marriage

ನೆಯಲ್ಲಿ ವಯಸ್ಸಿಗೆ ಬಂದ ಹೆಣ್ಮಕ್ಕಳು ಇದ್ದಾರೆ ಎಂದರೆ ಅಪ್ಪ ಅಮ್ಮನ ಚಿಂತೆ ಜಾಸ್ತಿಯಾಗುತ್ತಾ ಹೋಗುತ್ತೆ. ಮಗಳಿಗೆ ಗಂಡು ಹುಡುಕಬೇಕಾದ ಜವಾಬ್ದಾರಿ ಒಂದೆಡೆಯಾದರೆ, ಮಗಳ ಮದ್ವೆ ಯಾವಾಗ? ಎಂದು ವಿಚಾರಿಸುವ ನೆರೆಕೆರೆ ಸಂಬಂಧಿಕರ ಪಿರಿಪಿರಿ ಬೇರೆ. ನನಗೆ ಈಗ ಮದ್ವೆ ಬೇಡಪ್ಪಾ…ನಾನು ಇನ್ನೂ ಓದ್ಬೇಕು. ನನ್ನ ಕಾಲಿನ ಮೇಲೆ ನಾನೇ ನಿಂತುಕೊಳ್ಳಬೇಕು ಎಂಬ ಹಠ ಮಗಳದ್ದು. ಅಪ್ಪ ಅಮ್ಮ ಮಗಳ ನಿರ್ಧಾರಕ್ಕೆ ಹೂಂ ಅಂದು ಬಿಡುತ್ತಾರೆ. ಆದ್ರೆ ಈ ಸಂಬಂಧಿಕರು ಬಿಡಬೇಕಲ್ವಾ? ಇನ್ನೆಷ್ಟು ಓದಿಸ್ತೀರಾ? ಈಗ ಕೆಲಸವೂ ಸಿಕ್ಕಿ ಆಯ್ತು. ಒಳ್ಳೆ ಮನೆತನ ನೋಡಿ ಮದ್ವೆ ಮಾಡಿಬಿಡಿ ಎಂಬ ಉಪದೇಶವನ್ನು ಕೊಡುತ್ತಾ ಇರುತ್ತಾರೆ. ಅದರಲ್ಲಿ ಕೆಲವರು, ಮಗಳು ಮದ್ವೆ ಈಗ ಬೇಡ ಅಂತಿದ್ದಾಳಲ್ಲಾ? ಅವಳಿಗೆ ಲವ್ವು ಗಿವ್ವು ಏನಾದ್ರೂ ಆಗಿದೆಯಾ ಅಂತ ವಿಚಾರಿಸಿ. ಈಗಿನ ಮಕ್ಕಳಲ್ವಾ…ಅವರು ಜಾತಿ ಗೀತಿ ಏನೂ ನೋಡಲ್ಲ. ಅವರಿಗೆ ಹುಡುಗ ಇಷ್ಟ ಆದ ಅಂದ್ರೆ ಮುಗೀತು. ಕೈಯಲ್ಲಿ ಕೆಲಸ ಇದೆ, ಒಳ್ಳೆ ಸಂಬಳವೂ ಇದೆ ಹೀಗಿರುವಾಗ ಜೀವನ ಮಾಡಲು ಕಷ್ಟ ಏನೂ ಇಲ್ಲ ಎಂದು ತಮಗಿಷ್ಟವಾದ ಹುಡುಗನ ಜತೆ ಮದ್ವೆ ಮಾಡಿಕೊಳ್ಳಾರೆ ಎಂದು ಇದೇ ರೀತಿ ಮದ್ವೆ ಆದ ಹೆಣ್ಮಕ್ಕಳ ಕತೆಗಳನ್ನು ಉದಾಹರಣೆ ಸಮೇತಕೊಟ್ಟು ಅಪ್ಪ ಅಮ್ಮನ ಮನಸ್ಸಲ್ಲಿ ಆತಂಕ ಸೃಷ್ಟಿಸುತ್ತಾರೆ. ಮದ್ವೆ ವಯಸ್ಸಿಗೆ ಬಂದ ಮಗಳು ದೂರದ ಊರಲ್ಲಿ ದುಡಿಯುತ್ತಿದ್ದರೆ ಮತ್ತೆ ಹೇಳ್ಬೇಕಾ? ಇಂಥದ್ದೇ ಕತೆಗಳಿಗೆ ಇನ್ನಷ್ಟು ಉಪ್ಪು ಖಾರ ಬೆರೆಸಿ ಹೇಳಿ ಕೊಡುವ ಸಂಬಂಧಿಕರು ಪ್ರತೀ ಕುಟುಂಬದಲ್ಲೂ ಇದ್ದೇ ಇರ್ತಾರೆ. ಹೇಗೋ ಮಗಳ ಮದ್ವೆ ಮಾಡಿಸಿದರಾಯ್ತು ಎಂದು ಮನೆಯವರು ವರಾನ್ವೇಷಣೆಗೆ ತೊಡಗುತ್ತಾರೆ.

ವರಾನ್ವೇಷಣೆ ಎಂಬುದು ಹೆಣ್ಣು ಹೆತ್ತವರ ಪಾಲಿಗೆ ದೊಡ್ಡ ಸವಾಲು. ಮ್ಯಾರೇಜ್ ಬ್ರೋಕರ್‌ಗಳು, ಸುದ್ದಿ ಪತ್ರಿಕೆಯಲ್ಲಿ ಮ್ಯಾಟ್ರಿಮನಿ ಪೇಜ್, ಮ್ಯಾರೇಜ್ ಬ್ಯೂರೋ, ಮ್ಯಾಟ್ರಿಮೋನಿ ಸೈಟ್ ಎಲ್ಲೆಂದರಲ್ಲಿ ಸೂಕ್ತವರನಿಗಾಗಿ ಹುಡುಕಾಟ ಆರಂಭವಾಗುತ್ತದೆ. ಈ ಹುಡುಕಾಟವೂ ಇಂಟರೆಸ್ಟಿಂಗ್ ಆಗಿರುತ್ತದೆ. ಹುಡುಕಾಟದ ಫಸ್ಟ್ ಸ್ಟೆಪ್ ಅಂದ್ರೆ ಫೋಟೋ.ಅಪ್ಪ ಅಮ್ಮ ಮೊದಲು ಹುಡುಗಿಯ ಪೋಸ್ಟ್ ಕಾರ್ಡ್ ಸೈಜ್ ಫೋಟೋ ರೆಡಿ ಮಾಡಿಟ್ಟುಕೊಳ್ಳುತ್ತಾರೆ. ಸ್ಟುಡಿಯೋಗೆ ಹೋಗಿ ಪೋಸ್ಟ್ ಕಾರ್ಡ್ ಸೈಜ್ ಫೋಟೋ ತೆಗಿಬೇಕು ಅಂದ ಕೂಡಲೇ ಫೋಟೋಗ್ರಾಫರ್‌ಗೆ ಇದು ವರಾನ್ವೇಷಣೆಗೆ ಇರುವ ಫೋಟೋ ಎಂದು ಗೊತ್ತಾಗಿ ಬಿಡುತ್ತದೆ. ಇಂಥಾ ಫೋಟೋಗಳಲ್ಲಿ ಹುಡುಗಿ ಸೀರೆ ಉಟ್ಟ ಫೋಟೋ ಬೇಕೇ ಬೇಕು. ಫೋಟೋ ತೆಗೆದಾದ ಮೇಲೆ ಅದರ ಪ್ರತಿ ಬ್ರೋಕರ್ ಕೈಗೆ ಸಿಕ್ಕಿ, ವಧು ಅನ್ವೇಷಣೆ ಮಾಡುವ ಹುಡುಗನ ಕುಟುಂಬಗಳ ಮುಂದೆ ಇದು ಹೇಗಿದೆ ನೋಡಿ…ಎಂಬ ಪ್ರಶ್ನೆಯೊಂದಿಗೆ ತೋರಿಸಲ್ಪಟ್ಟಿರುತ್ತದೆ. ಮ್ಯಾರೇಜ್ ಬ್ಯೂರೋಗಳಲ್ಲಿ ಅದೂ ನಮ್ಮ ಜಾತಿ ಸಮುದಾಯಕ್ಕೆ ಸೇರಿದ ಮ್ಯಾರೇಜ್ ಬ್ಯೂರೋದ ಫೈಲ್‌ನಲ್ಲಿ ಹುಡುಗಿಯ ವಿವರಗಳೊಂದಿಗೆ ಪಿನ್ ಹಾಕಲ್ಪಡುವಾಗ ರಿಜಿಸ್ಟ್ರೇಷನ್ ಹಣ ಪಾವತಿಸಿದ ರಸೀದಿ ಅಪ್ಪನ ಕೈಯಲ್ಲಿರುತ್ತದೆ. ಸುದ್ದಿ ಪತ್ರಿಕೆಗಳಲ್ಲಿ ಮ್ಯಾಟ್ರಿಮನಿ ಪೇಜ್‌ನಲ್ಲಿ ಜಾಹೀರಾತು ಕೊಟ್ಟದ್ದಕ್ಕೆ ಒಂದಿಷ್ಟು ಹಣ ಖರ್ಚಾದರೆ, ಮ್ಯಾಟ್ರಿಮನಿ ವೆಬ್‌ಸೈಟ್‌ಗಳಲ್ಲಿ ರಿಜಿಸ್ಟರ್ ಮಾಡಿ, ಸ್ವಲ್ಪ ದುಡ್ಡುತೆತ್ತು ಬೆಸ್ಟ್ ಪ್ರೊಫೈಲ್‌ಗಳನ್ನು ಹುಡುಕುವ ಕಾಯಕ ಆರಂಭವಾಗುತ್ತದೆ. ನಮ್ಮ ದೇಶದಲ್ಲಿ 1,267,401,849ಕ್ಕಿಂತಲೂ ಹೆಚ್ಚಿರುವ ಜನಸಂಖ್ಯೆಯಲ್ಲಿ ತಮ್ಮ ಮಗಳಿಗೆ ಯೋಗ್ಯವಾದ ಅವಿವಾಹಿತ ಹುಡುಗನೊಬ್ಬ ಸಿಗುತ್ತಿಲ್ಲವಲ್ಲಾ ಎಂದು ಹೆಣ್ಣು ಹೆತ್ತವರಿಗೆ ಬೇಸರ ಆವರಿಸುವುದು ಈ ಹೊತ್ತಲ್ಲೇ. ಅದರಲ್ಲೂ ನಮ್ಮ ದೇಶದಲ್ಲಿ ಮದ್ವೆಯಾಗುವುದು, ಮದ್ವೆ ಮಾಡಿಸುವುದು ಎಂದರೆ ಅಷ್ಟು ಸುಲಭದ ವಿಷಯವಲ್ಲ ಎಂಬುದು ಗೊತ್ತಿರುವ ವಿಷಯವೇ.

ಇತ್ತೀಚೆಗೆ ವಾಟ್ಸಾಪ್ ನಲ್ಲಿ ಬಂದ ಸಂದೇಶವೊಂದರಲ್ಲಿ If u want to know how divided we r, just look at matrimonial page of our newspaper – ಎಂಬ ಒನ್‌ಲೈನರ್ ನನ್ನ ಗಮನ ಸೆಳೆಯಿತು ಎಷ್ಟು ನಿಜ ಅಲ್ವಾ ಇದು. ನಾವೆಲ್ಲರೂ ಒಂದೇ ಎಂದು ಕೂಗಿ ಕೂಗಿ ಹೇಳುತ್ತೇವೆ. ಆದ್ರೆ ಮದ್ವೆ ವಿಷಯಕ್ಕೆ ಬಂದಾಗ ಮಾತ್ರ ಅಲ್ಲಿ ಜಾತಿ ಎದ್ದು ನಿಲ್ಲುತ್ತದೆ. ಪ್ರೀತಿಸುವಾಗ ಜಾತಿ ನೋಡದವರು ಮದ್ವೆ ವಿಷಯ ಬಂದ ಕೂಡಲೇ ಧರ್ಮ, ಜಾತಿ, ಉಪಜಾತಿಗಳ ಬಗ್ಗೆ ತಕರಾರು ಎತ್ತಲು ಶುರುಮಾಡುತ್ತಾರೆ. ಮ್ಯಾಟ್ರಿಮನಿ ಪೇಜ್‌ನಲ್ಲೇ ನೋಡಿ ಜಾತಿ ಜಾತಿಗೂ ಅಲ್ಲೊಂದು ಬಾಕ್ಸ್ ಇರುತ್ತದೆ. ಅದರೆಡೆಯಲ್ಲಿ ಕಾಸ್ಟ್ ನೋ ಬಾರ್ ಎಂದು ಬರೆದಿರುವ ಪ್ರೊಫೈಲ್ ಗಳೂ ಇರುತ್ತವೆ. ಇಂಥಾ ಪ್ರೊಫೈಲ್ ಕಣ್ಣಿಗೆ ಬಿದ್ದ ಕೂಡಲೇ ಅವನ್ಯಾಕೆ/ ಅವಳ್ಯಾಕೆ ಬೇರೆ ಜಾತಿಯವರನ್ನು ಮದ್ವೆ ಆಗುತ್ತಿದ್ದಾರೆ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಏನೋ ಸಮಸ್ಯೆ ಇರಬೇಕು ಇಲ್ಲಾಂದ್ರೆ ಬೇರೆ ಜಾತಿಯ ಹುಡುಗ/ ಹುಡುಗಿಯನ್ನು ಹುಡುಕುವುದೇತಕ್ಕೆ ಎಂಬ ಯೋಚನೆಯೇ ಮೊದಲು ಬರುತ್ತದೆ ಬಿಟ್ರೆ ಆತ(ಆಕೆ) ಜಾತಿಯ ಪರದೆ ಸರಿಸಿ ಹೊರಗೆ ಬರುತ್ತಿದ್ದಾರೆ ಎಂಬುದನ್ನು ನಾವು ಯೋಚಿಸುವುದೇ ಇಲ್ಲ!

ಆದಾಗ್ಯೂ, ಅರೇಂಜ್ಡ್ ಮ್ಯಾರೇಜ್‌ಗಳಲ್ಲಿನ ಜಾತಿ ವಿಷಯ ಒಂದಾದರೆ ಲವ್ ಮ್ಯಾರೇಜ್‌ಗಳಲ್ಲಿ ಸಮಸ್ಯೆ ಹುಟ್ಟುಹಾಕುವುದೇ ಈ ಜಾತಿ. ಈ ಜಾತಿಯಿಂದಾಗಿ ಎಷ್ಟೋ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮದ್ವೆ ಮುರಿದು ಬಿದ್ದಿದೆ, ಮದ್ವೆ ಆಗದೇ ಉಳಿದುಕೊಂಡವರೂ ಇದ್ದಾರೆ, ಮರ್ಯಾದಾ ಹತ್ಯೆಗಳ ಸಂಖ್ಯೆಯೂ ಕಮ್ಮಿ ಏನಿಲ್ಲ. ಎಲ್ಲರ ವಿರುದ್ಧ ಕಟ್ಟಿಕೊಂಡು ಜಾತಿ ಧರ್ಮಗಳನ್ನು ಮೀರಿ ಪ್ರೀತಿಗೆ ಜೈ ಎಂದವರೂ ಇದ್ದಾರೆ. ಆದರೆ ನಮ್ಮ ಸಮಾಜದಲ್ಲಿ ಜಾತಿಯನ್ನು ಮೀರಿ ಬದುಕುವುದು ಸುಲಭದ ವಿಷಯವಂತೂ ಅಲ್ಲ. ನನಗ್ಯಾವ ಜಾತಿ ಇಲ್ಲ, ನಾನು ಮನುಷ್ಯ ಜಾತಿ ಎಂದು ಹೇಳಿ ನೋಡಿ, ಎಲ್ಲರೂ ಹುಬ್ಬೇರಿಸುತ್ತಾರೆ. ಇರುವುದೆರಡೇ ಜಾತಿ. ಒಂದು ಹೆಣ್ಣು ಒಂದು ಗಂಡು ಎಂದು ಪದೇ ಪದೇ ಹೇಳಿದರೂ ಈ ಎರಡು ಜಾತಿಗಳ ಮದ್ವೆ ಅಷ್ಟು ಸುಲಭದಲ್ಲಿ ಆಗುವುದಿಲ್ಲ. ಮದ್ವೆಗಳು ಅಷ್ಟೊಂದು ಸುಲಭದಲ್ಲಿ ಆಗುತ್ತಿದ್ದರೆ ಏನಾಗುತ್ತಿತ್ತು?

ಮದ್ವೆ ಆಗಲೇಬೇಕು…ಇಂದಲ್ಲದಿದ್ದರೆ ನಾಳೆ…ಆದರೆ ಷರತ್ತುಗಳು ಅನ್ವಯಿಸುತ್ತವೆ!

Advertisements