ಗದ್ದಾಮ(2011)ಗದ್ದಾಮ  (ಖದ್ದಾಮ)-ಅಂದರೆ ಅರೇಬಿಕ್ ನಲ್ಲಿ ಕೆಲಸದಾಕೆ ಎಂದಥ೯. ಕೇರಳದ ಮಲೆಯಾಳಿಗಳಿಗೆ ಗಲ್ಫ್ ಅಂದ್ರೆ ಅದೇನೋ ಸೆಳೆತ. ಕೇರಳಿಗರು ಗಲ್ಪ್  ಗೆ ಹೋಗುವುದೆಂದರೆ ನಾವು ಬೆಂಗಳೂರಿನಿಂದ ಕೆಂಗೇರಿಗೆ ಹೋದಷ್ಟೇ ಸಲೀಸು. ಅಲ್ಲಿ ಯಾವುದೇ ಚಿಕ್ಕ ಪುಟ್ಟ ಕೆಲಸ ಆದ್ರೂನು ಸೈ, ಗಲ್ಫ್ ನಲ್ಲಿ ಕೆಲಸ ಸಿಕ್ಕಿದರೆ ಸಾಕು ಇಲ್ಲಿಯವರ ಬದುಕು ಹಸನುಗೊಳ್ಳುತ್ತದೆ. ಆದರೆ ದೂರದ ಮರುಭೂಮಿ ನಾಡಲ್ಲಿ  ನಮ್ಮವರು ಎಷ್ಟೊಂದು ಕಷ್ಟಪಟ್ಟು ಜೀವನ ಸಾಗಿಸುತ್ತಾರೆ ಎಂಬುದು ಅವರಿಗಷ್ಟೇ ಗೊತ್ತು.ಇಂತಹ ಸತ್ಯ ಕಥೆಗಳನ್ನು ಆಧರಿಸಿ ಕಮಲ್ ನಿಮಿ೯ಸಿದ ಮಲಯಾಳಂ ಚಿತ್ರವೇ ಗದ್ದಾಮ(2011).

ಪಟ್ಟಾಂಬಿ ಮೂಲದ ಹಳ್ಳಿಯ ಮುಗ್ಧ ಹೆಣ್ಣು ಮಗಳು ಅಶ್ವತಿ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹತ್ತಿರದ ಉಪ್ಪಿನಕಾಯಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಅಪ್ಪನ ಸಾಲ ತೀರಿಸಬೇಕು, ಮನೆಯ ಖಚೂ೯ ಭರಿಸಬೇಕು. ಹೀಗಿರುವಾಗ ಜೆಸಿಬಿ ಡ್ರೈವರ್ ಆಗಿರುವ ರಾಧಾಕೃಷ್ಣನ್ ಅಶ್ವತಿಯನ್ನು ಮದುವೆಯಾಗಲು ಮುಂದಾಗುತ್ತಾನೆ. ಮದ್ಯಪಾನ , ಗೂಂಡಾಗಿರಿ ನಿಲ್ಲಿಸಿದರೆ ತಾನು ನಿನ್ನನ್ನು ಮದುವೆಯಾಗುವುದಾಗಿ ಹೆಣ್ಣು ನೋಡಲು ಬಂದ ರಾಧಾಕಷ್ಣನ್ ಗೆ ಅಶ್ವತಿ ಹೇಳುತ್ತಾಳೆ. ಇದಕ್ಕೆಲ್ಲಾ ಒಪ್ಪಿದ ರಾಧಾಕಷ್ಣನ್ ಅಶ್ವತಿಯನ್ನು ಮದುವೆಯಾಗುತ್ತಾನೆ. ಮದುವೆಯಾದ ನಂತರ ಇವರ ಸಂಸಾರ ಚೆನ್ನಾಗಿಯೇ ಇರುತ್ತದೆ. ಮುಂದೊಂದು ದಿನ ರಾಧಾಕೃಷ್ಣನ್ ನೀರಿಗೆ ಬಿದ್ದು ಸಾವನ್ನಪ್ಪುತ್ತಾನೆ. ಮನೆಯ ಆಥಿ೯ಕ ಪರಿಸ್ಥಿತಿ ತೀರಾ ಹದಗೆಟ್ಟಿರುತ್ತದೆ. ಹೀಗಿರುವಾಗ ಗಲ್ಪ್ ನಲ್ಲಿ ಮನೆಕೆಲಸದಾಕೆಯಾಗಿ ಸೇರಿಕೊಂಡರೆ ಒಳ್ಳೆಯ ಸಂಬಳ ಸಿಗಬಹುದು ಎಂದು ಊರಿನ ಜನ ಸಲಹೆ ನೀಡುತ್ತಾರೆ. ಗಲ್ಫ್ ನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿರುವ ಉಸ್ಮಾನ್ ಅಶ್ವತಿಯ ಗ್ರಾಮದವನೇ. ವಿಸಾದ ಏಪಾ೯ಟು ಮಾಡಿದ ಉಸ್ಮಾನ್  ದೊರೆಯೊಬ್ಬರ ಮನೆಯಲ್ಲಿ ಅಶ್ವತಿಗೆ ಕೆಲಸ ಕೊಡಿಸಲು ಒಪ್ಪಿಕೊಳ್ಳುತ್ತಾನೆ. ಮನೆಯಲ್ಲಿನ ಪರಿಸ್ಥಿತಿ ಮನಗಂಡ ಅಶ್ವತಿ ಒಲ್ಲದ ಮನಸ್ಸಿನಿಂದಲೇ ಗಲ್ಫ್ ರಾಷ್ಟ್ರಕ್ಕೆ ಪ್ರಯಾಣ ಬೆಳೆಸುತ್ತಾಳೆ.

 
ಗಲ್ಫ್  ತಲುಪಿದ ಕೂಡಲೇ ವಿಮಾನ ನಿಲ್ದಾಣದಲ್ಲಿನ ಅನುಭವವೂ ಆಕೆಯಲ್ಲಿ ಅಚ್ಚರಿ ಮೂಡಿಸುತ್ತವೆ. ಚಂದನದ ಅಡ್ಡನಾಮ ಹಾಕಿ ತನ್ನ ಪ್ರಾಯೋಜಕರಿಗಾಗಿ ಕಾಯುತ್ತಾ ಕುಳಿತಿದ್ದ ಅಶ್ವತಿಯನ್ನು ಮುಸ್ಲಿಮ್ ಹೆಂಗಸೊಬ್ಬಳು  ಮಾತನಾಡಿಸುತ್ತಾಳೆ. ಆಕೆಯೂ ಕೇರಳದವಳೇ ಆಗಿದ್ದು, ಗಲ್ಫ್ ನಲ್ಲಿ ಬುಖಾ೯ ಹಾಕದಿದ್ದರೆ ಬದುಕುವುದು ಸಾಧ್ಯವೇ ಇಲ್ಲ ಎಂದು ಹೇಳಿ ಕಪ್ಪು ದುಪಟ್ಟಾವನ್ನು ತಲೆಗೆ ಹಾಕಿಕೊಳ್ಳುವಂತೆ ಅಶ್ವತಿಗೆ ಹೇಳುತ್ತಾಳೆ. ಚಂದನದ ನಾಮವನ್ನು ಉಜ್ಜಿ ಅಶ್ವಿತಿ ಕಪ್ಪು ದುಪ್ಪಟ್ಟಾ ತಲೆಗೆ ಹಾಕಿಕೊಳ್ಳುತ್ತಾಳೆ. ಉಸ್ಮಾನ್ ಮತ್ತು ಆತನ ಅರಬ್ಬೀ ದೊರೆ ವಿಮಾನ ನಿಲ್ದಾಣದಿಂದ ಅಶ್ವತಿಯನ್ನು ಕರೆದೊಯ್ಯಲು ಬರುತ್ತಾರೆ. ದೊರೆಯ ಮನೆಗೆ ಕಾರಿನಲ್ಲಿ ಸಾಗುತ್ತಿರುವಾಗ ಉಸ್ಮಾನ್ ಅಶ್ವತಿಯಲ್ಲಿ, “ಸಹೋದರಿ.. ಈಗಲೇ ಈ ಹೊರ ಪ್ರಪಂಚವನ್ನು ಕಣ್ತುಂಬ ನೋಡಿಕೋ, ಮುಂದೆ ಇಂತಹ ಅವಕಾಶ ಸಿಗುವುದಿಲ್ಲ” ಎಂದು ಹೇಳುತ್ತಿದ್ದರೂ, ಮುಂದೆ ತನ್ನ ಜೀವನದಲ್ಲಿ ಇಷ್ಟೊಂದು ಕಷ್ಟಗಳು ಬರಲಿವೆ ಎಂದು ಅಶ್ವತಿ ಯೋಚಿಸಿರಲಿಲ್ಲ.
ಪ್ರಾಯೋಜಕರ ಮನೆಗೆ ತಲುಪಿದ ಅಶ್ವತಿಗೆ ಅಲ್ಲಿನ ಅನುಭವಗಳು ಬೆಚ್ಚಿ ಬೀಳಿಸುವಂತಿರುತ್ತವೆ. ಅವರು ಹೇಳುವ ಭಾಷೆ ಇವಳಿಗೆ ಅಥ೯ವಾಗುತ್ತಿಲ್ಲ. ಆದರೂ ಕೆಲವೊಂದು ಪದಗಳನ್ನು ಊಹಿಸಿಕೊಂಡು ಅಶ್ವತಿ ಎಲ್ಲದಕ್ಕೂ ತಲೆಯಾಡಿಸುತ್ತಿರುತ್ತಾಳೆ. ಅದೇ ಮನೆಯಲ್ಲಿ ಫಾತಿಮಾ ಎಂಬ ಇಂಡೋನೇಷ್ಯಾ ಮೂಲದ ಹುಡುಗಿಯೂ ಕೆಲಸಕ್ಕಿರುತ್ತಾಳೆ. ಅಶ್ವತಿಯಲ್ಲಿ ಇನ್ನು ಮುಂದೆ ಇದೇ ಉಡುಪು ಧರಿಸಬೇಕು ಎಂದು ಬುಖಾ೯  ಧರಿಸುವಂತೆ ಫಾತಿಮಾ ಹೇಳಿಕೊಡುತ್ತಾಳೆ. ಈ ಸೀರೆ ನಿನಗೆ ಚೆನ್ನಾಗಿ ಒಪ್ಪುತ್ತದೆ. ನಾನು ಹಿಂದೀ ಮೂವಿಯಲ್ಲಿ ಸೀರೆ ನೋಡಿದ್ದೇನೆ ಎಂದು ಅರ್ಧಂಬರ್ಧ ಇಂಗ್ಲಿಷ್  ಮಾತನಾಡುವ ಫಾತಿಮಾ ಅಶ್ವತಿಯ ಜತೆಯಾಗುತ್ತಾಳೆ.
ಆ ಮನೆಯಲ್ಲಿರುವ ಹೆಂಗಸರು ಆ ಕೆಲಸ ಮಾಡು ಈ ಕೆಲಸ ಮಾಡು ಎಂದು ಆದೇಶ ನೀಡುವವರೇ. ಗಂಡಸರಿಗೆ ಈಕೆಯ ಮೈಮೇಲೆಯೇ ಕಣ್ಣು. ಹೇಗೋ ಎಲ್ಲವನ್ನು ಸಹಿಸಿಕೊಂಡು ಹೋಗಬೇಕು. ಇಲ್ಲದಿದ್ದರೆ ಮನೆಯಲ್ಲಿನ ಪರಿಸ್ಥಿತಿ ಇನ್ನೂ ಹದಗೆಡುತ್ತದೆ ಎಂಬ ಚಿಂತೆ. ಹೀಗೆ ಮನೆಕೆಲಸದಲ್ಲಿ ನಿರತಳಾಗಿರುವಾಗ ಆ ಮನೆಯಲ್ಲಿದ್ದ ಯುವಕ ಚಾಕುವಿನಿಂದ ಇವಳ ರಟ್ಟೆಗೆ ಗೀರಿ ಗಾಯಗೊಳಿಸುತ್ತಾನೆ. ಅಳುವಷ್ಟೂ ಸಮಯವಿಲ್ಲ, ಆಗಲೇ ಮನೆಯೊಡತಿ ಇನ್ನೊಂದು ಕೆಲಸ ಮಾಡುವಂತೆ ಬೈಯ್ಯುತ್ತಾಳೆ. ಅಶ್ವತಿಯ ಕಣ್ಣೀರಿಗೆ ಫಾತಿಮಾ ಸಾಂತ್ವನ ಹೇಳಿ ಗಾಯಕ್ಕೆ ಮುಲಾಮು ಹಚ್ಚುತ್ತಾಳೆ. ಇದಾದ ನಂತರ ಮುಂದೊಂದು ದಿನ ಆ ಮನೆಯ ಹಿರಿಯ ದೊರೆ ಆತನಿಗೆ ದೃಷ್ಟಿ ದೋಷವಿದೆ ಎಂದು ಹೇಳಿಕೊಂಡರೂ ಅಶ್ವತಿಯ ಸೊಂಟಕ್ಕೆ ಊರುಗೋಲಿನಿಂದ ತಿವಿಯುತ್ತಾನೆ. ಮಾನಸಿಕ, ದೈಹಿಕ ಪೀಡನೆಗಳನ್ನು ಸಹಿಸಿಕೊಂಡರೂ ಅಶ್ವತಿ ಎಂದೂ ತನ್ನ ಮನೆಯವರಿಗೆ ತನ್ನ ಕಷ್ಟವನ್ನು ಹೇಳಿಕೊಂಡಿಲ್ಲ. ತಿಂಗಳ ಸಂಬಳ ಇಂತಿಷ್ಟು ಎಂದು ಈ ಮೊದಲು ನಿಗದಿಯಾಗಿದ್ದರೂ, ಕೈಗೆ ಸಿಗುವಾಗುವಾಗ ಅದರಲ್ಲೂ ಮೋಸ ಮಾಡಲಾಗುತ್ತಿತ್ತು.. ಹೀಗೆ ತನ್ನ ಕಷ್ಟವನ್ನು ನೆನೆದು ನಿದ್ದೆ ಹೋಗಿದ್ದ ಒಂದು ರಾತ್ರಿ ಏನೋ ಸದ್ದು ಕೇಳಿ ಎಚ್ಚರವಾಗಿ ನೋಡಿದ ದೃಶ್ಯ ಮೈ ಜುಮ್ಮ್  ಅನ್ನುವಂತಿತ್ತು.
ಫಾತಿಮಾ, ಉಸ್ಮಾನ್ ನ ಕೋಣೆಯಿಂದ ಹೊರ ಬರುತ್ತಿರುವುದನ್ನು ನೋಡಿದ ಅಶ್ವತಿ, ಈ ಬಗ್ಗೆ ಉಸ್ಮಾನ್ ನಲ್ಲಿ ಕೇಳಿದಾಗ ಆತ ಇದೊಂದು ಅಡ್ಜೆಸ್ಟ್ ಮೆಂಟ್ ಮಾತ್ರ. ಹಾಗಂತ ನಾನವಳನ್ನು ಮದುವೆಯಾಗುವುದಿಲ್ಲ ಎಂದು ಹೇಳುತ್ತಾನೆ. ಊರಲ್ಲಿರುವ ಹೆಂಡತಿ ಮಕ್ಕಳನ್ನು ಮರೆತು ಈ ರೀತಿ ಸಂಬಂಧ ಇಟ್ಟುಕೊಂಡಿರುವ ಉಸ್ಮಾನ್ ಬಗ್ಗೆ ಅಶ್ವತಿಗೆ ಸಿಟ್ಟು ಬರುತ್ತದೆ. ಮುಂದೊಂದು ದಿನ ಉಸ್ಮಾನ್ ಮತ್ತು ಫಾತಿಮಾ ನಡುವಿನ ಅನೈತಿಕ ಸಂಬಂಧ ದೊರೆಗೆ ಗೊತ್ತಾಗಿ, ಉಸ್ಮಾನ್ ನನ್ನು ಕೆಲಸದಿಂದ ವಜಾಗೊಳಿಸಲಾಗುತ್ತದೆ.

 
ಇತ್ತ ತಪ್ಪಿಗಾಗಿ ಫಾತಿಮಾಳಿಗೆ ಚಾಟಿಯೇಟು ನೀಡಲಾಗುತ್ತದೆ. ಹೊಡೆತ ತಿಂದು ಕಂಗಾಲಾಗಿದ್ದ  ಫಾತಿಮಾಳನ್ನು ಹೇಗಾದರೂ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಬೇಕೆಂದು ಉಸ್ಮಾನ್ ಅಶ್ವತಿಗೆ ಹೇಳುತ್ತಾನೆ. ಅಶ್ವತಿ ಫಾತಿಮಾಳನ್ನು ಮನೆಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಾಳೆ. ಫಾತಿಮಾಳಿಗೆ ಸಹಾಯ ಮಾಡಿದುದಕ್ಕಾಗಿ ಅಶ್ವತಿಗೂ ಚಾಟಿಯೇಟು ನೀಡಲಾಗುತ್ತದೆ. ಹೇಗಾದರೂ ಮಾಡಿ ತಾನೂ ತಪ್ಪಿಸಿಕೊಳ್ಳಬೇಕೆಂದು ಅಶ್ವತಿ ಉಸ್ಮಾನ್ ನ ಸಹಾಯ ಬೇಡುತ್ತಾಳೆ. ಆ ಮನೆಯಿಂದ ತಪ್ಪಿಸಿ ಸಂಜೆ 8 ಗಂಟೆಯ ವೇಳೆಗೆ ಅಲ್ಲೇ ಪಕ್ಕದಲ್ಲಿರುವ ಮಲಯಾಳಿಯೊಬ್ಬರ ಅಂಗಡಿಗೆ ಬಂದರೆ ಆತ ನಿನ್ನನ್ನು ರಿಯಾದ್ ಗೆ ಕಳುಹಿಸುತ್ತಾನೆ. ಅಲ್ಲಿ ನಾನಿರುತ್ತೇನೆ ಎಂದು ಉಸ್ಮಾನ್  ಹೇಳುತ್ತಾನೆ. ಅಂತೂ ಅಶ್ವತಿ ಗೋಡೆ ಹಾರಿ ಮನೆಯಿಂದ ತಪ್ಪಿಸಿಕೊಂಡು ಬಂದರೂ 10 ಗಂಟೆಯವರೆಗೂ ಉಸ್ಮಾನ್ ಹೇಳಿದ ಅಂಗಡಿ ಪಕ್ಕ ತಲುಪಲು ವಿಫಲಳಾಗುತ್ತಾಳೆ. ಕೈಯಲ್ಲಿರುವುದು ಇಂಡಿಯನ್ ಕರೆನ್ಸಿ, ಫೋನ್  ಬೂತ್ ನಿಂದ ಫೋನ್ ಮಾಡಲೂ ಆಗದೇ ಇಡೀ ರಾತ್ರಿ ಆಕೆ ಅಂಗಡಿಯ ಗೋಡೆಯ ಸಂಧಿಯಲ್ಲಿ ಬಚ್ಚಿ ಕುಳಿತುಕೊಳ್ಳುತ್ತಾಳೆ. ಇತ್ತ ಅಶ್ವತಿಯೆಂಬ ಮಲಯಾಳಿ ಗಲ್ಫ್ ದೊರೆಯ ಮನೆಯಿಂದ ಹಣ ಮತ್ತು ಒಡವೆ ಕದ್ದು ಪರಾರಿಯಾಗಿರುವುದಾಗಿ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತದೆ.

 
ರಜಾಕ್ ಕೊಟ್ಟೆಕ್ಕಾಡ್, ಎಂಬ ಮಲಯಾಳಿ ಅಲ್ಲಿನ ಸಾಮಾಜಿಕ ಕಾರ್ಯಕತ೯. ಸ್ವಂತ ಕೆಲಸಕ್ಕಿಂತ ಹೆಚ್ಚು  ಗಲ್ಫ್ ರಾಜ್ಯದಲ್ಲಿರುವ ಭಾರತೀಯರಿಗೆ ಸಹಾಯ ಮಾಡುವುದೇ ಇವನ ಕಾಯಕವಾಗಿತ್ತು. ಆಸ್ಪತ್ರೆಗಳ ಮೋಜ೯ರಿಯಲ್ಲಿ ‘ಅನ್ ಐಡೆಂಟಿಫೈಡ್ ಇಂಡಿಯನ್’  ಎಂದು ಲೇಬಲ್ ಹಾಕಿರುವ ಅನಾಥ ಶವಗಳ ವಾರೀಸುದಾರರನ್ನು ಪತ್ತೆ ಹಚ್ಚುವುದು,ಶೋಷಣೆಗೊಳಗಾದ ಭಾರತೀಯರಿಗೆ ನ್ಯಾಯವೊದಗಿಸುವುದು ಹೀಗೆ ಸಮಾಜ ಸೇವೆ ಮಾಡುತ್ತಾ ಎಲ್ಲರಿಗೂ ಆಪ್ತನಾಗಿದ್ದ ರಜಾಕ್. ಹೀಗಿರುವಾಗ ಅಶ್ವತಿಯ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಪತ್ರಿಕಾ ಸಂಪಾದಕನಾದ ಗೆಳೆಯನೊಬ್ಬ ರಜಾಕ್ ಗೆ ಹೇಳುತ್ತಾನೆ. ಅಶ್ವತಿಯನ್ನು ಹೇಗಾದರೂ ಮಾಡಿ ಪತ್ತೆ ಹಚ್ಚಬೇಕು ಎಂದು ನಿಧ೯ರಿಸಿದ ರಜಾಕ್ ಅಶ್ವತಿಯ ಮನೆಗೆ ಫೋನಾಯಿಸುತ್ತಾನೆ. ಅಲ್ಲಿ ಆಕೆಯ ಅಮ್ಮ ಅಶ್ವತಿ ಕಳೆದ 5 ತಿಂಗಳಿನಿಂದ ಫೋನ್ ಮಾಡಿಲ್ಲ, ಹಣವನ್ನೂ ಕಳುಹಿಸಿಲ್ಲ, ಆಕೆ ಬದುಕಿದ್ದಳೋ ಎಂಬುದು ಗೊತ್ತಿಲ್ಲ ಎಂದು ಕಣ್ಣೀರಿಡುತ್ತಾರೆ.

 

ಇತ್ತ ಅಶ್ವತಿ, ಹಸಿವು ಬಾಯಾರಿಕೆಯಿಂದ ಕಂಗಾಲಾಗಿ ಸುಡು ಬಿಸಿಲಿನಲ್ಲಿ ರಸ್ತೆಯತ್ತ ಹೆಜ್ಜೆ ಹಾಕುತ್ತಾಳೆ. ಆ ರಸ್ತೆಯಲ್ಲಿ ಹೋಗುತ್ತಿರುವ ವಾಹನಗಳಿಗೆ ಕೈ ತೋರಿಸಿ “ರಿಯಾದ್…ರಿಯಾದ್ ಹೋಗುತ್ತಾ?” ಎಂದು ಕೇಳುತ್ತಾಳೆ. ಕೊನೆಗೆ ಆಡುಗಳನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಅಶ್ವತಿಯನ್ನು ನೋಡಿ ನಿಲ್ಲುತ್ತದೆ. “ರಿಯಾದ್ ಹೋಗುತ್ತಾ?” ಎಂದು ಕೇಳಿದಾಗ “ಹೂಂ” ಹೋಗುತ್ತೆ ಅಂತಾರೆ. ದಾಹ ನೀಗಿಸಲು ನೀರು ನೀಡಿದ ಲಾರಿ ಡ್ರೈವರ್ ಹಾಗೂ ಆತನ ಜತೆಗಿದ್ದ ಇನ್ನಿಬ್ಬರು ಹಿಂದೆ ಹೋಗಿ ಕುಳಿತುಕೊಳ್ಳುವಂತೆ ಹೇಳುತ್ತಾರೆ. ಆಡುಗಳ ನಡುವೆ ಅಶ್ವಿತಿ ಮುದುಡಿ ಕುಳಿತುಕೊಂಡಾಗ ಅಲ್ಲೊಬ್ಬ ಕುರುಚಲು ಗಡ್ಡ, ಮಾಸಿದ ಬಟ್ಟೆ ಧರಿಸಿದ ವ್ಯಕ್ತಿ ಕಣ್ಣಿಗೆ ಬೀಳುತ್ತಾನೆ. ಅಶ್ವತಿ ಆತನನ್ನು ನೋಡಿ ಇನ್ನಷ್ಟು ಹೆದರಿ ಕೊಳ್ಳುತ್ತಾಳೆ. ಲಾರಿ ಮುಖ್ಯ ರಸ್ತೆ ಬಿಟ್ಟು ಇನ್ಯಾವುದೋ ರಸ್ತೆಯ ದಾರಿ ಹಿಡಿದಾಗ ಅಶ್ವತಿ ಗಾಬರಿಗೊಂಡು “ಸ್ಟಾಪ್… ಸ್ಟಾಪ್” ಎಂದು ಕಿರಿಚುತ್ತಾಳೆ. ಯಾವುದೋ ಒಂದು ನಿಜ೯ನ ಪ್ರದೇಶದಲ್ಲಿರುವ ಟೆಂಟ್ ಪಕ್ಕ ಲಾರಿಯನ್ನು ನಿಲ್ಲಿಸಿ ಎಲ್ಲರೂ ಕೆಳಗಿಳಿಯುತ್ತಾರೆ. ಲಾರಿ ಚಾಲಕ ಮತ್ತು ಆತನ ಇಬ್ಬರು ಗೆಳೆಯರು ಸಂಜೆ ಪ್ರಾಥ೯ನೆ ಸಲ್ಲಿಸುತ್ತಿದ್ದರೆ, ಲಾರಿಯಲ್ಲಿದ್ದ ಆ ಕುರುಚಲು ಗಡ್ಡದ ವ್ಯಕ್ತಿ ಬಶೀರ್ ,ಅಶ್ವತಿಯ ಪಕ್ಕ ಬಂದವನೇ ಆಕೆಯ ಕೈ ಹಿಡಿದು ಓಡಲು ತೊಡಗುತ್ತಾನೆ. ಒಂದಷ್ಟು ದೂರ ಓಡಿದ ನಂತರ ಇಲ್ಲಿಂದ ಹೇಗಾದರೂ ತಪ್ಪಿಸಿಕೊಂಡು ಹೋಗು, ಇಲ್ಲವಾದರೆ ಅವರು ನಿನ್ನನ್ನು ಬದುಕಲು ಬಿಡುವುದಿಲ್ಲ ಎಂದು ಹೇಳಿ, ಆಕೆಯನ್ನು  ಬಿಟ್ಟು ವಾಪಸ್ ಬರುತ್ತಾನೆ.
ಪ್ರಾಥ೯ನೆ ಮುಗಿದ ನಂತರ ಆ ಹುಡುಗಿ ಎಲ್ಲಿ? ಎಂದು ಕೇಳಿ ಲಾರಿ ಚಾಲಕ ಮತ್ತು ಆತನ ಗೆಳೆಯರು ಬಶೀರ್ ಗೆ ಹಿಗ್ಗಾಮುಗ್ಗ ಥಳಿಸಿ ಹೋಗುತ್ತಾರೆ. ಅಷ್ಟೊತ್ತಿಗೆ ಟ್ರಕ್ ಚಾಲಕನಾದ ಬಶೀರ್ ನ ಗೆಳೆಯ ಭರತನ್ ಬರುತ್ತಾನೆ. ನಡೆದದ್ದನ್ನಲ್ಲಾ ವಿವರಿಸಿದ ಬಶೀರ್ ಹೇಗಾದರೂ ಮಾಡಿ ಅಶ್ವತಿಯನ್ನು ಹುಡುಕಬೇಕು ಎಂದು ಗೆಳೆಯನಿಗೆ ಹೇಳುತ್ತಾನೆ. ಮರುಭೂಮಿಯಲ್ಲಿ ಆಕೆಗಾಗಿ ಹುಡುಕಾಟ ಆರಂಭವಾಗುತ್ತದೆ. ಕೊನೆಗೆ ಸುಸ್ತಾಗಿ ಬಿದ್ದಿರುವ ಅಶ್ವತಿ ಅವರಿಗೆ ಸಿಗುತ್ತಾಳೆ. ಈಕೆಯನ್ನು ರಿಯಾದ್ ಗೆ ತಲುಪಿಸು ಎಂದು ಭರತನ್ ಗೆ ಹೇಳಿ ಬಶೀರ್  ವಾಪಾಸಾಗುತ್ತಾನೆ. ಹೇಗೋ ಅಶ್ವತಿಯನ್ನು ಕರೆದುಕೊಂಡು ರಿಯಾದ್ ಗೆ ಬಂದ ಭರತನ್ ,ಉಸ್ಮಾನ್ ನ ವಿಳಾಸ ಪತ್ತೆ ಹಚ್ಚುತ್ತಾನೆ. ಅಶ್ವತಿಯ ಜವಾಬ್ದಾರಿಯನ್ನು ಹೊರಲು ಒಪ್ಪದ ಉಸ್ಮಾನ್ ತನಗೂ ಆಕೆಗೂ ಪರಿಚಯವೇ ಇಲ್ಲ ಎಂದು ಹೇಳುತ್ತಾನೆ. ಇನ್ನು ಬೇರೆ ದಾರಿಯೇ ಇಲ್ಲದೆ ಭರತನ್ ಅಶ್ವತಿಯನ್ನು ತನ್ನ ಕೋಣೆಗೆ ಕರೆದುಕೊಂಡು ಬರುತ್ತಾನೆ. ಆಕೆಗೆ ವಸ್ತ್ರ ಹಾಗೂ ಅನ್ನ ಕೊಟ್ಟು ತಾನು ಟ್ರಕ್ ನಲ್ಲೇ ನಿದ್ದೆ ಹೋಗುತ್ತಾನೆ. ಬ್ಯಾಚುಲರ್ ರೂಮಿನಲ್ಲಿ ಓವ೯ ಹೆಣ್ಣು ಮಗಳಿಗೆ ಆಶ್ರಯ ಕೊಡುವುದೂ ಅಪರಾಧವೇ. ಅದೂ ಅಲ್ಲದೆ ಅಶ್ವತಿಯ ವಿರುದ್ಧ ಕೇಸು ದಾಖಲಿಸಿದ್ದರಿಂದ ಪೊಲೀಸರು ಆಕೆಗಾಗಿ ಹುಡುಕುತ್ತಿದ್ದರು. ಎರಡು ದಿನಗಳ ನಂತರ ಪೊಲೀಸರು  ಭರತನ್ ಮತ್ತು ಅಶ್ವತಿಯನ್ನು ಬಂಧಿಸುತ್ತಾರೆ.

 

ಅಲ್ಲಿನ ಜೈಲಿನಲ್ಲಿ ಅಶ್ವತಿಗೆ ಚಾಟಿಯೇಟು ನೀಡಲಾಗುತ್ತದೆ. ಅಶ್ವತಿ ಬಂಧಿತಳಾದ ಸುದ್ದಿ ತಿಳಿದ ರಜಾಕ್  ಆಕೆಯನ್ನು ಮತ್ತು ಭರತನ್ ನ್ನು ಬಿಡುಗಡೆ ಮಾಡಿ ಹೊರ ತರುತ್ತಾನೆ. ಎಲ್ಲರಿಗೂ ವಿಸಾ ಏಪಾ೯ಟು ಮಾಡಿ ಭಾರತಕ್ಕೆ ಕಳುಹಿಸುವಲ್ಲಿಗೆ ಚಿತ್ರ ಮುಗಿಯುತ್ತದೆ. ಈ ಚಿತ್ರದ ಮೂಲಕ ಕಮಲ್, ಗಲ್ಫ್ ರಾಷ್ಟ್ರಗಳಲ್ಲಿ ಕೆಲಸದಾಳುಗಳಾಗಿ ದುಡಿಯುತ್ತಿರುವ ಮಹಿಳೆಯರ ಕಷ್ಟಗಳನ್ನು ಜನರ ಮುಂದಿಟ್ಟಿದ್ದಾರೆ. ಏನಾದರೂ ಆಗಲಿ ಗಲ್ಫ್ ನಲ್ಲಿ ಹೋಗಿ ದುಡಿದರೆ ಸಾಕಷ್ಟು ಹಣ ಸಿಗುತ್ತದೆ ಎಂದು ಹಂಬಲಿಸಿ ಊರು ಬಿಟ್ಟು ಅರೇಬಿಯಾದ ಮರುಭೂಮಿ ಸೇರುವ ವ್ಯಕ್ತಿಗಳ ಬದುಕು ಈ ರೀತಿ ಇರುತ್ತದೆ ಎಂದು  ತೋರಿಸುವಲ್ಲಿ ಕಮಲ್ ಯಶಸ್ವಿಯಾಗಿದ್ದಾರೆ ಎಂದೇ ಹೇಳಬಹುದು. ಅದೇ ವೇಳೆ ಸಿನಿಮಾರಂಗದಿಂದ ಒಂದಷ್ಟು ಕಾಲ ದೂರ ಸರಿದು ಮತ್ತೆ ವಾಪಾಸಾಗಿದ್ದ ಕಾವ್ಯಾ ಮಾಧವನ್ (ಅಶ್ವತಿ) ಹಾಗೂ ಶ್ರೀನಿವಾಸನ್ (ರಜಾಕ್) ತಮ್ಮ ನೈಜ ಅಭಿನಯದಿಂದ ಸೈ ಎನಿಸಿಕೊಂಡಿದ್ದಾರೆ.

Advertisements