ಕೊಡುವುದೆಂದರೆ….

ನಿಮ್ಮ ಟಿಪ್ಪಣಿ ಬರೆಯಿರಿ

Image

ಗುರುಗಳೆಂದರು

ನಿನ್ನ ದಯೆ ತುಂಬಿದ ಕಣ್ಣುಗಳು

ಈ ನಾಜೂಕು ಬೆರಳುಗಳನ್ನು

ನನಗೆ ಕೊಡು

ನಾನಿದರಲ್ಲಿ ಕವಿತೆಯ ಅಗ್ನಿ

ಜ್ವಲಿಸುವಂತೆ ಮಾಡುವೆ

ನಾನು ಅವೆರಡನ್ನೂ ಕೊಟ್ಟೆ

ಅವರು ಅದರಲ್ಲಿ ತಳಮಳ

ವನ್ನೂ ಜೀವನದ

ನೋವನ್ನೂ ತುಂಬಿದರು

ವಿಪ್ಲವಕಾರಿಯೊಬ್ಬ ಹೇಳಿದ

ನಿನ್ನ ತುಂಬಿದ ಯೌವನ

ಬುದ್ಧಿಮತ್ತೆ, ಬಲವಾದ ಮೈಕಟ್ಟು

ನನಗೆ ಕೊಡು

ನಾನು ನಿನಗೆ ಸ್ವೇಚ್ಛೆಯನ್ನೂ

ಸ್ವಾತಂತ್ರ್ಯವನ್ನೂ ನೀಡುವೆ

ನಾನು ಅದೆಲ್ಲವನ್ನೂ ಕೊಟ್ಟೆ

ಅವರು ಅಧಿಕಾರದ ಲೋಕಲ್

ಕಮಿಟಿಯಲ್ಲಿ ಕಿತಾಪತಿ ಮಾಡಿ

ಕೊನೆಗೆ ಸಚಿವರಾದರು

ಪ್ರಿಯಕರ ಕೇಳಿದ

ಸ್ಫಟಿಕದಂತಿರುವ ನಿನ್ನ ಹೃದಯ

ಮುಗ್ಧ ಮಾತು,

ದಿಟ್ಟತನದ ನಿನ್ನ ಹೆಜ್ಜೆಗಳನ್ನು

ನನಗೆ ಕೊಟ್ಟು ಬಿಡು

ನಾನು ನಿನಗೆ ಪ್ರಣಯದ

ಸುಗಂಧವನ್ನೂ, ಸ್ನೇಹದ

ರಕ್ಷಣೆಯನ್ನೂ ನೀಡುವೆ

ನಾನವನಿಗೆ ಎಲ್ಲವನ್ನೂ ಕೊಟ್ಟೆ

ಆದರವನು ಎಲ್ಲ ಹುಡುಗಿಯ

ರೊಂದಿಗೆ ಚಕ್ಕಂದವಾಡುತ್ತಾ

ನನ್ನ ಹೃದಯವನ್ನು ಇನ್ನೊಬ್ಬಳೊಂದಿಗೆ

ಹೋಲಿಸಿ ನೋಡಿ

ಸಿಂಗಲ್ ಎಂದು ಸ್ಟೇಟಸ್ ಹಾಕಿ

ಮತ್ತೊಬ್ಬಳಿಗಾಗಿ ಅರಸುತ್ತಾ ನಡೆದ…

Advertisements

ಪಾಪದ ಹೂವು

1 ಟಿಪ್ಪಣಿ

ಆಷಾಢ ಮಾಸದ ಮಳೆ

ಯಂತೆ ಎಡೆಬಿಡದೆ

ಸುರಿದ ಕಷ್ಟಗಳು

ಮೈ ಮನವನ್ನು ಹರಿದು

ಚಿಂದಿಯಾಗಿ ಬಿಸಾಡಿದಾಗ

ಜನ ಕಣ್ಣು ಮುಚ್ಚಿ ನಕ್ಕಿದ್ದರು!

 

ಇರುಳಲ್ಲಿಯೂ, ಮರೆಯಲ್ಲಿಯೂ

ನನ್ನ ದೇಹ ಸುಖ ಅನುಭವಿಸ

ಬಂದವರು

ಹಗಲಲ್ಲಿ ಕಂಡಾಗ ಕಲ್ಲೆಸೆದರು

ದಿನಕೂಲಿ ಆಳುಗಳು

ಮಹಲಲ್ಲಿ ಕುಳಿತ ಮಹನೀಯರು

ನನ್ನ ದೇಹಕ್ಕೆ ಬೆಲೆ ಕಟ್ಟುತ್ತಾ

ಚೌಕಾಶಿ ಮಾಡಿದರು

 

ವ್ಯಾಪಾರವಲ್ಲವೇ?

ಮಾರುವವನಿಗೂ ಕೊಳ್ಳುವವನಿಗೂ

ಲಾಭವೇ ಬೇಕಿತ್ತು

ಬಿಗಿಯಾಗಿದ್ದ ನನ್ನ ರವಿಕೆಯ

ಕೊಂಡಿಗಳು ಅವರೆದುರು

ಕಳಚಿದರೆ

ಮಾತ್ರ ನನ್ನ ಕಂದಮ್ಮನಿಗೆ

ಕೈ ತುತ್ತು…

 

ಪಾಪವೋ ಪುಣ್ಯವೋ ನಾ ಕಾಣೆ

ಅವರ ಕಾಮದ ಹಸಿವಿಗೆ

ನಾ ಬೆಂದರೇನಂತೆ?

ಪಾಪುವಿನ ಹಸಿವು

ದೂರವಾಗಿತ್ತು.

 

ಸುಖ ಅನುಭವಿಸಿದವರ

ದೃಷ್ಟಿ ನನ್ನ ಕಂದಮ್ಮನ ಮೇಲೂ

ಬಿದ್ದಾಗ,

ನಡುಗಿದೆ

 

ನನ್ನ ಕೂಸು…

ವಯಸ್ಸು ಆರೇಳು

ಬಿಟ್ಟು ಬಿಡಿ ಎಂದು ಗೋಗರೆದೆ

ಉಹೂಂ…ರಕ್ಕಸರ ನರ್ತನ

ಕೈಗೆ ಸಿಕ್ಕಿದವಳು

ಅವಳು ಶವವಾದಳು

ನಾನು ಹುಚ್ಚಿಯಾದೆ…

 

ಅಲೆಮಾರಿಯಾದ ನನ್ನ

ಕಂಡ ಕಂಡವರೆಲ್ಲಾ ಸುಖಿಸಿದರು

ಬಿಟ್ಟಿಯಾಗಿ!

ಕತ್ತಲಿನ ಲೋಕದಲಿ

ನಾನೀಗ ಏಕಾಂಗಿ

 

ಕಣ್ತೆರೆದು ನೋಡಿದೆ

ಬೆಳಕು ಬಿದ್ದಿತ್ತು ಮುಖಕ್ಕೆ

ಕ್ಯಾಮೆರಾ, ಮೈಕ್ ಹಿಡಿದು

ನಿಂತಿದ್ದ ಆ ಜನರು

ಕರೆದೊಯ್ದರು

ನೇರ ಸ್ಟುಡಿಯೋಗೆ…

 

 

ಅವರ ವಾಹಿನಿಯಲ್ಲಿ

ಕ(ವ್ಯ)ಥೆ ಪ್ರಸಾರವಾಯ್ತು

ಸಾಂತ್ವನದ ಕರೆಗಳು

ಸಹಾಯದ ಹಸ್ತಗಳು

ಬಾಚಿ ತಬ್ಬಿದಾಗ

ಕಣ್ಮುಚ್ಚಿ ಕುಳಿತೆ

 

ಮೇಡಂ, ನಿಮಗೇನು ಅನಿಸುತ್ತಿದೆ?

ನಿರೂಪಕಿಯ ಪ್ರಶ್ನೆಗೆ ನಾನು

ಬೆಚ್ಚಿ, ಕಣ್ತೆರೆದೆ

 

ಟೀವಿ ಟಿಆರ್‌ಪಿ ಏರುತ್ತಲಿತ್ತು

ನಾನು ಕುಗ್ಗುತ್ತಾ ಹೋದೆ…

 

 

 

 

 

 

ಅವಸ್ಥೆ

ನಿಮ್ಮ ಟಿಪ್ಪಣಿ ಬರೆಯಿರಿ

ನಮ್ಮ ಮುರುಕಲು ಗುಡಿಸಲ ಒಳಗೆ
ಬುಡ್ಡಿ ದೀಪದ ಸುತ್ತ
ಪಿಸು ಮಾತುಗಳು ಹುಟ್ಟುವುದಿಲ್ಲ
ಸ್ನೇಹ ಮಾತ್ರ ಪಸರಿಸುವ ನಮ್ಮವರ
ಗೋಡೆ, ಬೇಲಿಗಳಲ್ಲಿ ಕಳ್ಳಿ ಗಿಡಗಳೂ ಬೆಳೆಯುವುದಿಲ್ಲ

ಹಗಲಿರುಳು ದುಡಿದ ಕೈ ಕಾಲುಗಳ
ಚಾಚಿ ಮಲಗುವೆನೆಂದರೆ
ಅಷ್ಟೂ ಜಾಗವೂ ಇಲ್ಲಿಲ್ಲ ಬಿಡಿ,
ಹೊಟ್ಟೆ ಹಸಿದಾಗ ಕೆಲವೊಮ್ಮೆ
ಪಾತ್ರೆ ತಳದಲ್ಲಿ ಗಂಜಿ ನೀರೂ ಇರುವುದಿಲ್ಲ

ನಮ್ಮೂರ ಫುಟ್‌ಪಾತ್‌ಗಳಲ್ಲಿ
ಭಿಕ್ಷೆ ಬೇಡುವ ಪುಟ್ಟ ಕೈಗಳಿಗೆ ನಾಲ್ಕಾಣೆ
ಎಸೆಯದ ನಮ್ಮವರು
ಬಾರ್, ಬೀರುಗಳಲ್ಲಿ ತುಂಬಿದ ಮದ್ಯ ಬಾಟಲು
ಬಗ್ಗಿಸಿ ಚಿಯರ್ಸ್ ಅನ್ನುತಿರುವಾಗ
ಇತ್ತ, ನಾಡ ಸಾರಾಯಿಯ ಮತ್ತಿಗೆ ಸತ್ತ
ಶವದ ಮುಂದೆ ಒಡೆದ ಬಳೆಚೂರುಗಳ ಲೆಕ್ಕವೇನು?
ತೊಟ್ಟು ಹನಿಯಿಲ್ಲದೆ ಒಣಗಿದ ಕೆರೆ ಗದ್ದೆಗಳು
ಒಂದೆಡೆ, ರೋಗ ರುಜಿನಗಳ ಸರಮಾಲೆ
ಆದರೂ ಭಾರತ ಪ್ರಕಾಶಿಸುತ್ತಿದೆ!
ಬಡವರ ರಕ್ತ ಹೀರಿದ ರಾಜಕಾರಣಿಗಳ
ಮಹಲುಗಳಲ್ಲಿ, ಡಾನ್ಸ್ ಬಾರ್‌ಗಳಲ್ಲಿ

‘ನಾವು ಬೆಳೆಯುತ್ತಿದ್ದೇವೆ’ ಎನುವರು ಅಧಿಕಾರದ
ಆಸನದಲಿ ಕುಳಿತು ಹಾಯಾಗಿ ‘ಧಣಿ’ಗಳು
ಅವರು ‘ನಮ್ಮ’  ಬಗ್ಗೆ ಹೇಳುತ್ತಿರುವರೆಂದು
ತಪ್ಪು ತಿಳಿದಿರುವಿರಿ ನೀವು…
ದಿಟ್ಟಿಸಿ ನೋಡಿ ಒಮ್ಮೆ, ಅವರು ಹೇಳಿದ್ದು 
ತಮ್ಮ ಉದರದ ಮೇಲೆ ಕೈಯಾಡಿಸುತ್ತಾ  ಅಲ್ಲವೇನೂ!

ಜೀವನದ ಹಗ್ಗ ಜಗ್ಗಾಟದೊಳು
ದಣಿದು ಬೇಸತ್ತ ಜನ ಸಾಮಾನ್ಯರು
ನಾವು, ಗಲ್ಲಿ ಗಲ್ಲಿಗಳಲ್ಲಿ ಹರಿವ
ರಕ್ತದೋಕುಳಿಯ ಹರಿವ ತಡೆಯಲೇನು?

ನಿ(ನ)ಮ್ಮ ಅಧಿಕಾರ ಹಗೆ ಹೊಗೆಯ ಮಬ್ಬಿನಲಿ
ನಮ್ಮೀ  ಗುಡಿಸಲ ಸ್ನೇಹ ಭಿತ್ತಿಯೊಳು
ನಮ್ಮವರೇ ಎದೆ ಸಿಗಿದು, ರಕ್ತ ಚಿತ್ತಾರ ಬಿಡಿಸಿದಾಗ
ರೋದನದ ನಡುವೆಯೂ, ಅಂದೊಮ್ಮೆ ನೀ ಹಾಡಿದ
‘ದೇಸ್ ಮೇರಾ ರಂಗೀಲಾ’ ಹಾಡು ನನ್ನ ಕೆಣಕಿತ್ತು.

ಮರಣವೇ ನೀನೇಕೆ ಕಾಡುವೆ?

ನಿಮ್ಮ ಟಿಪ್ಪಣಿ ಬರೆಯಿರಿ

ಮರಣವೇ ನೀನೇಕೆ  ಕಾಡುವೆ
ನಿನಗೆ ನೀಡಲು ನನ್ನೊಡಲಲ್ಲಿ
ಏನಿದೆ ಹೇಳು?

ಬರೀ ಮಾಂಸದ ಮುದ್ದೆ
ದೇಹದಲಿ, ರಕ್ತ ಹೀರಲು ಬರುವಿಯಾ ನೀನು
ಅದೂ ಖಾಲಿಯಾಗಿದೆ ಎಂದೋ

ನರವ್ಯೂಹಗಳಲ್ಲಿ ಜಾಲಾಡಿದರೆ
ನಿನಗೆ ದಕ್ಕಬಹುದು ಒಂದಿಷ್ಟು
ಧಮನಿಗಳಲ್ಲೋಡುತಿಹ ಕಿಚ್ಚಿನಾ ಕಿಡಿಗಳು
ಎಚ್ಚರಿಕೆ! ತರಬಹುದು ಇದು ನಿನಗೆ ಆಘಾತ!!

ನಾನಂದು ನಿನ್ನ ಕಾಲ್ತುಳಿತದೊಳು
ರಕ್ತ ಸುರಿಸಿ ದುಡಿದು ಬೆಂಡಾದಾಗ
ನೀರ ಪಾತ್ರೆಯನ್ನು ನನ್ನಿಂದ ಬಚ್ಚಿಟ್ಟಿವ ನೀನು

ಹೋಗಲಿ ಬಿಡು, ನಿನ್ನ ಸ್ವೇಚ್ಛೆಗೆ ಧಿಕ್ಕಾರ!
ಕಣ್ಣೀರು ಕುಡಿದಾದರೂ ನನ್ನ ದಾಹ ನೀಗಿಸುವೆ

ನಿನ್ನ ದೋಷಗಳ ಮರೆಮಾಚಲು
ನನ್ನ ಕಣ್ಣುಗಳ ಕುಕ್ಕಿ ತೆಗೆಯ ಹೊರಟಿರುವಿಯಲ್ಲಾ..
ದುಃಖಾಗ್ನಿ ಹೊಮ್ಮುತಿರುವ ಕಣ್ಣುಗುಡ್ಡೆಗಳಿಂದ
ಹರಿಯಬಹುದು, ರಕ್ತವಲ್ಲ.. ಜ್ವಾಲಾಮುಖಿ
ನಿನ್ನ ಜೀವಕೆ ಮುಳುವಾದೀತು ಜೋಕೆ!

ಮುಳ್ಳುಮಂಚದಲಿ ನನ್ನ ಕಟ್ಟಿಹಾಕಿರುವೆ
ಸತ್ಯ ಹೇಳುತ್ತಿರುವೆನೆಂದು, ನಾಲಗೆಯನೂ
ಕತ್ತರಿಸಿರುವ ರಕ್ಕಸನೆ ನೀನು

ಆದರೂ, ತಲೆಬಾಗುವುದಿಲ್ಲ ನಿನಗೆ
ನನ್ನ ಬೆರಳಕುಂಚದ ಸಾಲುಗಳ
ದಂಡನೆಯೇ ಸಾಕು ನಿನ್ನ
ಹೃದಯಕ್ಕೆ ಬೆಂಕಿಯನು ಹಚ್ಚಲು

ಎಂದೆನಿತು ನಿನ್ನ ಕಾಲಡಿಯ ಧೂಳಾಗಿಸುವ
ಹಂಬಲವೇನೋ ನಿನಗೆ?

ಧೂಳಾಗಿಸಿದರೂ ನಾನೆದ್ದು ಬರುವೆ
ಬೀಸುವ ಗಾಳಿಯಲಿ ನಿನ್ನ ಕಣ್ಣುಗಳ ಕಲುಕಲು
ನೆನಪಿರಲಿ, ನಾ ಸತ್ತರೂ ಮತ್ತೊಮ್ಮೆ ಹುಟ್ಟಿ ಬರುವೆ
ನಿನ್ನ ಹೆಣದ ಮೇಲಿನ ಅಣಬೆಯಾಗಿ.

ವಾಸ್ತವ

ನಿಮ್ಮ ಟಿಪ್ಪಣಿ ಬರೆಯಿರಿ

ಮುಂಜಾನೆ ಮಿಂದು
ದೇವರಿಗೆ ನಮಿಸುವಾಗ
ಅಮ್ಮ ಹೇಳುತ್ತಿದ್ದಳಾಗ,
ಕೈ ಮುಗಿದು ಕಣ್ಮುಚ್ಚಿ ಬೇಡಿದರೆ
ಈಶ ಒಲಿವನೆಂದು..

ಸಂಧ್ಯಾವಂದನೆ ವೇಳೆ
ದೀಪ ಉರಿಸಿ ನನ್ನ ಅಜ್ಜಿ
ರಾಮನಾಮ ಜಪಿಸುತಿರಲು
ಕಣ್ಣೆರಡು ಮುಚ್ಚಿ ನಾನೂ
ದನಿಗೂಡಿಸುತ್ತಿದ್ದೆ..

ಇರುಳ ಬಾನಂಗಳದಲ್ಲಿ
ಕೋಟಿ ತಾರೆಗಳು ಮಿನುಗುವಾಗ
ನಿದ್ದೆ ಬರುತ್ತಿಲ್ಲ ತಾತ,
ಕತೆ ಹೇಳೆಂದು ಸತಾಯಿಸಿದಾಗ
ಸುಮ್ಮನೆ ಕಣ್ಣು ಮುಚ್ಚಿರು
ನಿದ್ದೆ ತಂತಾನೆ ಬರುವುದು
ಎಂದು ಅಪ್ಪ ಗದರಿಸಿದಾಗ
ಕಣ್ಣೆರಡು ಮುಚ್ಚಿ ಮಗ್ಗಲೆಳೆದು
ಆ ಸುಂದರ ರಾತ್ರಿಗಳಲ್ಲಿ ನಿದ್ದೆಗೆ ಜಾರಿದ್ದೆ

ಬಾಲ್ಯವೆಷ್ಟು ಮಧುರವಾಗಿತ್ತು!
ಕಣ್ತೆರೆದರೆ ಸುಂದರ ಲೋಕ
ಮುಚ್ಚಿದರೆ ಸ್ವಪ್ನ ಲೋಕಕ್ಕೆ
ಪಯಣ ಬೆಳೆಸುತಲಿದ್ದೆ

ಕಾಲ ಚಕ್ರವು ತಿರುಗುತಿರಲು
ಪ್ರಸ್ತುತಕ್ಕೆ ಮೊದಲ ಹೆಜ್ಜೆಯಿಟ್ಟು,
ಸುತ್ತ ಕಣ್ಣು ಹಾಯಿಸಿದರೆ…
ಹಗೆ ಹೊಗೆಯಾಡುವ ಜಗದಲ್ಲಿ
ನಗೆ ಮಾಸಿದ ಜೋಲು ಮುಖ!
ಜೀವ ತೆಗೆಯಲು ಕತ್ತಿ ಮಸೆಯುವ ಜನ,
ಇನ್ನೊಂದೆಡೆ,
ಜೀವಕ್ಕಾಗಿ ಬೇಡುವ ಮನ
ಹಣದಾಸೆಗಾಗಿ ಜೀವ ಹಿಂಡುವವರು,
ಬೇಡುವವರು, ಮುಂದೆ ಕೈ ಚಾಚಿ

ಜಗದಳುವಿನ ಮುಂದೆ
ನಿಸ್ಸಹಾಯಕ,ಮೂಕಪ್ರೇಕ್ಷಕ ನಾನು
ಹಿಂಸೆಗಳು ಕಣ್ಮುಂದೆ ನರ್ತನವಾಡಿದರೂ
ನಾ ಬಂಧಿ, ಕಟ್ಟುಪಾಡುಗಳ ಸೆರೆಮನೆಯಲ್ಲಿ
ದನಿಯೆತ್ತಲು ಚಡಪಡಿಸಿ ಸೋತಾಗ
ಎರಡು ಹನಿ ಕಣ್ಣೀರೆರೆದು
ಮತ್ತೆ,
ನನಗಿದರ ಅರಿವೇ ಇಲ್ಲದವನಂತೆ
ಕಣ್ಣು ಮುಚ್ಚಿಕೊಳ್ಳುತ್ತೇನೆ!

ಪ್ರಸ್ತುತ

ನಿಮ್ಮ ಟಿಪ್ಪಣಿ ಬರೆಯಿರಿ

ಬೆಳಕು ಹಾಯದ ದಾರಿಯಲಿ
ಹುಟ್ಟುತ್ತವೆ ನೂರಾರು ಕನಸುಗಳು
ಕವಲೊಡೆದ ದಾರಿಯಲಿ ನಡೆವಾಗ
ಮೈ ತುಂಬಿ ನಿಂತ ಹಸಿರು ಪ್ರಕೃತಿಯ
ಉಬ್ಬು ತಗ್ಗುಗಳ ಮೇಲೆ ಸೂರ್ಯರಶ್ಮಿ
ಹಾಸು ಹುಲ್ಲುಗಳ ಮೇಲಿನ
ಇಬ್ಬನಿಯು ಪನ್ನೀರ ಚಿಮುಕುವುದು

ಸುಪ್ರಭಾತದ ರಂಗಿನೋಕುಳಿಯಲ್ಲಿ
ಭುವಿಯ ಮೇಲಿನ ಅರುಣ ರಂಗೋಲಿ
ಮಾಮರದ ಕೋಗಿಲೆಯ ಉಲಿಯುವಿಕೆಗೆ
ಹಾಲು ಹಸುವಿನ ಕೊರಳಗಂಟೆಯ  ಧ್ರುವ ತಾಳ

ಮೈ ಮರೆದಳಾಕೆ ರವಿಯ ಬಾಹುಬಂಧನದಲ್ಲಿ
ಬಿಸಿಲ ಬೇಗೆಯ ಚುಂಬನ ಬಿಸಿ ಅಧರಗಳ
ಸ್ಪರ್ಶಿಸಲು, ನಾಚಿ ನೀರಾದಳಾಕೆ
ಹೊತ್ತು ಕಳೆದಾಗ ಮುಂಗುರುಳ ನೇವರಿಸಿ
ಸಂಜೆ ಕಿರಣಕೆ ಅರಳಿದವು ಕೆಂಪು ಕೆನ್ನೆ

ತುಂಬಿದೆದೆಯಲಿ ಉಸಿರ ಬಿಗಿಹಿಡಿದು
ಮುಗಿಲು ಮೂಡಿದ ನಭವು
ತುಂಬು ಬಸಿರನು ಹೊತ್ತು ಹರುಷ ತುಂಬಿದಾಗ
ತುಂಟ ನಗೆ ಬೀರಿ ರವಿ ತಾ ಜಾರಿ
ಮುಳುಗಿದ ಸಾಗರದ ತೆಕ್ಕೆಯಲಿ

ವಿರಹ ವೇದನೆಯೊಳು ಬಾನಿಗಿಣುಕಿದಳು
ಚುಕ್ಕಿಗಳು ಕೆಣಕಿದವು
ಕಳೆದ ಗಳಿಗೆಯ ನೆನೆದು
ಬಿಕ್ಕಿ, ಅಶ್ರು ಹನಿಗೂಡಿದಾಗ
ಚಂದಿರನು ಬಂದಿದ್ದ ನೀಲಿ ಸೆರಗಿನ ಹಿಂದೆ
ಬೆಳದಿಂಗಳ ಹೊನಲು ಹರಿಸಿ
ಅಳುವ ಕನ್ಯೆಯ ಬಾಚಿ ತಬ್ಬಿದಾಗ
ಭೂ ಮಗಳು ನಾಚಿದಳು,
ಬೆಳ್ಳಿ ಹಾದರದ ಮುಗ್ಗುಲಳೆದು ನಕ್ಕಳು
ಇದುವೆ ಹಗಲಿರುಳೆಂದು..
 

ದ್ವಂದ್ವ

ನಿಮ್ಮ ಟಿಪ್ಪಣಿ ಬರೆಯಿರಿ

ನಿರೀಕ್ಷೆಗಳೇ…
ನನ್ನ
ಮನಸ್ಸಿನ ಮೂಲೆಯಲ್ಲಿ ಕೆಣಕುತ್ತಿರುವಿರೇಕೆ?
ಅತೃಪ್ತ ಜೀವನದಿ
ತೃಪ್ತಿಯ ಕೃತಕ ನಗುವನು ಚೆಲ್ಲಿ
ಮುಸುಕೆಳೆದು ಮಲಗಿದರೂ
ಕಾಲ ಬುಡದಲ್ಲಿ ಬಂದು ಮಲಗುವಿರೇಕೆ ನೀವುಗಳು?

ಪ್ರತೀಕ್ಷೆಗಳೇ…..
ಬರಡು ಜೀವನವೆಂದು ಬಿಕ್ಕಿ,
ಕಣ್ಣ ಹನಿ ಉಕ್ಕಿದಾಗ
ಭೂತಕಾಲದ ನಗುವ ಸೆಲೆಯನು
ವರ್ತಮಾನದ ತೀರಗಳಿಗಪ್ಪಳಿಸಿ
ಭವಿಷ್ಯದ ಹಾಲನೊರೆಯಲಿ ಸಿಹಿಯುಣಿಸುವಿರೇಕೆ?

ಪರೀಕ್ಷೆಗಳೇ…
ನಾಲ್ಕು ದಿನದ ಜೀವನವು
ಬೇವು ಬೆಲ್ಲ, ಹಾವು ಹೂವಿನ ಹಾದರವು
ಇದುವೆಂದು ಕಲಿಸುವ ಗುರುಗಳೇ..

ದಿನವೂ ಬರುವಿರಿ ಕ್ಷಣ ಕ್ಷಣದ ಹೆಜ್ಜೆಯಲಿ
ಗುರುತ ಮೂಡಿಸಿ
ಮತ್ತೊಮ್ಮೆ ಛೇಡಿಸಿ,
ಜೀವನದ ನಕ್ಷೆಯಲಿ ಮೈಲಿಗಲ್ಲುಗಳಂತೆ
ಹುಟ್ಟುಹಾಕುವಿರಿ ಅನುಭವದ ಒರತೆಯನು
ಕಟ್ಟಿ ಹಾಕುವಿರಿ ಪ್ರೀತಿ-ದ್ವೇಷದ ಸರಪಳಿಯಲ್ಲಿ
ಜೀವನವ ತೇಯ್ದು ತೆವಳುವಾಗ…
ಇದನೇನೆಂದು ಕೊಳ್ಳಲಿ ಶಿಕ್ಷೆಯೇ?
ಅಥವಾ ಬದುಕಲಿರುವ ಅಪೇಕ್ಷೆಯೇ???

Older Entries