಳಿತಳು ನಾನು ಅವಳ ಕಿವಿಯಲ್ಲಿ ಮೆಲ್ಲನೆ ಉಸುರಿದೆ

ನೀನು..

ನಾನು?

ಹೌದು

ನೀನೆ ನನ್ನ ಕವನ.

Advertisements

ಮದ್ವೆ ಯಾವಾಗ? ಷರತ್ತುಗಳು ಅನ್ವಯಿಸುತ್ತವೆ!

ನಿಮ್ಮ ಟಿಪ್ಪಣಿ ಬರೆಯಿರಿ

marriage

ನೆಯಲ್ಲಿ ವಯಸ್ಸಿಗೆ ಬಂದ ಹೆಣ್ಮಕ್ಕಳು ಇದ್ದಾರೆ ಎಂದರೆ ಅಪ್ಪ ಅಮ್ಮನ ಚಿಂತೆ ಜಾಸ್ತಿಯಾಗುತ್ತಾ ಹೋಗುತ್ತೆ. ಮಗಳಿಗೆ ಗಂಡು ಹುಡುಕಬೇಕಾದ ಜವಾಬ್ದಾರಿ ಒಂದೆಡೆಯಾದರೆ, ಮಗಳ ಮದ್ವೆ ಯಾವಾಗ? ಎಂದು ವಿಚಾರಿಸುವ ನೆರೆಕೆರೆ ಸಂಬಂಧಿಕರ ಪಿರಿಪಿರಿ ಬೇರೆ. ನನಗೆ ಈಗ ಮದ್ವೆ ಬೇಡಪ್ಪಾ…ನಾನು ಇನ್ನೂ ಓದ್ಬೇಕು. ನನ್ನ ಕಾಲಿನ ಮೇಲೆ ನಾನೇ ನಿಂತುಕೊಳ್ಳಬೇಕು ಎಂಬ ಹಠ ಮಗಳದ್ದು. ಅಪ್ಪ ಅಮ್ಮ ಮಗಳ ನಿರ್ಧಾರಕ್ಕೆ ಹೂಂ ಅಂದು ಬಿಡುತ್ತಾರೆ. ಆದ್ರೆ ಈ ಸಂಬಂಧಿಕರು ಬಿಡಬೇಕಲ್ವಾ? ಇನ್ನೆಷ್ಟು ಓದಿಸ್ತೀರಾ? ಈಗ ಕೆಲಸವೂ ಸಿಕ್ಕಿ ಆಯ್ತು. ಒಳ್ಳೆ ಮನೆತನ ನೋಡಿ ಮದ್ವೆ ಮಾಡಿಬಿಡಿ ಎಂಬ ಉಪದೇಶವನ್ನು ಕೊಡುತ್ತಾ ಇರುತ್ತಾರೆ. ಅದರಲ್ಲಿ ಕೆಲವರು, ಮಗಳು ಮದ್ವೆ ಈಗ ಬೇಡ ಅಂತಿದ್ದಾಳಲ್ಲಾ? ಅವಳಿಗೆ ಲವ್ವು ಗಿವ್ವು ಏನಾದ್ರೂ ಆಗಿದೆಯಾ ಅಂತ ವಿಚಾರಿಸಿ. ಈಗಿನ ಮಕ್ಕಳಲ್ವಾ…ಅವರು ಜಾತಿ ಗೀತಿ ಏನೂ ನೋಡಲ್ಲ. ಅವರಿಗೆ ಹುಡುಗ ಇಷ್ಟ ಆದ ಅಂದ್ರೆ ಮುಗೀತು. ಕೈಯಲ್ಲಿ ಕೆಲಸ ಇದೆ, ಒಳ್ಳೆ ಸಂಬಳವೂ ಇದೆ ಹೀಗಿರುವಾಗ ಜೀವನ ಮಾಡಲು ಕಷ್ಟ ಏನೂ ಇಲ್ಲ ಎಂದು ತಮಗಿಷ್ಟವಾದ ಹುಡುಗನ ಜತೆ ಮದ್ವೆ ಮಾಡಿಕೊಳ್ಳಾರೆ ಎಂದು ಇದೇ ರೀತಿ ಮದ್ವೆ ಆದ ಹೆಣ್ಮಕ್ಕಳ ಕತೆಗಳನ್ನು ಉದಾಹರಣೆ ಸಮೇತಕೊಟ್ಟು ಅಪ್ಪ ಅಮ್ಮನ ಮನಸ್ಸಲ್ಲಿ ಆತಂಕ ಸೃಷ್ಟಿಸುತ್ತಾರೆ. ಮದ್ವೆ ವಯಸ್ಸಿಗೆ ಬಂದ ಮಗಳು ದೂರದ ಊರಲ್ಲಿ ದುಡಿಯುತ್ತಿದ್ದರೆ ಮತ್ತೆ ಹೇಳ್ಬೇಕಾ? ಇಂಥದ್ದೇ ಕತೆಗಳಿಗೆ ಇನ್ನಷ್ಟು ಉಪ್ಪು ಖಾರ ಬೆರೆಸಿ ಹೇಳಿ ಕೊಡುವ ಸಂಬಂಧಿಕರು ಪ್ರತೀ ಕುಟುಂಬದಲ್ಲೂ ಇದ್ದೇ ಇರ್ತಾರೆ. ಹೇಗೋ ಮಗಳ ಮದ್ವೆ ಮಾಡಿಸಿದರಾಯ್ತು ಎಂದು ಮನೆಯವರು ವರಾನ್ವೇಷಣೆಗೆ ತೊಡಗುತ್ತಾರೆ.

ವರಾನ್ವೇಷಣೆ ಎಂಬುದು ಹೆಣ್ಣು ಹೆತ್ತವರ ಪಾಲಿಗೆ ದೊಡ್ಡ ಸವಾಲು. ಮ್ಯಾರೇಜ್ ಬ್ರೋಕರ್‌ಗಳು, ಸುದ್ದಿ ಪತ್ರಿಕೆಯಲ್ಲಿ ಮ್ಯಾಟ್ರಿಮನಿ ಪೇಜ್, ಮ್ಯಾರೇಜ್ ಬ್ಯೂರೋ, ಮ್ಯಾಟ್ರಿಮೋನಿ ಸೈಟ್ ಎಲ್ಲೆಂದರಲ್ಲಿ ಸೂಕ್ತವರನಿಗಾಗಿ ಹುಡುಕಾಟ ಆರಂಭವಾಗುತ್ತದೆ. ಈ ಹುಡುಕಾಟವೂ ಇಂಟರೆಸ್ಟಿಂಗ್ ಆಗಿರುತ್ತದೆ. ಹುಡುಕಾಟದ ಫಸ್ಟ್ ಸ್ಟೆಪ್ ಅಂದ್ರೆ ಫೋಟೋ.ಅಪ್ಪ ಅಮ್ಮ ಮೊದಲು ಹುಡುಗಿಯ ಪೋಸ್ಟ್ ಕಾರ್ಡ್ ಸೈಜ್ ಫೋಟೋ ರೆಡಿ ಮಾಡಿಟ್ಟುಕೊಳ್ಳುತ್ತಾರೆ. ಸ್ಟುಡಿಯೋಗೆ ಹೋಗಿ ಪೋಸ್ಟ್ ಕಾರ್ಡ್ ಸೈಜ್ ಫೋಟೋ ತೆಗಿಬೇಕು ಅಂದ ಕೂಡಲೇ ಫೋಟೋಗ್ರಾಫರ್‌ಗೆ ಇದು ವರಾನ್ವೇಷಣೆಗೆ ಇರುವ ಫೋಟೋ ಎಂದು ಗೊತ್ತಾಗಿ ಬಿಡುತ್ತದೆ. ಇಂಥಾ ಫೋಟೋಗಳಲ್ಲಿ ಹುಡುಗಿ ಸೀರೆ ಉಟ್ಟ ಫೋಟೋ ಬೇಕೇ ಬೇಕು. ಫೋಟೋ ತೆಗೆದಾದ ಮೇಲೆ ಅದರ ಪ್ರತಿ ಬ್ರೋಕರ್ ಕೈಗೆ ಸಿಕ್ಕಿ, ವಧು ಅನ್ವೇಷಣೆ ಮಾಡುವ ಹುಡುಗನ ಕುಟುಂಬಗಳ ಮುಂದೆ ಇದು ಹೇಗಿದೆ ನೋಡಿ…ಎಂಬ ಪ್ರಶ್ನೆಯೊಂದಿಗೆ ತೋರಿಸಲ್ಪಟ್ಟಿರುತ್ತದೆ. ಮ್ಯಾರೇಜ್ ಬ್ಯೂರೋಗಳಲ್ಲಿ ಅದೂ ನಮ್ಮ ಜಾತಿ ಸಮುದಾಯಕ್ಕೆ ಸೇರಿದ ಮ್ಯಾರೇಜ್ ಬ್ಯೂರೋದ ಫೈಲ್‌ನಲ್ಲಿ ಹುಡುಗಿಯ ವಿವರಗಳೊಂದಿಗೆ ಪಿನ್ ಹಾಕಲ್ಪಡುವಾಗ ರಿಜಿಸ್ಟ್ರೇಷನ್ ಹಣ ಪಾವತಿಸಿದ ರಸೀದಿ ಅಪ್ಪನ ಕೈಯಲ್ಲಿರುತ್ತದೆ. ಸುದ್ದಿ ಪತ್ರಿಕೆಗಳಲ್ಲಿ ಮ್ಯಾಟ್ರಿಮನಿ ಪೇಜ್‌ನಲ್ಲಿ ಜಾಹೀರಾತು ಕೊಟ್ಟದ್ದಕ್ಕೆ ಒಂದಿಷ್ಟು ಹಣ ಖರ್ಚಾದರೆ, ಮ್ಯಾಟ್ರಿಮನಿ ವೆಬ್‌ಸೈಟ್‌ಗಳಲ್ಲಿ ರಿಜಿಸ್ಟರ್ ಮಾಡಿ, ಸ್ವಲ್ಪ ದುಡ್ಡುತೆತ್ತು ಬೆಸ್ಟ್ ಪ್ರೊಫೈಲ್‌ಗಳನ್ನು ಹುಡುಕುವ ಕಾಯಕ ಆರಂಭವಾಗುತ್ತದೆ. ನಮ್ಮ ದೇಶದಲ್ಲಿ 1,267,401,849ಕ್ಕಿಂತಲೂ ಹೆಚ್ಚಿರುವ ಜನಸಂಖ್ಯೆಯಲ್ಲಿ ತಮ್ಮ ಮಗಳಿಗೆ ಯೋಗ್ಯವಾದ ಅವಿವಾಹಿತ ಹುಡುಗನೊಬ್ಬ ಸಿಗುತ್ತಿಲ್ಲವಲ್ಲಾ ಎಂದು ಹೆಣ್ಣು ಹೆತ್ತವರಿಗೆ ಬೇಸರ ಆವರಿಸುವುದು ಈ ಹೊತ್ತಲ್ಲೇ. ಅದರಲ್ಲೂ ನಮ್ಮ ದೇಶದಲ್ಲಿ ಮದ್ವೆಯಾಗುವುದು, ಮದ್ವೆ ಮಾಡಿಸುವುದು ಎಂದರೆ ಅಷ್ಟು ಸುಲಭದ ವಿಷಯವಲ್ಲ ಎಂಬುದು ಗೊತ್ತಿರುವ ವಿಷಯವೇ.

ಇತ್ತೀಚೆಗೆ ವಾಟ್ಸಾಪ್ ನಲ್ಲಿ ಬಂದ ಸಂದೇಶವೊಂದರಲ್ಲಿ If u want to know how divided we r, just look at matrimonial page of our newspaper – ಎಂಬ ಒನ್‌ಲೈನರ್ ನನ್ನ ಗಮನ ಸೆಳೆಯಿತು ಎಷ್ಟು ನಿಜ ಅಲ್ವಾ ಇದು. ನಾವೆಲ್ಲರೂ ಒಂದೇ ಎಂದು ಕೂಗಿ ಕೂಗಿ ಹೇಳುತ್ತೇವೆ. ಆದ್ರೆ ಮದ್ವೆ ವಿಷಯಕ್ಕೆ ಬಂದಾಗ ಮಾತ್ರ ಅಲ್ಲಿ ಜಾತಿ ಎದ್ದು ನಿಲ್ಲುತ್ತದೆ. ಪ್ರೀತಿಸುವಾಗ ಜಾತಿ ನೋಡದವರು ಮದ್ವೆ ವಿಷಯ ಬಂದ ಕೂಡಲೇ ಧರ್ಮ, ಜಾತಿ, ಉಪಜಾತಿಗಳ ಬಗ್ಗೆ ತಕರಾರು ಎತ್ತಲು ಶುರುಮಾಡುತ್ತಾರೆ. ಮ್ಯಾಟ್ರಿಮನಿ ಪೇಜ್‌ನಲ್ಲೇ ನೋಡಿ ಜಾತಿ ಜಾತಿಗೂ ಅಲ್ಲೊಂದು ಬಾಕ್ಸ್ ಇರುತ್ತದೆ. ಅದರೆಡೆಯಲ್ಲಿ ಕಾಸ್ಟ್ ನೋ ಬಾರ್ ಎಂದು ಬರೆದಿರುವ ಪ್ರೊಫೈಲ್ ಗಳೂ ಇರುತ್ತವೆ. ಇಂಥಾ ಪ್ರೊಫೈಲ್ ಕಣ್ಣಿಗೆ ಬಿದ್ದ ಕೂಡಲೇ ಅವನ್ಯಾಕೆ/ ಅವಳ್ಯಾಕೆ ಬೇರೆ ಜಾತಿಯವರನ್ನು ಮದ್ವೆ ಆಗುತ್ತಿದ್ದಾರೆ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಏನೋ ಸಮಸ್ಯೆ ಇರಬೇಕು ಇಲ್ಲಾಂದ್ರೆ ಬೇರೆ ಜಾತಿಯ ಹುಡುಗ/ ಹುಡುಗಿಯನ್ನು ಹುಡುಕುವುದೇತಕ್ಕೆ ಎಂಬ ಯೋಚನೆಯೇ ಮೊದಲು ಬರುತ್ತದೆ ಬಿಟ್ರೆ ಆತ(ಆಕೆ) ಜಾತಿಯ ಪರದೆ ಸರಿಸಿ ಹೊರಗೆ ಬರುತ್ತಿದ್ದಾರೆ ಎಂಬುದನ್ನು ನಾವು ಯೋಚಿಸುವುದೇ ಇಲ್ಲ!

ಆದಾಗ್ಯೂ, ಅರೇಂಜ್ಡ್ ಮ್ಯಾರೇಜ್‌ಗಳಲ್ಲಿನ ಜಾತಿ ವಿಷಯ ಒಂದಾದರೆ ಲವ್ ಮ್ಯಾರೇಜ್‌ಗಳಲ್ಲಿ ಸಮಸ್ಯೆ ಹುಟ್ಟುಹಾಕುವುದೇ ಈ ಜಾತಿ. ಈ ಜಾತಿಯಿಂದಾಗಿ ಎಷ್ಟೋ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮದ್ವೆ ಮುರಿದು ಬಿದ್ದಿದೆ, ಮದ್ವೆ ಆಗದೇ ಉಳಿದುಕೊಂಡವರೂ ಇದ್ದಾರೆ, ಮರ್ಯಾದಾ ಹತ್ಯೆಗಳ ಸಂಖ್ಯೆಯೂ ಕಮ್ಮಿ ಏನಿಲ್ಲ. ಎಲ್ಲರ ವಿರುದ್ಧ ಕಟ್ಟಿಕೊಂಡು ಜಾತಿ ಧರ್ಮಗಳನ್ನು ಮೀರಿ ಪ್ರೀತಿಗೆ ಜೈ ಎಂದವರೂ ಇದ್ದಾರೆ. ಆದರೆ ನಮ್ಮ ಸಮಾಜದಲ್ಲಿ ಜಾತಿಯನ್ನು ಮೀರಿ ಬದುಕುವುದು ಸುಲಭದ ವಿಷಯವಂತೂ ಅಲ್ಲ. ನನಗ್ಯಾವ ಜಾತಿ ಇಲ್ಲ, ನಾನು ಮನುಷ್ಯ ಜಾತಿ ಎಂದು ಹೇಳಿ ನೋಡಿ, ಎಲ್ಲರೂ ಹುಬ್ಬೇರಿಸುತ್ತಾರೆ. ಇರುವುದೆರಡೇ ಜಾತಿ. ಒಂದು ಹೆಣ್ಣು ಒಂದು ಗಂಡು ಎಂದು ಪದೇ ಪದೇ ಹೇಳಿದರೂ ಈ ಎರಡು ಜಾತಿಗಳ ಮದ್ವೆ ಅಷ್ಟು ಸುಲಭದಲ್ಲಿ ಆಗುವುದಿಲ್ಲ. ಮದ್ವೆಗಳು ಅಷ್ಟೊಂದು ಸುಲಭದಲ್ಲಿ ಆಗುತ್ತಿದ್ದರೆ ಏನಾಗುತ್ತಿತ್ತು?

ಮದ್ವೆ ಆಗಲೇಬೇಕು…ಇಂದಲ್ಲದಿದ್ದರೆ ನಾಳೆ…ಆದರೆ ಷರತ್ತುಗಳು ಅನ್ವಯಿಸುತ್ತವೆ!

ಅವಳು ಮತ್ತೊಬ್ಬಳು! ಕೃತಿ ಬಿಡುಗಡೆ -ಆಮಂತ್ರಣ

1 ಟಿಪ್ಪಣಿ

rashmi

ಪ್ರಿಯರೇ,

2 ವರ್ಷಗಳ ಹಿಂದೆ ಕನ್ನಡಪ್ರಭ ‘ಚುಕ್ಕಿ’ ಪುರವಣಿಯಲ್ಲಿ ಸಾಧಕಿಯರ ಬಗ್ಗೆ ನಾನು ಬರೆದ ಲೇಖನಗಳನ್ನು ಇದೀಗ ಪುಸ್ತಕರೂಪದಲ್ಲಿ ಹೊರತರುತ್ತಿದ್ದೇನೆ.

ಕೃತಿ ಹೆಸರು ಅವಳು ಮತ್ತೊಬ್ಬಳು!.

ನಾನು ಪತ್ರಿಕೋದ್ಯಮಕ್ಕೆ ಕಾಲಿಟ್ಟು ಇದು ನಾಲ್ಕನೇ ವರ್ಷ. ಎರಡು ವರ್ಷಗಳ ಹಿಂದೆ ನನ್ನ ಚೊಚ್ಚಲ ಕವನ ಸಂಕಲನ “ನೆನಪಿನ ಮಳೆಯಲ್ಲಿ” ಬಿಡುಗಡೆಯಾಗಿತ್ತು. ಇದೀಗ ನನ್ನ ಎರಡನೇ  ಕೃತಿ “ಅವಳು ಮತ್ತೊಬ್ಬಳು” ಲೋಕಾರ್ಪಣೆಗೆ ಸಿದ್ಧವಾಗಿದೆ.

ಡಿಸೆಂಬರ್ 9 ಭಾನುವಾರ ಬೆಳಗ್ಗೆ 10.30ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವಳು ಮತ್ತೊಬ್ಬಳು ಕೃತಿಯನ್ನು ನಟಿ ನೀತೂ ಲೋಕಾರ್ಪಣೆ ಮಾಡಲಿದ್ದಾರೆ.

ನನ್ನ ಈ ಕಾರ್ಯಕ್ರಮಕ್ಕೆ ನೀವೆಲ್ಲರೂ ಬರಬೇಕು…ನಿಮ್ಮ ಹಾರೈಕೆ ನನ್ನೊಂದಿಗಿರಲಿ…

ಭಾನುವಾರ ಕ.ಸಾ.ಪದಲ್ಲಿ ನಿಮ್ಮನ್ನು ಕಾಯುತ್ತಿರುತ್ತೇನೆ…ನೀವು ಬರಲೇಬೇಕು…

-ರಶ್ಮಿ ಕಾಸರಗೋಡು.

ಅಪ್ಪನ ಮಗಳಿಂದ ಅಮ್ಮನಿಗೊಂದು ಪತ್ರ…

5 ಟಿಪ್ಪಣಿಗಳು

ಪ್ರೀತಿಯ ಅಮ್ಮ…,

ಹೇಗಿದ್ದೀಯಾ? ಎಂದು ಕೇಳಲ್ಲ…ಯಾಕೆಂದ್ರೆ ದಿನಾ ಎರಡು ಹೊತ್ತು ಫೋನಿನಲ್ಲಿ ಹರಟುವವರು ನಾವು. ಫೋನ್ ರಿಸೀವ್ ಮಾಡಿದ ಕೂಡಲೇ ನೀನು ಕೇಳುವ ಮೊದಲ ಪ್ರಶ್ನೆ ತಿಂಡಿ ತಿಂದ್ಯಾ? ಬಹುಷಃ ಎಲ್ಲ ಅಮ್ಮಂದಿರು ತಮ್ಮ ಮಕ್ಕಳಲ್ಲಿ ಇದೇ ಪ್ರಶ್ನೆಯ ಮೂಲಕ ಸಂಭಾಷಣೆಗೆ ಮುನ್ನುಡಿ ಹಾಕ್ತಾರೆ ಅಲ್ವಾ?

ನಿನಗೆ ಗೊತ್ತಿದ್ದಂಗೆ ನಾನು ನಿನ್ನಲ್ಲಿ ಮುಚ್ಚಿಟ್ಟ ವಿಷಯವೇ ಇರಲಿಕ್ಕಿಲ್ಲ. ಯಾಕೆಂದರೆ ಆಫೀಸು, ಪಿಜಿ, ಬಿಎಂಟಿಸಿ ಬಸ್ಸು, ನನ್ನ ಗೆಳೆಯರು, ಫೇಸ್್ಬುಕ್ ಕಾಮೆಂಟ್್ಗಳು, ಬ್ಲಾಗು..ಎಲ್ಲದರ ಬಗ್ಗೆಯೂ ಈಗಾಗಲೇ ಹೇಳಿಯಾಗಿದೆ. ಆಫೀಸಿನಿಂದ ಪಿಜಿಗೆ ಬಂದು  ಫೋನ್ ಕೈಗೆತ್ತಿಕೊಂಡಾಗೆಲ್ಲಾ, ನನ್ನ ರೂಮ್್ಮೇಟ್ಸ್್ಗಳು…” ಇವತ್ತಿನ ವಿಷಯ ಎಲ್ಲ ಬೇಗ ಅಪ್್ಡೇಟ್ ಮಾಡು” ಎಂದು ತಮಾಷೆಯಾಗಿ ಹೇಳಿದರೆ, ಇನ್ನು ಕೆಲವೊಮ್ಮೆ, ನಾವು ಹೇಳಿದ್ದನ್ನೆಲ್ಲಾ ಅಮ್ಮನಲ್ಲಿ ಊದ್ಬೇಡ …ಎಂಬ ಎಚ್ಚರಿಕೆ ನೀಡುವುದೂ ಉಂಟು. ಅವರು ಹೀಗೆ ಹೇಳುವುದಕ್ಕೆ ಕಾರಣವೂ ಇದೆ.

ಇದೀಗ ನಾನು ಮತ್ತು ನೀನು ಬೆಸ್ಟ್್ಫ್ರೆಂಡ್ಸ್!. ಹೌದು, ‘ಇದೀಗ’ ಅಂತ ಇಲ್ಲಿ ಹೇಳಲೇ ಬೇಕಾಗಿದೆ. ಯಾಕೆಂದ್ರೆ ಅಮ್ಮ..ನಾನು ನೀನು ತುಂಬಾ ಹತ್ತಿರವಾಗಿದ್ದು ನಾನು ಹೈಸ್ಕೂಲ್ ಮೆಟ್ಟಿಲು ಹತ್ತಿದಾಗಲೇ. ಅಲ್ಲಿಯವರೆಗೆ ಎಲ್ಲವನ್ನೂ ಪಪ್ಪನಲ್ಲೇ ಹೇಳುತ್ತಿದ್ದ ನಾನು, ದೊಡ್ಡವಳಾಗುತ್ತಿದ್ದಂತೆ ನಿನ್ನತ್ತ ವಾಲ ತೊಡಗಿದೆ. ನಿಜ ಹೇಳಲಾ ಅಮ್ಮ… ಚಿಕ್ಕಂದಿನಲ್ಲಿ ತಮ್ಮನನ್ನೇ ನೀನು ಜಾಸ್ತಿ ಮುದ್ದು ಮಾಡುತ್ತಿದ್ದರೆ, ನನಗೆ ಹೊಟ್ಟೆ ಉರಿ ಆಗ್ತಿತ್ತು. ನಿನಗೆ ನನ್ನ ಮೇಲೆ ಪ್ರೀತಿನೇ ಇಲ್ಲ ಎಂದೇ ಅಂದ್ಕೊಂಡಿದ್ದೆ. ಆದರೆ ನೀನು ನನ್ನದೇ ಕಲರು, ನೀನೇ ನನಗೆ ಹೆಚ್ಚು ಪ್ರೀತಿ ಎಂದು ಮುತ್ತಿಡುತ್ತಾ ಮುದ್ದಿಸುತ್ತಿದ್ದುದು, ಸ್ನಾನ ಮಾಡಿಸಿದ್ದು, ಎದೆಗವುಚಿ ಮಲಗಿದ್ದು ಎಲ್ಲವೂ ಪಪ್ಪನೇ. ಅದಕ್ಕೇ ನನಗೆ ಪಪ್ಪನ ಮೇಲೆ ತುಂಬಾ ಪ್ರೀತಿ. ನೀನು ಅಣ್ಣನಿಗೆ ಬೈಯ್ಯುವಾಗ, ತಮ್ಮನಿಗೆ ಎರಡು ಬಾರಿಸುವಾಗೆಲ್ಲಾ ನಿನ್ನ ಮೇಲಿನ ಭಯ ಇನ್ನೂ ಹೆಚ್ಚಾಗುತ್ತಿತ್ತು. ನಿಂಗೊತ್ತಾ, ಅಕ್ಕ ಹಾಸ್ಟೆಲ್್ನಲ್ಲಿದ್ದಾಳೆಂದು ಅವಳು ರಜೆಯಲ್ಲಿ ಮನೆಗೆ ಬಂದಾಗೆಲ್ಲಾ ಅವಳನ್ನು ತುಂಬಾ ಮುದ್ದಿಸುತ್ತಿದ್ದೆ. ಆವಾಗೆಲ್ಲಾ ನನಗೂ ಹಾಸ್ಟೆಲ್್ಗೆ ಹೋಗಬೇಕು ಎಂದು ಅನಿಸ್ತಾ ಇತ್ತು. ಹಾಸ್ಟೆಲ್ ಜೀವನ ನನಗಿಷ್ಟ ಎಂದಲ್ಲ…ನೀನು ನನ್ನನ್ನು ಮುದ್ದು ಮಾಡಬೇಕಿತ್ತು ಅಷ್ಟೇ. ಆದ್ರೆ ಪಪ್ಪನಿಂದ ದೂರ ಇರುವ ಶಕ್ತಿಯೂ ಇರಲಿಲ್ಲ. ಶಾಲೆಯಲ್ಲಿ ನನ್ನ ಗೆಳತಿಯರೆಲ್ಲರೂ ನನ್ ಅಪ್ಪನಿಗೆ ತುಂಬಾ ಕೋಪ ಜಾಸ್ತಿ, ಅಪ್ಪ ಬೈತಾರೆ ಆದ್ರೆ ಅಮ್ಮ ಏನು ಹೇಳಲ್ಲ ಎಂದು ಅವರಮ್ಮನ ಬಗ್ಗೆ ಹೇಳಿದಾಗೆಲ್ಲಾ ನನಗೆ ಬೇಜಾರಾಗುತ್ತಿತ್ತು. ಆದರೇನು ನನ್ನ ಪಪ್ಪ ನಿಮ್ಮಪ್ಪನಂತೆ ಅಲ್ಲ… ನನ್ ಪಪ್ಪನಲ್ಲಿ ಏನು ಬೇಕಾದರೂ ಹೇಳಬಹುದು, ನನ್ನಪ್ಪ ಬೈದಿಲ್ಲ…ಈವರೆಗೆ ಒಂದೇ ಒಂದು ಏಟು ಕೊಟ್ಟಿಲ್ಲ ಎಂದು ಹೇಳುತ್ತಾ ‘ನಾನು ಪಪ್ಪನ ಮಗಳಾಗಿ’ ಬಿಡುತ್ತಿದೆ.

ಇನ್ನು, ಶಾಲಾ ದಿನಗಳಲ್ಲಿ ರಜೆ ಸಿಕ್ಕಿದರೆ ಸಾಕು, ನೀನು ನನಗೆ ಆ ಕೆಲ್ಸ ಮಾಡು, ಈ ಕೆಲ್ಸ ಮಾಡು ಎಂದು ಯಾವತ್ತೂ ಆಜ್ಞಾಪಿಸಿಲ್ಲ. ಆದರೂ ನಾನೇ ಮನೆಗೆಲಸ ಮಾಡುತ್ತಿದ್ದೆ ಯಾಕೆ ಗೊತ್ತಾ? ಚೆನ್ನಾಗಿ ಕೆಲ್ಸ ಮಾಡಿದರೆ ನೀನು ನನ್ನನ್ನು ಹೊಗಳುತ್ತಿದ್ದೆ. ತುಂಬಾ ಚುರುಕಾಗಿ ಕೆಲ್ಸ ಮಾಡ್ತಾಳೆ ಮಗಳು…ಅವಳಗಿಂತ (ಅಕ್ಕನಿಗಿಂತ) ಇವಳೇ ಸ್ಮಾರ್ಟು, ನನ್ ತರಾನೇ ಎಂದು ನೀನು ಪಪ್ಪನಿಗೆ ಹೇಳುವಾಗೆಲ್ಲಾ ನಾನೆಷ್ಟು ಖುಷಿ ಪಟ್ಟಿದ್ದೆ ಗೊತ್ತಾ? ನಿನ್ನಂತೆಯೇ ಸೊಂಟದಲ್ಲಿ ಕೊಡಪಾನ ಇಟ್ಟು ಬೇಗ ಬೇಗ ನಡೆಯಬೇಕು, ಹತ್ತೇ ನಿಮಿಷದಲ್ಲಿ ಅಂಗಳ ಗುಡಿಸ್ಬೇಕು, ನೀಟಾಗಿ ನೆಲ ಉಜ್ಜಬೇಕು, ಎಲ್ಲವನ್ನೂ ಫಟಾಫಟ್ ಮಾಡಿ ಮುಗಿಸಬೇಕು….ಹೀಗೆ ಎಲ್ಲವನ್ನೂ ಬೇಗನೆ ಕಲಿತದ್ದು ನಿನ್ನ ಮೆಚ್ಚುಗೆಯ ಮಾತು ಕೇಳಲು ಮಾತ್ರ!.

ಇಷ್ಟು ಮಾತ್ರವಲ್ಲ, ಬರವಣಿಗೆಯ ವಿಷ್ಯದಲ್ಲೂ ಅಷ್ಟೇ. ನನಗಿಂತ ಹೆಚ್ಚು ಪುಸ್ತಕಗಳನ್ನೋದಿದವಳು ನೀನು. ಆದ್ದರಿಂದಲೇ ಚೆನ್ನಾಗಿ ಬರೀಬೇಕು ಅಂದ್ರೆ ಕನ್ನಡ ಪುಸ್ತಕ ಓದು, ಕನ್ನಡ ಸಾಹಿತ್ಯ ಅರಿತುಕೋ ಎಂದು ಸಲಹೆ ನೀಡುತ್ತಿದ್ದೆ. ಇತ್ತ, ನೀನು ಬರೆದ ಕವಿತೆಗಳನ್ನು ಮಾತ್ರ ಅಡಗಿಸಿಟ್ಟಿರುತ್ತಿದ್ದೆ. ನಿನ್ನ ಕವಿತೆಗಳನ್ನೋದಿದರೆ ಅದರಲ್ಲಿ ವಿಷಾದ ಭಾವ….ಮುಚ್ಚಿಟ್ಟಿದ್ದ ನೋವಿನ ಅನುಭವ…ಏನೋ ಹಂಬಲಿಕೆ ಎದ್ದು ಕಾಣುತ್ತಿತ್ತು. ಇದೇನು? ಎಂದು ಕೇಳಿದರೆ…ಹೀಗೆ ಸುಮ್ಮನೆ ಬರೆದೆ ಎಂದು ನಕ್ಕು ಅಡುಗೆ ಮನೆಗೆ ನಡೆಯುತ್ತಿದ್ದೆ.

ಅಮ್ಮಾ…ನಂಗೊತ್ತು. ನೀನು ಕೂಡಾ ಜೀವನದಲ್ಲಿ ಸಾಧನೆ ಮಾಡಬೇಕೆಂದು ತುಂಬಾ ಆಸೆ ಪಟ್ಟಿದ್ದೆ ಅಲ್ವಾ. ನೀನೇ ಹೇಳಿದ್ದೆ, ನನಗೆ ನರ್ಸ್ ಆಗ್ಬೇಕು ಎಂಬ ಕನಸು ಇತ್ತು ಅಂತಾ. ನಿನ್ನ ಕನಸು ಕೈಗೂಡಲೇ ಇಲ್ಲ. ಹೋಗಲಿ ಬಿಡು, ನಾವಿಬ್ಬರು (ಅಕ್ಕ ಮತ್ತು ನಾನು) ಡಾಕ್ಟರ್ ಆಗ್ಬೇಕು ಎಂದು ಬಯಸಿದ್ದೆ. ಅವಳು ನನಗೆ ಸಯನ್ಸೇ ಬೇಡ ಎಂದು ಕಾಮರ್ಸ್ ಆಯ್ದು ಕೊಂಡಾಗ, ನೀನೆ ಹೇಳಿದ್ದೆ, ನೀನಾದರೂ ಸಯನ್ಸ್ ಆಯ್ಕೆ ಮಾಡು ಎಂದು. ನನಗೂ ಸಯನ್ಸ್ ಇಷ್ಟ ಇತ್ತು, ಆಯ್ಕೆ ಮಾಡಿದೆ. ನಂತರ ಪ್ರವೇಶ ಪರೀಕ್ಷೆ ಬರೆದು ಫಲಿತಾಂಶವೂ ಬಂತು. ಡಾಕ್ಟರ್ ಆಗೋಕೆ ಸಾಧ್ಯವಿಲ್ಲ, ರ್ಯಾಂಕ್ ಜಾಸ್ತಿ ಇದೆ ಎಂದು ಅಕ್ಕ ರಿಸಲ್ಟ್ ಹೇಳಿದಾಗ ನಿನ್ನ ಮುಖ ಬಾಡಿತ್ತು. ಹೇಗೋ ಇಂಜಿನಿಯರಿಂಗ್ ಸೀಟು ಸಿಕ್ಕಾಗ, 4 ವರ್ಷದಲ್ಲಿ ನಾನು ಇಂಜಿನಿಯರ್ ಆಗ್ತೀನಿ ಎಂದು ನೀನು ಕನಸು ಕಂಡಿದ್ದೆ. ಆವಾಗಲೇ ನನ್ನ ಮನಸ್ಸು ಪತ್ರಿಕೋದ್ಯಮದತ್ತ ವಾಲಿತ್ತು. ನಾನು ಆಶಿಸಿದಂತೆ ಅದೇ ಕ್ಷೇತ್ರಕ್ಕೆ ನಾನು ಕಾಲಿಟ್ಟೆ. ನನ್ನ ಈ ಆಯ್ಕೆಯಿಂದ ನಿನಗೆ ಬೇಜಾರಾಗಿರಬಹುದು. ಆದರೆ ನೀನು, ನಿನಗೆ ಖುಷಿ ಯಾವುದರಲ್ಲಿದೆಯೋ, ಅದೇ ಕೆಲ್ಸ ಮಾಡು ಎಂದು ಬೆನ್ನು ತಟ್ಟಿದೆ. ನಾನು ಬಿದ್ದಾಗೆಲ್ಲಾ…ನೀನು ಸೋತು ಹಿಂದೆ ಬರ್ಬೇಡ. ಜೀವನ ಅಂದ್ರೆ ಇದೆಲ್ಲಾ ಮಾಮೂಲಿ. ದೇವ್ರು ಇದ್ದಾನೆ. ಅವ್ನು ಕೈ ಬಿಡಲ್ಲ ಎಂದು ಹೇಳ್ತಿದ್ದೆ. ನನಗೆ ಬೇಜಾರಾದಾಗೆಲ್ಲಾ ನಿನ್ನಲ್ಲಿ ಹೇಳ್ತೀನಿ, ಆದ್ರೆ ನೀನು….ನನ್ನ ಬೇಸರವನ್ನು ನಿನ್ನಲ್ಲಿ ಹೇಳಿ ನಿನ್ನನ್ನು ಬೇಜಾರು ಮಾಡೋಕೆ ಇಷ್ಟವಿಲ್ಲ ಪುಟ್ಟಾ ಎಂದು ಹೇಳ್ತೀಯಾ.

ಅಮ್ಮ, ಕಾಲ ಬದಲಾಗುತ್ತಾ ಹೋದಂತೆ ನೀನು ನಾನು ಇಬ್ಬರೂ ಬದಲಾಗಿದ್ದೀವಿ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸವಾಲುಗಳನ್ನು ಎದುರಿಸುವಷ್ಟು ಪಕ್ವತೆ ನನಗೂ ಬಂದಿದೆ. ಇದೆಲ್ಲಾ ಸಾಧ್ಯವಾದುದು ನಿನ್ನಿಂದಲೇ. ನಾನು ಸೋತು ಕಣ್ಣೀರಿಟ್ಟಾಗ, ನೀನು ಸಾಗಬೇಕಾದ ದಾರಿ ಇನ್ನೂ ಇದೆ, ಮತ್ತೆ ಮತ್ತೆ ಪ್ರಯತ್ನಿಸು ಎಂದು ಹೇಳಿ ಧೈರ್ಯ ತುಂಬಿದ್ದಿ ಅಲ್ವಾ…ನಿನ್ನಂತ ಅಮ್ಮ ನನ್ನ ಜತೆ ಇದ್ದರೆ ಇನ್ನೇನು ಬೇಕು ಹೇಳು?

ಈ ಪತ್ರ ಓದಿದ ನಂತರ ನೀನು ಇಮೋಷನಲ್ ಆಗ್ತಿ ಅಂತ ಗೊತ್ತಿತ್ತು…ಆದ್ರೆ ಪ್ಲೀಸ್…ಕಣ್ಣೀರು ಹಾಕ್ಬೇಡ…

ನಿನಗೊತ್ತಲ್ವಾ ನನಗೆ ಮಳೆ ಎಂದರೆ ಪಂಚಪ್ರಾಣ ಅಂತ. ಚಿಕ್ಕವಳಿದ್ದಾಗ ನನಗೆ ಮಳೆಯಲ್ಲಿ ಆಟವಾಡುವಾಸೆ. ಆವಾಗ ನೀನು..ಮಳೆ ನೆನೆದರೆ ಜ್ವರ ಬರುತ್ತೆ…ಮತ್ತೆ ಶಾಲೆಗೆ ರಜೆ ಹಾಕ್ಬೇಕು. ನೀನು ಕಲಿತು ಒಳ್ಳೆಯ ಕೆಲ್ಸ ಸಿಕ್ಕಿದ ನಂತರ ಮಳೆಯಲ್ಲಿ ನೆನೆದರೆ ನಾನು ಏನೂ ಹೇಳಲ್ಲ ಅಂತಿದ್ದೆ…

ಹಾಗಾದರೆ ನಾನೀಗ ಮಳೆಯಲ್ಲಿ ನೆನೆಯಬಹುದು ಅಲ್ವಾ….

ಗಾಬರಿ ಆಗ್ಬೇಡಮ್ಮಾ…ನಿನ್ನ ಮೂಡ್ ಚೇಂಜ್ ಮಾಡುವುದಕ್ಕೋಸ್ಕರ ಹೇಳಿದೆ ಅಷ್ಟೇ…

ನಾನು ಮಳೆಯಲ್ಲಿ ನೆನೆಯೋಲ್ಲಪ್ಪಾ….ಪ್ರಾಮಿಸ್….

ಅಮ್ಮಾ…ಕೊನೆಯದ್ದಾಗಿ ಒಂದು ಮಾತು..

ಈ ಮೊದಲು ನಿನ್ನನ್ನು ಅರ್ಥ ಮಾಡಿಕೊಳ್ಳದೇ ನನ್ನಮ್ಮ ತುಂಬಾ ‘ಜೋರು’ ಎಂದು ಮನಸ್ಸಲ್ಲೇ ಅಂದ್ಕೊಂಡಿದ್ದಕ್ಕೆ ಕ್ಷಮೆ ಇರಲಿ…

ಲವ್ ಯು ಅಮ್ಮಾ…

ಇತೀ,

ನಿನ್ನ ಅಮ್ಮಿ

ನಾವ್ಯಾಕೆ ಹೀಗೆ?

ನಿಮ್ಮ ಟಿಪ್ಪಣಿ ಬರೆಯಿರಿ

ವಂದೇ ಮಾತರಂ ಗೀತೆ ರಚಿಸಿದವರು ಯಾರು?
ಐ ಥಿಂಕ್ ಆಶಾ ಬೋಸ್ಲೆ
ಐ ಥಿಂಕ್ ಸುಭಾಷ್ ಚಂದ್ರ ಬೋಸ್
ಐ ಥಿಂಕ್  ಎ. ಆರ್. ರೆಹಮಾನ್
ರಾಂಗ್ ಆನ್ಸರ್...ರಾಂಗ್ ಆನ್ಸರ್...
Quikly text me----space ur answer and ur name to....ಬೇಗ ಬೇಗನೆ ನಿಮ್ಮ ಆನ್ಸರ್ಸ್ ಕಳಿಸಿ 
u can win couple passes for Latest Movie...
ಅಂತಾ ಆರ್ ಜೆ (ರೇಡಿಯೋ ಜಾಕಿ) ಪಟ ಪಟನೆ ಸ್ವಲ್ಪ ಕನ್ನಡ ಇನ್ನು ಸ್ವಲ್ಪ ಇಂಗ್ಲೀಷ್ (ಕಂಗ್ಲೀಷ್)ನಲ್ಲಿ ಹೇಳೋಕೆ ಶುರು ಮಾಡಿ 
ಅಧ೯ ಗಂಟೆಯಾಗಿತ್ತು. ಅಲ್ಲಿಯವರೆಗೆ ಯಾರೊಬ್ಬರು ಮೇಲಿನಪ್ರಶ್ನೆಗೆ ಸರಿಯಾಗಿ ಉತ್ತರ ನೀಡಲಿಲ್ಲ.
ಎಫ್ ಎಂಗಳಲ್ಲಿ ಯಾವತ್ತೂ ಇಂಥಾ ಸ್ಪಧೆ೯ ನಡೆಯುತ್ತಲೇ ಇರುತ್ತೆ. ಮೊನ್ನೆ ಮೊನ್ನೆಯಷ್ಟೇ ಎಫ್ ಎಂನಲ್ಲಿ ವಂದೇ ಮಾತರಂ 
ಗೀತೆ ರಚಿಸಿದವರು ಯಾರು? ಎಂಬ ಪ್ರಶ್ನೆಗೆ ಕೇಳುಗರು ಹೇಳಿದ ಉತ್ತರ ಕೇಳಿ ನಾನು ದಂಗಾಗಿ ಬಿಟ್ಟೆ.
ಅರೇ...ನಾವು ಭಾರತೀಯರು ಇಷ್ಟು ದಡ್ಡರಾ? ಅಂತಾ ಅನುಮಾನ ಶುರುವಾಯ್ತು. 
ಶಾಲಾ ದಿನಗಳಲ್ಲಿ ರಾಷ್ಟ್ರಗೀತೆ ರಚಿಸಿದವರು ಯಾರು? ಭಾರತದ ಗಡಿ ಪ್ರದೇಶಗಳಾವುವು? ರಾಜ್ಯಗಳೆಷ್ಟು? ಎಂದು ಕಲಿತಿದ್ದ ನಾವು 
ಇದೀಗ ಭಾರತದ ಬಗ್ಗೆ ಸಿಂಪಲ್ ಪ್ರಶ್ನೆಗಳನ್ನು ಕೇಳಿದರೆ I think ....ಅಂತಾ ಏನೇನೋ ತಪ್ಪು ತಪ್ಪು ಹೆಸರು ಹೇಳ್ತಾ ಇದ್ದೀವಲ್ಲಾ! 

ಗಮನಿಸಲೇ ಬೇಕಾದ ವಿಷಯ ಏನಪ್ಪಾ ಅಂದ್ರೆ, ಈ ಪ್ರಶ್ನೆಗೆ ಉತ್ತರ  ನೀಡಿದವರು (ನೀಡುವವರು) ಯಾರೂ ಅವಿದ್ಯಾವಂತರಲ್ಲ. 
ಬಹುತೇಕ ಮಂದಿ ದೊಡ್ಡ ದೊಡ್ಡ ಕಂಪೆನಿಯ ಉದ್ಯೋಗಿಗಳೇ.ಡಿಗ್ರಿ ಮೇಲೆ ಡಿಗ್ರಿ ಗಳಿಸಿ ಉನ್ನತ ಹುದ್ದೆಯನ್ನು ಅಲಂಕರಿಸಿ ಕೈ ತುಂಬಾ 
ಸಂಬಳ ಗಳಿಸುತ್ತಿರುವ ಈ ಮಹನೀಯರಿಗೆ ಬಾಲ್ಯದಲ್ಲಿ ಕಲಿತ ಪಾಠವೆಲ್ಲಾ ಮರೆತು ಹೋಯಿತೆ?.ಇರಲಿ ಬಿಡಿ, ಚಿಕ್ಕಂದಿನಲ್ಲಿ ಓದಿದ್ದು 
ಎಲ್ಲಾ ವಿಷಯಗಳ ನೆನಪಿರಲೇ ಬೇಕೆಂದಿಲ್ಲ. ಕನಿಷ್ಠ ನಮ್ಮ ದೇಶದ ಬಗ್ಗೆ ಸ್ವಲ್ಪವಾದರೂ ಗೊತ್ತಿರಬೇಕಲ್ವಾ? 

ಅದೇ ವೇಳೆ ಇನ್ಯಾವುದೋ ವಿದೇಶಿ ಸಂಗೀತಗಾರನ ಬಗ್ಗೆಯೋ, ನಟನ ಬಗ್ಗೆಯೋ ಪ್ರಶ್ನೆ ಕೇಳಿದ್ದರೆ ಅದಕ್ಕೆ ಥಟ್ ಅಂತಾ 
ಉತ್ತರ ಬರುತ್ತಿತ್ತು. ನಾವ್ಯಾಕೆ ಹೀಗೆ?. ನಮ್ಮ ದೇಶದ ಬಗ್ಗೆ ನಮಗೆ ಅದೇಕೆ ಅಷ್ಟೊಂದು ಅಸಡ್ಡೆ? ಜಗತ್ತಿನ ಎಲ್ಲಾ ವಿಷಯಗಳನ್ನು 
ಕಲಿತು ಪಂಡಿತರೆನಿಸಿಕೊಳ್ಳುವ ಛಲದಲ್ಲಿ ತಾಯ್ನಾಡಿನ ಬಗ್ಗೆ ತಿಳಿದು ಕೊಳ್ಳಲು ನಮ್ಮವರಿಗೆ ಸಮಯ ಸಾಕಾಗದೇ ಹೋಯಿತೆ?

ಈ ಮೊದಲು ಒಂದು ಟಿವಿ ಕಾರ್ಯಕ್ರಮದಲ್ಲಿ ಅಲ್ಲಿ ನೆರೆದಿದ್ದ ಜನರಲ್ಲಿ ರಾಷ್ಟ್ರಗೀತೆ ಹಾಡುವಂತೆ ಹೇಳಲಾಯಿತು. ಅಲ್ಲಿದ್ದವರಲ್ಲಿ ಹೆಚ್ಚಿನವರು 
ಯುವಕ ಯುವತಿಯರೇ ಆಗಿದ್ದರು. ಅದರಲ್ಲಿ ಯಾರೊಬ್ಬರೂ ಸರಿಯಾಗಿ ರಾಷ್ಟ್ರಗೀತೆಯನ್ನು ಹಾಡಲೇ ಇಲ್ಲ. ಇನ್ನು ಕೆಲವರಿಗೆ ನಮ್ಮ ದೇಶಕ್ಕೆ
ಸ್ವಾತಂತ್ರ ಸಿಕ್ಕಿದ್ದು ಯಾವಾಗ ಎಂಬ ಇಸ್ವಿಯೇ ಮರೆತು ಹೋಗಿದೆ!. ಈ ಮೇಲಿನ ಎರಡು ಘಟನೆಗಳನ್ನು ನೋಡಿದರೆ ಎಲ್ಲರಿಗಿಂತಲೂ 
ಹೆಚ್ಚು ಬುದ್ದಿವಂತರು ಎಂದೆನಿಸಿಕೊಂಡ ಭಾರತೀಯರು ದೇಶದ ಬಗ್ಗೆ ತಿಳಿದುಕೊಳ್ಳುವಲ್ಲಿ ಆಸಕ್ತಿ ತೋರುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ. 

ಒಂದೆಡೆ ಜಗತ್ತು ಬೆಳವಣಿಗೆಯ ಪಥದಲ್ಲಿ ಸಾಗುತ್ತಿರುವಾಗ ನಾವು ಭಾರತೀಯರು ವಿದೇಶಿಯರು ಹೇಳಿದ್ದು ಮಾಡಿದ್ದು ಎಲ್ಲವೂ ಹೈಟೆಕ್ 
ಎಂದು ಅವರ ದಾರಿಯಲ್ಲೇ ಸಾಗಲು ಬಯಸುತ್ತೇವೆ. ಆದರೆ ವಿದೇಶಿಯರು ಭಾರತದ ಸಂಸ್ಕ್ರತಿಯ ಬಗ್ಗೆ ಅಧ್ಯಯನ ನಡೆಸಲು ಭಾರತದತ್ತ 
ಧಾವಿಸುತ್ತಾರೆ. ಅವರ ಉಡುಗೆ ತೊಡುಗೆಗಳನ್ನು ನೋಡಿ ನಾವು ಕಚೀ೯ಫ್ ನಲ್ಲಿ ಲಂಗ ಹೊಲಿಸಿದ್ದೇವೆ.ನಮ್ಮ ಸಾರಿಗಳಿಂದ ವಿದೇಶಿ 
ಮಹಿಳೆಯರು ಮಾನ ಮುಚ್ಚುತ್ತಾರೆ! ಒಳ್ಳೆಯ ವಿಷಯಗಳನ್ನು ಎಲ್ಲರಿಂದಲೂ ಕಲಿತು ಕೊಳ್ಳಬಹುದು..ಮತ್ತು ಕಲಿಯಲೇ ಬೇಕು. 
ಹಾಗಂತ ನಮ್ಮ ದೇಶವನ್ನು ಕಡೆಗಣಿಸುವುದು ಸರೀನಾ?

ಇಂದಿನ ಯುವ ಜನಾಂಗ ತಮ್ಮ ದೇಶದ ಬಗ್ಗೆ ಆಸ್ಥೆ ವಹಿಸದಿದ್ದರೆ ಮುಂದಿನ ಪೀಳಿಗೆಯ ಸ್ಥಿತಿ ಏನಾಗಬೇಡ?. ಗಾಂಧಿ ಯಾರು? ಅಂತಾ ಕೇಳಿದರೆ 
ಬೋಳು ತಲೆ, ಚರಕದಲ್ಲಿ ನೂಲು ನೇಯುತ್ತಿರುವ ಗಾಂಧೀ ತಾತಾನ ಚಿತ್ರ ಮನಸ್ಸಲ್ಲಿ ಮೂಡುವ ಬದಲು ಪೂಜಾಗಾಂಧಿಯ ಪೋಸ್ಟರ್ ಮನಸ್ಸಲ್ಲಿ ಎದ್ದು 
ನಿಲ್ಲುತ್ತದೆ. ನಮಗೆ ಆದಶ೯ವಾಗಿರುವ ಹಿರಿಯರ ಫೋಟೋಗಳಿಗೆ ಫ್ರೇಮ್ ಹಾಕಿ ಗೋಡೆಗೆ ನೇತು ಹಾಕುವ ಜತೆಗೆ ಅವರ ಆದಶ೯ಗಳನ್ನು ಕೂಡಾ
ನಾವು ಫ್ರೇಮ್ ಹಾಕಿ ಬಂಧಿಸಿದ್ದೇವೆ. ನಾವು ಸಮಯದೊಂದಿಗೆ ಚಲಿಸುತ್ತಿದ್ದೇವೆ ನಿಜ.ಆದರೆ ಸಮಯದ ಅರಿವು ಇಲ್ಲದೆಯೇ ಚಲಿಸುವುದು ನೀರಿನಲ್ಲಿ 
ಹೋಮ ಮಾಡಿದಂತೆಯೇ. 

ಎಫ್ ಎಂನಲ್ಲಿ ಕೇಳಿದ ಪ್ರಶ್ನೆಯಿಂದಾಗಿ ಇಷ್ಟೆಲ್ಲಾ ಬರೆಯಬೇಕಾಗಿ ಬಂತು. ಅಂತೂ ಒಟ್ಟಿನಲ್ಲಿ ನಮ್ಮ ದೇಶದಲ್ಲಿನ ಪುರಾತನ ವಸ್ತುಗಳೆಲ್ಲಾ ಮ್ಯೂಸಿಯಂ ಸೇರಿ 
ವಿದೇಶಿಗರ ಆಕಷ೯ಣೆಯ ಬಿಂದುವಾಯ್ತು.ನಾವು ಮಾತ್ರ ವಿದೇಶಿಯರಿಗೆ ಆಕಷಿ೯ತರಾಗಿ ಬರೀ ಸೊನ್ನೆಯಾಗುತ್ತಿದ್ದೇವೆಯೇನೋ 
ಎಂಬ ಶಂಕೆ ಮನಸ್ಸನ್ನು ಕಾಡತೊಡಗಿದೆ.

ಮನಸ್ಸನ್ನು ಕಾಡಿದ ಆ ನಗು..

9 ಟಿಪ್ಪಣಿಗಳು

ನಿನ್ನನ್ನು ನೋಡಿದಾಗ…ಹುಂ ಏನು ಹೇಳ್ಬೇಕು ಅಂತಾ ತಿಳಿತಾ ಅಲ್ಲ. ಸಂಥಿಂಗ್ ಲೈಕ್ ನನ್ನ ಮನಸ್ಸಲ್ಲಿ…. ಕುಛ್ ಕುಛ್ ಹೋತಾ ಹೈ. ನಾವಿಬ್ಬರೂ ಈವರೆಗೆ ಮಾತನಾಡಿಲ್ಲ. ಆದರೂ ನೀನು ಯಾವಾಗಲೂ ನನ್ನತ್ತ ನೋಡಿ ಚಿಕ್ಕದೊಂದು ಸ್ಮೈಲ್ ಕೊಟ್ಟಾಗ ನನಗೇನೋ ಪುಳಕ. ಆಫೀಸಿನಲ್ಲಿ ನೀನು ಏನೋ ನೆಪ ಮಾಡಿಕೊಂಡು ನನ್ನ ಕ್ಯಾಬಿನ್ ಪಕ್ಕ ಬರುವಾಗ ಇವ ಇಂದು ನನ್ನಲ್ಲಿ ಮಾತಾಡಿಯೇ ಮಾತಾಡುತ್ತಾನೆ ಎಂದು ನಾನು ಅಂದುಕೊಳ್ಳುತ್ತೇನೆ. ಆದ್ರೆ ನೀನು…ಅದೇ ಮುಗುಳ್ನಗು ಕೊಟ್ಟು ಮತ್ತೆ ಮತ್ತೆ ನನ್ನನ್ನು ಚಡಪಡಿಸುವಂತೆ ಮಾಡ್ತಿಯಾ…

ನಿಜ ಹೇಳಲಾ? ನಿನ್ನ ಆ ನಗುವಿನಲ್ಲಿ ಅದೇನು ಜಾದೂ ಇದೆಯಂತ ನಂಗೊತ್ತಿಲ್ಲ ಕಣೋ. ನಿನ್ನ ನಗುವಿನ ಮುಂದೆ ನಾನಂತೂ ಕ್ಲೀನ್ ಬೌಲ್ಡ್ … 

ಹೇ..ಹುಡುಗ…ನಿನ್ನ ಹೆಸರು ಏನೂಂತ ನಂಗೆ ಗೊತ್ತಿಲ್ಲ. ನಿನ್ನ ಊರು ಯಾವುದು, ಭಾಷೆ ಯಾವುದು ಎಂಬುದು ಸಹ ನನಗೆ ತಿಳಿದಿಲ್ಲ. ಆದರೆ ನಿನ್ನ ಆ ಕ್ಯೂಟ್ ಸ್ಮೈಲ್ ಇದೆಯಲ್ಲಾ ಅದು ವರ್ಣನೆಗೆ ಅತೀತವಾದದ್ದು. 

ನನ್ನ ಮೊದಲ ಲವ್ ಬ್ರೇಕ್ ಅಪ್ ಆದಾಗ ಇನ್ನು ಮುಂದೆ ಲವ್ ಮಾಡುವುದಿಲ್ಲ ಅಂತಾನೇ ನಿರ್ಧಾರ ತೆಗೆದುಕೊಂಡವಳು ನಾನು. ಜೀವನದಲ್ಲಿ ಇನ್ಯಾವ ಹುಡುಗನನ್ನು ನನಗೆ ಪ್ರೀತಿಸಲು ಸಾಧ್ಯವಿಲ್ಲ ಅಂತಾ ಅಂದ್ಕೊಡ್ಡಿದ್ದೆ. ಆದರೆ ನೀನು… ನಿನ್ನ ನಗೆಯಲ್ಲಿಯೇ ನನ್ನನ್ನು ಮಂತ್ರಮುಗ್ದಳನ್ನಾಗಿಸಿದೆ. ನಿನ್ನ ಮನಸ್ಸಲ್ಲಿ ನನ್ನ ಬಗ್ಗೆ ಯಾವ ಭಾವನೆಯಿದೆಯೋ ಎಂದು ನನಗೆ ತಿಳಿದಿಲ್ಲ. ಆದರೆ ನೀನು ನನ್ನನ್ನು ಇಷ್ಟ ಪಡುತ್ತಿ ಅಂತಾ ನಂಗೊತ್ತು. ಯಾಕೆಂದರೆ ನೀನು ಚುಪ್ ಚುಪ್ಕೇ ನನ್ನನ್ನು ನೋಡ್ತಾ ಇರ್ತೀಯಾ. ನನ್ನ ಪ್ರತಿಯೊಂದು ಚಲನವಲನಗಳನ್ನು ಗಮನಿಸುತ್ತಾ ಇರುತ್ತಿಯಾ. ಆಮೇಲೆ ನಾನೆಲ್ಲಾದರೂ ನಿನ್ನತ್ತ ನೋಡಿದ್ರೆ, ಏನೂ ಗೊತ್ತಿಲ್ಲ ಅನ್ನುವಂತೆ ಬೇರೆಲ್ಲೋ ದೃಷ್ಟಿ ನೆಟ್ಟಿರುತ್ತಿಯಾ…ನೀನು ತುಂಬಾ ನಾಚಿಕೆ ಸ್ವಭಾವದವನು ಅಂತಾ ನಂಗೊತ್ತು. ಆದ್ರೆ ಒಂದೇ ಒಂದು ಬಾರಿ ನನ್ನಲ್ಲಿ ಮಾತನಾಡಿಸಲಾರೆಯಾ ಪ್ಲೀಸ್? 

ಮನೆಗೆ ಹೋದರೆ ನಿನ್ನ ಆ ಮುಗುಳ್ನಗು ನನ್ನ ನೆನಪಲ್ಲಿ ಸುಳಿಯುತ್ತಿರುತ್ತದೆ. ನೀನು ಪ್ರತಿ ಬಾರಿ ನನ್ನನ್ನು  ನೋಡಿದಾಗ ನೀಡುವ ಆ ಸ್ಮೈಲ್ ನೆನೆದುಕೊಂಡೇ ನಾನು ಸುಮ್ ಸುಮ್ನೆ ನಗ್ತೇನೆ. ನಿನ್ನದೇ ಯೋಚನೆ ಮನದಲ್ಲಿ…ಯಾಕೆ ಈ ತಳಮಳ? ಏನೇ ಬರೆಯಲು ಕುಳಿತರೂ ನೀನೆ ನೆನಪಾಗ್ತಾ ಇದ್ದೀಯಾ. ಅದಕ್ಕೆ ಆ ಮೊದಲ ಪ್ರೇಮದಲ್ಲಿ ಸೋತು ಕಂಗಾಲಾಗಿದ್ದ ನಾನು ಇದೀಗ ಮತ್ತೆ ಪ್ರೇಮದಲ್ಲಿ ಬೀಳುತ್ತಿದ್ದೇನಾ ಅಂತಾ ಒಂದು ಸಂಶಯ ನನ್ನ ಮನದ ಮೂಲೆಯಲ್ಲಿ. ಏನಿದ್ದರೂ ನಿನ್ನನ್ನು ನೋಡಿದ ನಂತರ ಪ್ರೇಮದ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ನಾನು ಸಜ್ಜಾಗಿದ್ದೇನೆ. ನಿನಗೆ ನಾನು ಇಷ್ಟವಾಗಿದ್ದರೆ ಹೇಳು….ಐ ಆ್ಯಮ್ ವೈಟಿಂಗ್…

ಕನ್ಯೆಯ ಕನಸು :’ವರ್ಜಿನ್ ವರ’

1 ಟಿಪ್ಪಣಿ

ಘಟನೆ 1 : ನನ್ನ ಗೆಳತಿಯೊಬ್ಬಳು ಕಾಲೇಜಿನಲ್ಲಿರುವಾಗ ನೆರೆ ಮನೆಯ ಹುಡುಗನೊಬ್ಬನನ್ನು ಪ್ರೀತಿಸಿದಳು. ವಿಷಯ ಮನೆಗೆ ತಿಳಿಸಿದಾಗ ಮನೆಯವರೂ ಒಪ್ಪಿಕೊಂಡು ವಿವಾಹದ ಸಿದ್ಧತೆಯೂ ನಡೆಯಿತು. ಇನ್ನೇನು ನಿಶ್ಚಿತಾರ್ಥ ನಡೆಯಲು ಎರಡು ದಿನಗಳಿರುವಾಗ ಹುಡುಗ ಆಕೆಗೆ ಫೋನ್ ಮಾಡಿ ತನ್ನನ್ನು ಭೇಟಿಯಾಗಬೇಕೆಂದು ಹೇಳಿದ. “ಆಯ್ತು” ಎಂದು ಈಕೆ ಒಪ್ಪಿಕೊಂಡಳು. ಭೇಟಿಯಾದಾಗ ಆತ ಹೇಳಿದ “ಬಾ..ನಾವು ಹಾಸ್ಪಿಟಲ್್ಗೆ ಹೋಗೋಣ”. “ಯಾಕೆ?” ಎಂಬ ಆಕೆಯ ಪ್ರಶ್ನೆಗೆ ಅವ ನೀಡಿದ ಉತ್ತರ.”ನೀನು ವರ್ಜಿನ್ ಹೌದಾ? ಅಲ್ವಾ ಅಂತಾ ತಿಳಿಬೇಕು”. ಹಾಂ! ಇಷ್ಟೊಂದು ಕಾಲ ತನ್ನೊಂದಿಗೆ ಸುತ್ತಾಡಿ ಪ್ರೀತಿಸಿದ ಹುಡುಗ ಇದೀಗ ತನ್ನ ಶೀಲದ ಬಗ್ಗೆ ಶಂಕೆ ಮಾಡುತ್ತಿದ್ದಾನೆ ಎಂದರೆ ಯಾವ ಹುಡುಗಿ ತಾನೇ ಸಹಿಸಿಯಾಳು? ಮತ್ತೆ ಒಂದಿಷ್ಟು ಜಗಳ. ತನ್ನ ಬಗ್ಗೆ ಇಷ್ಟೊಂದು ಶಂಕೆ ಪಡುವ ವ್ಯಕ್ತಿ ತನಗೆ ಬೇಡವೇ ಎಂದು ಈಕೆ ಹೇಳಿಯೇ ಬಿಟ್ಟಳು. ಮದುವೆ ರದ್ದಾಯಿತು.

 

ಘಟನೆ 2: ಮನೆಯವರು ನಿಶ್ಚಯಿಸಿದ ಮದುವೆ. ಹುಡುಗ ಹುಡುಗಿ ಪರಸ್ಪರ ನೋಡಿ ಮೆಚ್ಚುಗೆಯಾಗಿದೆ. ನಿಶ್ಚಿತಾರ್ಥಕ್ಕೆ ಕೆಲವು ದಿನಗಳಷ್ಟೇ ಬಾಕಿಯಿರುವಾಗ ಫೋನ್್ನಲ್ಲಿ ಭಾರೀ ಸಂಭಾಷಣೆ ನಡೆಸುತ್ತಿದ್ದರು ಈ ಜೋಡಿ. ಹೀಗೆ ಬಿಂದಾಸ್ ಆಗಿ ಮಾತಾನಾಡುತ್ತಿದ್ದಾಗ ಮಾತು ಮಾತಲ್ಲಿ ಆ ಹುಡುಗಿ ತನ್ನ ಭಾವೀ ಪತಿಯಲ್ಲಿ ‘Are you virgin?’ ಎಂದು ಕೇಳಿ ಬಿಟ್ಟಳು. ‘What you mean ?’ಅಂತಾ ಹುಡುಗನ ಪ್ರಶ್ನೆ. ನೀನು ವಿದೇಶದಲ್ಲಿ ಕೆಲಸ ಮಾಡಿದವನು. ಅಲ್ಲಿಯವರಿಗೆ ಇಂಥದೆಲ್ಲಾ ಸಿಲ್ಲಿ ವಿಷಯ. ಅದಕ್ಕೆ ಕೇಳಿದೆ ಎಂದು ಹುಡುಗಿ ಹೇಳಿದರೂ, ಹುಡುಗನಿಗೆ ಅವಳ ಈ ಪ್ರಶ್ನೆ ಎಳ್ಳಷ್ಟೂ ಹಿಡಿಸಿಲ್ಲ. ಅಬ್ಬಾ! ಇವಳಿಗೆಷ್ಟು ಕೊಬ್ಬು ಅಂದು ಕೊಂಡು ತನಗೆ ಈ ಮದುವೆ ಇಷ್ಟವಿಲ್ಲ ಎಂದು ಹೇಳಿ ಆ ಹುಡುಗ ಮದುವೆಯಿಂದ ಹಿಂದೆ ಸರಿದ.

ಮೇಲಿನ ಎರಡು ಘಟನೆಯನ್ನು ಗಮನಿಸಿ ನೋಡಿ. ಇಲ್ಲಿ ಹುಡುಗನಿಗೆ ಏನು ಬೇಕಾದರೂ ಮಾಡಬಹುದು, ಏನು ಬೇಕಾದರೂ ಆಡಬಹುದು. ಆದರೆ ಹುಡುಗಿ? ವರ್ಜಿನಿಟಿ ಎನ್ನುವುದೇ ಇಲ್ಲಿನ ಸಮಸ್ಯೆಯ ಹುಟ್ಟಿಗೆ ಕಾರಣ. ಏತನ್ಮಧ್ಯೆ ವರ್ಜಿನಿಟಿ ಎಂದರೆ ? ಹೆಣ್ಣು ಅಥವಾ ಗಂಡು ಈ ಮೊದಲು ಯಾರೊಂದಿಗೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳದಿದ್ದರೆ ಅಂತವರು ವರ್ಜಿನ್ ಎಂದು ಕರೆಯಲ್ಪಡುತ್ತಾರೆ ಎಂಬುದು ವರ್ಜಿನಿಟಿಗಿರುವ ವ್ಯಾಖ್ಯಾನ. ಏನಿದ್ದರೂ ಗಂಡು ವರ್ಜಿನ್ ಹೌದೋ ಅಲ್ಲವೋ ಎಂಬುದನ್ನು ತಿಳಿಯುವುದಂತೂ ಅಸಾಧ್ಯ ಸಂಗತಿ. ಆದರೆ ಹೆಣ್ಣು ಹಾಗಲ್ಲ. Its the big issue of small tissue ಎಂದು ಹೆಣ್ಣಿನ ವರ್ಜಿನಿಟಿಗೆ ಆಧುನಿಕ ವ್ಯಾಖ್ಯಾನವನ್ನು ನೀಡಬಹುದು. ಅಂದ ಹಾಗೆ ಪ್ರತಿಯೊಬ್ಬ ಪುರುಷನೂ ತನ್ನೊಂದಿಗೆ ದೇಹ ಹಂಚುವ ಹೆಣ್ಣಿನ ಬಗ್ಗೆ ತುಂಬಾ ಪೊಸೆಸ್ಸಿವ್ ಆಗಿರುತ್ತಾನೆ. ಅಂದರೆ ಪ್ರತಿಯೊಬ್ಬ ಹುಡುಗನಿಗೂ ತಾನು ಮದುವೆಯಾಗುವ ಹುಡುಗಿ ವರ್ಜಿನ್ ಆಗಿರಬೇಕೆಂಬ ಬಯಕೆ ಇದ್ದೇ ಇರುತ್ತದೆ ಎಂಬುದು ನಿಜ.

ಕೆಲವೊಮ್ಮೆ ಇತರರೊಂದಿಗೆ ಹಾಸಿಗೆ ಹಂಚದಿದ್ದರೂ ಆಕಸ್ಮಿಕವಾಗಿ ವರ್ಜಿನಿಟಿ ಕಳೆದುಕೊಳ್ಳುವ ಪ್ರಸಂಗವೂ ಹುಡುಗಿಗೆ ಬಂದೊದಗುತ್ತದೆ. ಆದರೆ ಕೆಲವೊಂದು ಗಂಡಸರು ಇದನ್ನು ತಪ್ಪಾಗಿ ಗ್ರಹಿಸಿ ಇವಳು ಮೊದಲು ಇನ್ನೊಬ್ಬನ ಜೊತೆ ಮಲಗಿದ್ದಾಳೆ ಎಂದು ಸಂಶಯ ಪಡುವುದು ಎಷ್ಟು ಸರಿ? ಅಂತೂ ಏನೇ ಹೇಳಿದರೂ ಸಮಾಜದಲ್ಲಿ ಇಂದಿಗೂ ಗಂಡಸರ ಪ್ರಾಬಲ್ಯ ಇದ್ದೇ ಇದೆಯಲ್ಲವಾ?. ನಗರದ ಹೆಣ್ಣು, ಗಂಡು ಎಲ್ಲವನ್ನೂ ಕೂಲ್ ಆಗಿ ತೆಗೆದುಕೊಂಡು ಹೇಗೋ ಸಂಸಾರ ಸಾಗಿಸಬಹುದು. ಆದರೆ ಹಳ್ಳಿ ಹುಡುಗಿಯರ ಕತೆಯೇನು? ತನ್ನ ಕೈಹಿಡಿಯುವ ಗಂಡು ವಿವಾಹದ ಮೊದಲು ಲೈಂಗಿಕ ಕ್ರಿಯೆಯಲ್ಲಿ ತೊಡಗಿರಬಹುದು. ಇದನ್ನು ಯಾವುದೇ ಹುಡುಗಿಯು ಪ್ರಶ್ನಿಸುವುದಿಲ್ಲ. ಒಂದು ವೇಳೆ ಮುಕ್ತವಾಗಿ ಅದನ್ನು ಕೇಳಿದರೆ ಗಂಡಸರ್ಯಾಕೆ ಸಿಡುಕುತ್ತಾರೆ? ಭಾರತೀಯ ಸಂಪ್ರದಾಯ ಪ್ರಕಾರ ವಿವಾಹಪೂರ್ವ ಲೈಂಗಿಕ ಸಂಬಂಧ ತಪ್ಪು ಎನ್ನುವ ಭಾವನೆ ಎಲ್ಲಿಯೂ ಮನೆ ಮಾಡಿದೆ. ಆದರೆ ಈಗೀಗ ಪಾಶ್ಚಾತ್ಯ ಸಂಪ್ರದಾಯಕ್ಕೆ ಮಾರುಹೋಗುತ್ತಿರುವ ಭಾರತೀಯರು ಇದನ್ನೆಲ್ಲಾ ಡೋಂಟ್ ಕೇರ್ ಮಾಡುತ್ತಾರೆಂಬುದೂ ನಿಜ. ಆದರೂ ಹೆಣ್ಣಿನ ವಿಷಯಕ್ಕೆ ಬಂದಾಗ ಎಲ್ಲಾ ಗಂಡಸರೂ ಪಕ್ಕಾ ಸಂಪ್ರದಾಯಿಗಳೇ…ತಾನು ಎಷ್ಟೇ ಹುಡುಗಿಯರ ಜೊತೆ ದೇಹ ಹಂಚಿರಲಿ ತನ್ನ ಹುಡುಗಿ ಮಾತ್ರ ಕನ್ನಿಕೆಯಾಗಿರಬೇಕು ಎಂಬ ಬಯಕೆ ಅವರದ್ದು. ಮದುವೆಯ ಮೊದಲು ಹುಡುಗಿ ಯಾರನ್ನಾದರೂ ಪ್ರೀತಿಸಿದ್ದಾಳೆ ಎಂದು ತಿಳಿದರೆ ಸಾಕು ಮದುವೆಯಾಗುವ ಹುಡುಗ ಆಕೆಗೆ ತಾಳಿ ಕಟ್ಟಲು ಹಿಂದೆ ಮುಂದೆ ನೋಡುತ್ತಾನೆ. ಪ್ರೀತಿಸಿದ್ದಾದರೆ ದೈಹಿಕ ಸಂಪರ್ಕವನ್ನೂ ಮಾಡಿರಬಹುದೇ? ಎಂಬ ಸಂಶಯವೂ ಅವನಲ್ಲಿರುತ್ತದೆ. ಪ್ರೀತಿ ಮಾಡಿದ ಮಾತ್ರಕ್ಕೆ ದೇಹವನ್ನು ಹಂಚಿಕೊಳ್ಳಬೇಕೆಂದೇನೂ ಇಲ್ಲವಲ್ಲಾ? ಆದಾಗ್ಯೂ, ಕೆಲವೊಂದು ಬಾರಿ ಇಂತಹಾ ಸಂದೇಹಗಳು ಅದೆಷ್ಟೋ ಮದುವೆ ಸಂಬಂಧಗಳು ಮುರಿದು ಬೀಳಲು ಕಾರಣವಾಗುತ್ತದೆ.

ಆದರೆ ಇದೀಗ ಗಂಡಸರ ಯೋಚನಾ ಲಹರಿ ಬದಲಾಗಿದೆ ಅಂತಾನೇ ಹೇಳಬಹುದು. ಹಳ್ಳಿಯಲ್ಲಾದರೆ ಹುಡುಗಿಯರು ಪ್ರೀತಿಸುವುದೇ ತಪ್ಪು ಎಂಬ ಅಭಿಪ್ರಾಯ ಇದ್ದೇ ಇರುತ್ತದೆ. ಹುಡುಗಿ ಯಾವುದೋ ಹುಡುಗನನ್ನು ಇಷ್ಟ ಪಡುತ್ತಾಳೆ ಎಂದು ಮನೆಯವರಿಗೆ ತಿಳಿದರೆ ಸಾಕು ಎರಡೇ ದಿನದಲ್ಲಿ ಆಕೆಯನ್ನು ಮದುವೆ ಮಾಡಿಸಿ ಬಿಡುತ್ತಾರೆ. ಆದರೆ ನಗರದಲ್ಲಿ ಪರಿಸ್ಥಿತಿ ಭಿನ್ನವಾಗಿರುತ್ತವೆ. ಈಗಿನ ಗಂಡಸರಂತೂ ತನ್ನ ಹುಡುಗಿ ಕಾಲೇಜು ಲೈಫ್್ನಲ್ಲಿ ಅಥವಾ ಮದುವೆಗೆ ಮುನ್ನ ಯಾವನೋ ಒಬ್ಬನನ್ನು ಪ್ರೀತಿಸಿದ್ದರೆ ಏನಂತೆ? ಮದುವೆಯಾದ ಮೇಲೆ ಅವಳು ನನ್ನವಳು ಮಾತ್ರ ಆಗಿರಬೇಕು ಎಂಬ ನಿಲುವುಳ್ಳವರಾಗಿರುವ ಕಾರಣ ಇಲ್ಲಿ ಅಷ್ಟೊಂದು ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು. ಇಂತಹಾ ಸಮಸ್ಯೆಗಳನ್ನೆಲ್ಲಾ ಗಂಭೀರವಾಗಿ ಅಥವಾ ಕೂಲ್ ಆಗಿ ತೆಗೆದುಕೊಳ್ಳಬೇಕೇ ಎನ್ನುವುದು ಅವರವರಿಗೆ ಬಿಟ್ಟ ವಿಚಾರ. ಆದರೆ ಬೆಡ್್ರೂಂ ವಿಷಯಕ್ಕೆ ಬಂದಾಗ Men are all the same! ಗಂಡಸರಿಗೆ ಹೇಗೆಯೋ ಅದೇ ರೀತಿ ಹೆಣ್ಣಿಗೂ ಬಯಕೆಗಳಿರುತ್ತವೆ. ತನ್ನ ಗಂಡ ಕೂಡಾ ವರ್ಜಿನ್ ಆಗಿರಬೇಕೆಂದು ಪ್ರತಿಯೊಂದು ಹೆಣ್ಣು ಬಯಸುತ್ತಾಳೆ. ಇದು ಅವಳ ಅಂತರಾಳದ ಆಗ್ರಹ. ಈ ಬಗ್ಗೆ ಆಕೆ ಮುಕ್ತವಾಗಿ ಕೇಳಿದರೆ ತಪ್ಪೇನಿದೆ ಹೇಳಿ?

Older Entries